ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ಯತೀತ ಅಭ್ಯರ್ಥಿಗೆ ಸಿಪಿಐ ಬೆಂಬಲ: ಕೆ.ಎನ್.ಉಮೇಶ್

Last Updated 2 ಏಪ್ರಿಲ್ 2019, 12:17 IST
ಅಕ್ಷರ ಗಾತ್ರ

ರಾಮನಗರ: ‘ಕೇಂದ್ರದಲ್ಲಿ ಜಾತ್ಯಾತೀತ ಸರ್ಕಾರ ಸ್ಥಾಪನೆಯ ಜತೆಗೆ ದೇಶದಲ್ಲಿ ಎಡಪಕ್ಷಗಳ ಪ್ರಾತಿನಿಧ್ಯ ಹೆಚ್ಚಬೇಕು. ಇದಕ್ಕಾಗಿ ರಾಜ್ಯದ28 ಕ್ಷೇತ್ರಗಳಲ್ಲಿ ಜಾತ್ಯತೀತ ಮನೋಭಾವದ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದೇವೆ’ ಎಂದು ಸಿಪಿಐ(ಎಂ)ನ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಎನ್. ಉಮೇಶ್ ಹೇಳಿದರು.

ಇಲ್ಲಿನ ಚೈತನ್ಯ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಿಪಿಐ(ಎಂ)ನ ಅಭ್ಯರ್ಥಿಯಾಗಿರುವ ವರಲಕ್ಷ್ಮಿ ಮತ್ತು ತುಮಕೂರು ಕ್ಷೇತ್ರದಲ್ಲಿ ಸಿಪಿಐನ ಎನ್.ಶಿವಣ್ಣ, ಬೆಂಗಳೂರು ಕೇಂದ್ರದಲ್ಲಿ ಪಕ್ಷೇತರ ಅಭ್ಯರ್ಥಿ ಪ್ರಕಾಶ್‌ರಾಜ್ ಚುನಾವಣಾ ಕಣದಲ್ಲಿದ್ದು ಇವರುಗಳನ್ನು ಬೆಂಬಲಿಸುತ್ತಿದ್ದೇವೆ. ಉಳಿದ 25 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಸಾಮರ್ಥ್ಯ ಇರುವ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದೇವೆ’ ಎಂದು ತಿಳಿಸಿದರು.

‘ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ನೀಡಿದ್ದ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವ ಭರವಸೆ ಈಡೇರಲಿಲ್ಲ. ಕಪ್ಪುಹಣ ವಾಪಸ್ ತರುವ ಭರವಸೆಯೂ ಹುಸಿಯಾಗಿದೆ. ನಾಲ್ಕು ಬಾರಿ ಕಾರ್ಮಿಕರು ದೆಹಲಿಯಲ್ಲಿ ಪಾರ್ಲಿಮೆಂಟ್ ಚಲೋ ಮತ್ತು ಸಾರ್ವತ್ರಿಕ ಮುಷ್ಕರ ನಡೆಸಿದ್ದಾರೆ. ಪ್ರಧಾನಿಯು ಕೇವಲ ಒಂದು ಗಂಟೆ ಕಾರ್ಮಿಕರ ಬಗ್ಗೆ ಚರ್ಚೆ ಮಾಡಲು ಸಮಯ ನಿಗದಿ ಮಾಡಿದ್ದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿತ್ತು. ಆದರೆ ಮೋದಿ ಅವರ ಜಾಣ್ಮೆಯ ನಡೆಯಿಂದ ಕಾರ್ಮಿಕ ತುಟ್ಟಿಭತ್ಯೆ ರೂಪದಲ್ಲಿ ಕಾರ್ಮಿಕರಿಗೆ ಸೇರಬೇಕಿದ್ದ ಕೋಟ್ಯಾಂತರ ರೂಪಾಯಿ ಹಣ ಮಾಲೀಕರ ಜೇಬು ಸೇರಿತು’ ಎಂದರು.

‘ಅಸಂಘಟಿತ ಕಾರ್ಮಿಕರಿಗೆ ಶಾಸನಬದ್ಧ ಭವಿಷ್ಯನಿಧಿ, ಪಿಂಚಣಿ ಎಂಬ ಭ್ರಮೆಯ ಯೋಜನೆಯನ್ನು ಕೇಂದ್ರ ಪ್ರಕಟಿಸಿದೆ. ಪ್ರಧಾನಮಂತ್ರಿ ಭೀಮಾ ಯೋಜನೆ ಮತ್ತು ಸುರಕ್ಷಾ ಯೋಜನೆ ಎಂಬ ನಯವಂಚಕ ಕಾರ್ಯಕ್ರಮ ಹಾಗೂ ಖಾಸಗಿ ವಿಮಾ ಕಂಪನಿಗಳಿಗೆ ಲಾಭ ಮಾಡಿಕೊಡುವ ಆಯುಷ್ ಮಾನ್ ಭಾರತ ಎಂಬ ಮರೀಚಿಕೆಯನ್ನು ನಿರ್ಮಿಸುತ್ತಿದೆ. 2016ರ ನಂತರ ಬೆಲೆ ಏರಿಕೆಗೆ ಅನುಗುಣವಾಗಿ ಗ್ರಾಹಕ ಬೆಲೆ ಸೂಚ್ಯಂಕ ಕಡಿಮೆಯಾಗಿದೆ. ಅದರ ಸಾಂಖ್ಯಿಕ ವರದಿಯನ್ನು ಪ್ರಕಟಿಸಿಲ್ಲ’ ಎಂದು ಆರೋಪಿಸಿದರು.

‘ರಾಜ್ಯಗಳ ನಡುವಿನ ನೀರಿನ ಸಮಸ್ಯೆಗಳನ್ನು ಸಾಮರಸ್ಯದಿಂದ ಇತ್ಯರ್ಥಗೊಳಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿಲ್ಲ. ಕಾವೇರಿ ವಿಷಯವಾಗಿ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ಸಮಸ್ಯೆ ಉದ್ಭವಿಸಿದರೂ ಪ್ರಧಾನಿ ಮೋದಿ ಮೌನ ವಹಿಸುವ ಮೂಲಕ ಕರ್ನಾಟಕ ರಾಜ್ಯದ ಹಿತ ಕಾಯುವಲ್ಲಿ ವಿಫಲರಾದರು. ಈ ಬಗ್ಗೆ ಪ್ರತಿಪಕ್ಷಗಳು ಸಹ ಧ್ವನಿ ಎತ್ತುತ್ತಿಲ್ಲ. ಆದ್ದರಿಂದ ಸಿಪಿಐ(ಎಂ) ಬಿಜೆಪಿ ಮೈತ್ರಿ ಸೋಲಿಸಲು ಪಣ ತೊಟ್ಟಿದೆ’ ಎಂದು ವಿವರಿಸಿದರು.

ಸಿಪಿಐ(ಎಂ)ನ ಪದಾಧಿಕಾರಿಗಳಾದ ಮಹಾಂತೇಶ್, ಸ್ವಾಮಿರಾಜನ್, ಬಿ.ಬಿ. ರಾಘವೇಂದ್ರ ಇದ್ದರು.

*ಪ್ರಧಾನಿ ನರೇಂದ್ರ ಮೋದಿ ರೈತರ, ಕಾರ್ಮಿಕರ ಹಿತಕಾಯುವಲ್ಲಿ ವಿಫಲರಾಗಿದ್ದಾರೆ. ಅವರು ಮಾಡಿರುವ ಅಭಿವೃದ್ದಿ ಕೆಲಸಗಳಿಗಿಂತ ಮಾತೇ ಹೆಚ್ಚಾಗಿದೆ
–ಕೆ.ಎನ್. ಉಮೇಶ್,ಜಿಲ್ಲಾ ಕಾರ್ಯದರ್ಶಿ, ಸಿಪಿಐ(ಎಂ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT