ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ವರ್ಷ ಮೇಲಿನ ಎಮ್ಮೆ, ಕೋಣ ವಧೆಗೆ ಅವಕಾಶ: ಸಚಿವ ಪ್ರಭು ಚವಾಣ್‌ ಸ್ಪಷ್ಟನೆ

Last Updated 16 ಫೆಬ್ರುವರಿ 2021, 4:02 IST
ಅಕ್ಷರ ಗಾತ್ರ

ರಾಮನಗರ: ‘ರಾಜ್ಯದಲ್ಲಿ ಗೋ ಹತ್ಯೆ ನಿಷೇಧದಿಂದ ಮೃಗಾಲಯದ ಪ್ರಾಣಿಗಳಿಗೆ ಆಹಾರದ ಕೊರತೆ ಎದುರಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. 13 ವರ್ಷ ಮೇಲಿನ ಎಮ್ಮೆ ಇಲ್ಲವೇ ಕೋಣಗಳ ಹತ್ಯೆಗೆ ಕಾಯ್ದೆಯಲ್ಲೇ ಅವಕಾಶ ಇದೆ’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌ ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯದಲ್ಲಿ ಗೋವುಗಳ ಜೊತೆಗೆ ಇತರ ಜಾನುವಾರುಗಳನ್ನೂ ಒಳಗೊಂಡು ಹತ್ಯೆ ಪ್ರತಿಬಂಧಕ ಕಾಯ್ದೆ ಜಾರಿಗೊಂಡಿದೆ. ಇದರ ಅನ್ವಯ ಗೋವಿನ ಜೊತೆಗೆ ಎಮ್ಮೆ, ಎತ್ತು ಸೇರಿದಂತೆ ಬೇರೆ ಜಾನುವಾರುಗಳನ್ನೂ ಕೊಲ್ಲುವಂತಿಲ್ಲ. ಈ ಹಿಂದೆ ಮೃಗಾಲಯಗಳ ಪ್ರಾಣಿಗಳಿಗೆ ಜಾನುವಾರು ಮಾಂಸ ಪೂರೈಸಲಾಗುತ್ತಿತ್ತು. ಕಾಯ್ದೆ ಜಾರಿಗೆ ಬಂದ ನಂತರ ತೊಂದರೆ ಆಗಿರುವ ಕುರಿತು ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿಲ್ಲ. 13 ವರ್ಷ ಮೇಲಿನ ಎಮ್ಮೆ–ಕೋಣಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಒಪ್ಪಿಗೆ ಪತ್ರ ಪಡೆದು ವಧೆ ಮಾಡಬಹುದಾಗಿದೆ. ಆದರೆ ಗೋವುಗಳನ್ನು ಕೊಲ್ಲಲು ಅನುಮತಿ ಇಲ್ಲ’ ಎಂದರು.

‘1964ರ ಕಾಯ್ದೆಗೆ ತಿದ್ದುಪಡಿ ತಂದು ಜಾನುವಾರು ಹತ್ಯೆ ನಿಷೇಧ ಮಾಡಲಾಗಿದೆ. ಗೋಹತ್ಯೆ ಮಾಡುವವರಿಗೆ ದಂಡದ ಪ್ರಮಾಣವು 1 ಸಾವಿರ ರೂಪಾಯಿಯಿಂದ 5 ಲಕ್ಷ ರೂಪಾಯಿವರೆಗೆ ಹಾಗೂ ಶಿಕ್ಷೆ ಪ್ರಮಾಣವು 6 ತಿಂಗಳಿನಿಂದ 7 ವರ್ಷಕ್ಕೆ ಏರಿಸಲಾಗಿದೆ. ಹೊಸ ಕಾಯ್ದೆ ಅನ್ವಯ ಈಗಾಗಲೇ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

3 ತಿಂಗಳು ಸಾಕಿ: ಕಾಯ್ದೆ ಜಾರಿ ಬಳಿಕ ರೈತರು ಗಂಡು ಕರುಗಳನ್ನು ಅಲ್ಲಲ್ಲಿ ಬಿಟ್ಟುಹೋಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು ‘ರೈತರು ಕರುಗಳನ್ನು ಕೇವಲ ಮೂರು ತಿಂಗಳ ಕಾಲ ಸಾಕಬೇಕು. ನಂತರ ಗೋಶಾಲೆಗಳಿಗೆ ತಂದು ಬಿಟ್ಟರೆ ಅವುಗಳನ್ನು ಸರ್ಕಾರವೇ ನೋಡಿಕೊಳ್ಳಲಿದೆ. ರಾಜ್ಯದಲ್ಲಿ ಈಗಾಗಲೇ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ ಆಗಿದ್ದು, ಗೋ ಸೇವಾ ಆಯೋಗವನ್ನು ಸದ್ಯದಲ್ಲೇ ಸ್ಥಾಪಿಸಲಾಗುವುದು. ಉತ್ತರ ಪ್ರದೇಶ ಮಾದರಿಯಲ್ಲಿ ಸಂಘ–ಸಂಸ್ಥೆಗಳನ್ನು ಒಗ್ಗೂಡಿಸಿ ಸೇವಾ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು’ ಎಂದರು.

ಪಶು ಸಂಗೋಪನಾ ಇಲಾಖೆಯಲ್ಲಿ ವೈದ್ಯರ ಕೊರತೆ ಇದ್ದು, ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ರಾಜ್ಯದಲ್ಲಿ ಪಶು ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಸಾರ್ವಜನಿಕರು 1962ಗೆ ಕರೆ ಮಾಡಿ ದೂರು ನೀಡಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT