ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಸಿಕೆ ಪಡೆಯಲು ಹಿಂಜರಿಕೆ ಬೇಡ’

ಮೂರು ದಿನಗಳ ಕೋವಿಡ್ ಲಸಿಕಾ ಉತ್ಸವಕ್ಕೆ ಜಿಲ್ಲಾಧಿಕಾರಿ ಚಾಲನೆ
Last Updated 11 ಏಪ್ರಿಲ್ 2021, 13:36 IST
ಅಕ್ಷರ ಗಾತ್ರ

ರಾಮನಗರ: ‘ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆದುಕೊಳ್ಳುವುದರ ಜೊತೆಗೆ ತಮ್ಮ ಸುತ್ತಮುತ್ತಲಿನ ಜನರಿಗೂ ಸಹ ಲಸಿಕೆ ಪಡೆದುಕೊಳ್ಳುವಂತೆ ಪ್ರೇರೇಪಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ. ರಾಕೇಶ್ ಕುಮಾರ್ ತಿಳಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಕೋವಿಡ್ ಲಸಿಕಾ ಉತ್ಸವಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು. ಕೋವಿಡ್ ಲಸಿಕೆ ಪಡೆದರೆ ಎರಡರಿಂದ ಮೂರು ದಿನ ವಿಶ್ರಾಂತಿ ಪಡೆಯಬೇಕು, ಮೈ,ಕೈ ನೋವು, ಜ್ವರ ಬರುತ್ತದೆ. ಕೆಲಸ ಹಾಗೂ ಹಬ್ಬ ಇದೆ ಎಂದು ಲಸಿಕೆ ಪಡೆಯುವ ಕೆಲಸವನ್ನು ಮುಂದೂಡಬೇಡಿ‌. ಕೋವಿಡ್ ಯಾವ ರೀತಿ ಯಾವ ಸಮಯದಲ್ಲಿ ಬರುತ್ತದೆ‌ ಎಂದು ಹೇಳಲು ಸಾಧ್ಯವಿಲ್ಲ. ಹೆಚ್ಚಿನ ಜನರು ಲಸಿಕೆ ಪಡೆಯುವುದರಿಂದ ಹೆಡ್9 ಇಮ್ಯುನಿಟಿ ಉಂಟಾಗುತ್ತದೆ .ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದರು.

ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಜಿಲ್ಲೆಯಲ್ಲಿ ಲಸಿಕೆ ಪಡೆದು ಅಡ್ಡ ಪರಿಣಾಮಗಳು ಉಂಟಾಗಿರುವ ಪ್ರಕರಣ ವರದಿಯಾಗಿರುವುದಿಲ್ಲ. ಸಾರ್ವಜನಿಕರು ಭಯ, ಹಿಂಜರಿಕೆ ಬಿಟ್ಟು ಧೈರ್ಯದಿಂದ ಲಸಿಕೆ ಪಡೆದುಕೊಳ್ಳಿ ಎಂದರು.

ಜಿಲ್ಲೆಯಲ್ಲಿ ಮೊದಲು 76 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿತ್ತು. ಈಗ ಆರೋಗ್ಯ ಉಪ ಕೇಂದ್ರಗಳಲ್ಲೂ ಲಸಿಕೆ ನೀಡಲಾಗುತ್ತಿದೆ. ಕೆಲವು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯುವವರ ಸಂಖ್ಯೆ ಕಡಿಮೆಯಾಗಿದೆ. ಅಂತಹ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕಳೆದ ಸಾಲಿನಲ್ಲಿ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಜನರು ಬಹಳ ಮುನ್ನೆಚ್ಚರಿಕೆ ವಹಿಸುತ್ತಿದ್ದರು. ಮಾಸ್ಕ್ ಧರಿಸುತ್ತಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದರು. ಈಗ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಮಾಸ್ಕ್ ಧರಿಸುತ್ತಿಲ್ಲ. ಜಿಲ್ಲೆಯಲ್ಲಿ ಪ್ರತಿದಿನ ಅಂದಾಜು ₨46 ಸಾವಿರದಷ್ಟು ದಂಡ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರ ಆರೋಗ್ಯ ಕಪಾಡುವುದು ಜಿಲ್ಲಾಡಳಿತದ ಉದ್ದೇಶವಾಗಿದೆ. ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ತಂಡ ರಚಿಸಿ, ಜನದಟ್ಟಣೆ ಪ್ರದೇಶದಲ್ಲಿ ಮಾಸ್ಕ್ ಧರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು‌. ಜನರು ಮಾಸ್ಕ್ ಧರಿಸದಿದ್ದಲ್ಲಿ, ಸರ್ಕಾರದ ನಿಯಮದಂತೆ ದಂಡ ವಿಧಿಸಲಾಗುವುದು ಎಂದರು.

ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ. ತಾಲ್ಲೂಕುಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಲು ಕ್ರಮ ವಹಿಸಲಾಗಿದೆ. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಈ ಹಿಂದಿನ ಒಪ್ಪಂದಂತೆ 600 ಹಾಸಿಗೆಯನ್ನು ಜಿಲ್ಲೆಯ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಕಾಯ್ದಿರಿಸಲಾಗಿದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಪದ್ಮಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಶಿಧರ್, ರಾಮನಗರ ನಗರಸಭೆ ಆಯುಕ್ತ ನಂದಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT