ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನ 353 ಮಂದಿಗೆ ಲಸಿಕೆ; ಶೇ 50ರಷ್ಟು ಮಂದಿ ಭಾಗಿ

ನಾಲ್ವರಿಗೆ ಅಲ್ಪ ಆರೋಗ್ಯ ಸಮಸ್ಯೆ
Last Updated 16 ಜನವರಿ 2021, 14:54 IST
ಅಕ್ಷರ ಗಾತ್ರ

ರಾಮನಗರ: ಬಹುನಿರೀಕ್ಷಿತ ಕೋವಿಡ್ ಲಸಿಕೆ ಅಭಿಯಾನಕ್ಕೆ ಶುಕ್ರವಾರ ಜಿಲ್ಲೆಯಾದ್ಯಂತ ಚಾಲನೆ ದೊರೆಯಿತು. ಮೊದಲ ದಿನದಂದು 350 ಮಂದಿ ಲಸಿಕೆ ಪಡೆದುಕೊಂಡರು.

ಜಿಲ್ಲೆಯ ಎಂಟು ಆರೋಗ್ಯ ಕೇಂದ್ರಗಳಲ್ಲಿ ಬೆಳಗ್ಗೆ ಏಕಕಾಲಕ್ಕೆ ಲಸಿಕೆ ಕಾರ್ಯಕ್ರಮ ಆರಂಭಗೊಂಡಿತು. ಜಿಲ್ಲೆಗೆ ಹಿಂದಿನ ದಿನವೇ ಬಂದಿದ್ದ ಕೋವಿಶೀಲ್ಡ್ ಲಸಿಕೆಯನ್ನು ಆರೋಗ್ಯ ವಲಯದ ಆಯ್ದ ಮಂದಿಗೆ ಚುಚ್ಚುಮದ್ದಿನ ರೂಪದಲ್ಲಿ ನೀಡಲಾಯಿತು. ನಂತರ ಅವರನ್ನು ಅರ್ಧ ಗಂಟೆ ಕಾಲ ನಿಗಾದಲ್ಲಿ ಇಡಲಾಯಿತು. ಎರಡು ಕೇಂದ್ರಗಳಲ್ಲಿ ಒಟ್ಟು ನಾಲ್ವರಿಗೆ ಸಣ್ಣಪುಟ್ಟ ಸಮಸ್ಯೆ ಕಾಣಿಸಿಕೊಂಡಿದ್ದು ಬಿಟ್ಟರೆ, ಲಸಿಕೆ ಪಡೆದ ಯಾರಿಗೂ ಹೆಚ್ಚಿನ ತೊಂದರೆ ಆಗಲಿಲ್ಲ.

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇಕ್ರಂ ಜಿಲ್ಲಾಸ್ಪತ್ರೆಯಲ್ಲಿ ಹಾಜರಿದ್ದು ಲಸಿಕೆ ಪ್ರಕ್ರಿಯೆಗಳ ಮೇಲೆ ನಿಗಾ ವಹಿಸಿದರು.ಈ ಸಂದರ್ಭ ಜಿಲ್ಲಾಧಿಕಾರಿ ಮಾತನಾಡಿ ‘ಜಿಲ್ಲೆಯಲ್ಲಿ ಒಟ್ಟು ಎಂಟು ಕೇಂದ್ರಗಳನ್ನು ಗುರುತಿಸಲಾಗಿದ್ದು, ಪ್ರತಿ ಕೇಂದ್ರದಲ್ಲಿ ನಿತ್ಯ 100 ಮಂದಿಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ಪಡೆಯಲು ಗುರುತಿಸಿರುವ ಪ್ರತಿಯೊಬ್ಬರಿಗೂ ದೂರವಾಣಿ ಮೂಲಕ ಈಗಾಗಲೇ ಮಾಹಿತಿ ನೀಡಿದ್ದೇವೆ. ಲಸಿಕೆ ಪಡೆದುಕೊಂಡಿರುವವರ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಅವರೆಲ್ಲರನ್ನೂ ಅರ್ಧ ಗಂಟೆ ಕಾಲ ನಿಗಾದಲ್ಲಿಟ್ಟು ಗಮನ ವಹಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ಲಸಿಕೆ ಕಾರ್ಯಕ್ರಮ ನಿಗಾ ವಹಿಸಲು ಎಇಎಫ್‍ಐ ಎಂಬ ತಂಡವನ್ನು ರಚಿಸಿದ್ದೇವೆ. ಲಸಿಕೆ ಪಡೆದ ನಂತರ ದೇಹದಲ್ಲಿ ಯಾವುದೇ ಬದಲಾವಣೆಯಾದರೆ, ಅಂತಹವರ ಆರೈಕೆಗೆ ತಜ್ಞ ವೈದ್ಯರ ತಂಡ ನೇಮಕ ಮಾಡಿದ್ದೇವೆ. ತುರ್ತು ಚಿಕಿತ್ಸೆ ಸಲುವಾಗಿ ಪ್ರತಿ ಕೇಂದ್ರದಲ್ಲೂ ಆಂಬುಲೆನ್ಸ್‌ಗಳನ್ನು ಸಜ್ಜಾಗಿಟ್ಟುಕೊಂಡಿದ್ದೇವೆ. ದಯಾನಂದ ಸಾಗರ್ ಮೆಡಿಕಲ್ ಕಾಲೇಜಿನಲ್ಲಿ 20 ಹಾಸಿಗೆಗಳನ್ನು ತುರ್ತು ಚಿಕಿತ್ಸೆಗೆಂದು ಮೀಸಲಿಟ್ಟಿದ್ದೇವೆ ಎಂದರು.

ಮೋದಿ ಭಾಷಣ ವೀಕ್ಷಣೆ: ಜಿಲ್ಲಾಸ್ಪತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹಿರಿಯ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಜನರೊಂದಿಗೆ ಕುಳಿತು ಕಾರ್ಯಕ್ರಮ ವೀಕ್ಷಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಿರಂಜನ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಪದ್ಮಾ ಮತ್ತಿತರರು ಇದ್ದರು.

ಮೊದಲ ಲಸಿಕೆಯ ಗೌರವ

ಜಿಲ್ಲಾಸ್ಪತ್ರೆಯ ಡಿ ಗ್ರೂಪ್ ನೌಕರ ಸದಾನಂದ ಜಿಲ್ಲೆಯಲ್ಲಿ ಮೊದಲ ಕೋವಿಡ್ ಲಸಿಕೆ ಪಡೆದ ಕೀರ್ತಿಗೆ ಪಾತ್ರರಾದರು. ಲಸಿಕೆ ಪಡೆದ ಅರ್ಧ ಗಂಟೆ ನಿಗಾದಲ್ಲಿದ್ದ ಅವರು ನಂತರ ಗೆಲುವಿನ ಚಿಹ್ನೆ ತೋರಿಸುವ ಮೂಲಕ “ನಾನು ಫಿಟ್ ಆಗಿದ್ದೇನೆ” ಎಂಬ ಸಂದೇಶ ನೀಡಿದರು. ಆರೋಗ್ಯ ಇಲಾಖೆಯ ಅಧಿಕಾರಿಗಳು ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಹುರಿದುಂಬಿಸಿದರು.

ಮೊದಲ ದಿನದ ಲಸಿಕೆ ಗುರಿ ಸಾಧನೆ

ಆಸ್ಪತ್ರೆ; ಗುರಿ; ಸಾಧನೆ; ಶೇಕಡವಾರು

ರಾಮಕೃಷ್ಣ ಆಸ್ಪತ್ರೆ; 84; 53; 60%
ಮಾಗಡಿ ಸರ್ಕಾರಿ ಆಸ್ಪತ್ರೆ; 100; 20; 20%
ಇಗ್ಗಲೂರು ಆರೋಗ್ಯ ಕೇಂದ್ರ; 49;49; 100%
ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆ; 100; 10; 10%
ಕನಕಪುರ ನಗರ ಪ್ರಾ.ಆ.ಕೇಂದ್ರ: 63; 40; 63%
ದಯಾಸಾಗರ್‌: 100; 75; 75%
ಜಿಲ್ಲಾಸ್ಪತ್ರೆ; 100; 39; 39%
ಕನಕಪುರ ಮೆಟರ್ನಿಟಿ ಆಸ್ಪತ್ರೆ; 100; 67; 67%
ಒಟ್ಟು; 696; 353; 50.7%

***

ಲಸಿಕೆಯ ಮೊದಲ ದಿನದ ಪ್ರಕ್ರಿಯೆ ಸುಗಮವಾಗಿತ್ತು. ಯಾರಲ್ಲಿಯೂ ತೀವ್ರತರದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿಲ್ಲ

- ಎಂ.ಎಸ್. ಅರ್ಚನಾ,ಜಿಲ್ಲಾಧಿಕಾರಿ

***

ಲಸಿಕೆ ಪಡೆಯುವ ಆರಂಭದಲ್ಲಿ ಕೊಂಚ ಆತಂಕ ಆಯಿತು. ಆದರೆ ಇಂಜೆಕ್ಷನ್‌ ಪಡೆದ ಬಳಿಕ ಯಾವುದೇ ತೊಂದರೆ ಆಗಲಿಲ್ಲ

- ಸದಾನಂದ,ಮೊದಲ ಲಸಿಕೆ ಪಡೆದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT