ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ’

ಸಿಪಿಐ(ಎಂ) ಜಿಲ್ಲಾ ಮಟ್ಟದ ರಾಜಕೀಯ ಸಮಾವೇಶ
Last Updated 9 ಏಪ್ರಿಲ್ 2019, 13:16 IST
ಅಕ್ಷರ ಗಾತ್ರ

ರಾಮನಗರ: ‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರೈತರಿಗೆ, ಕಾರ್ಮಿಕರಿಗೆ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸಂಬಂಧಿಸಿದ ವಿಚಾರಗಳು ಚರ್ಚೆಯಾಗುತ್ತಿಲ್ಲ’ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಕೆ. ಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಚೈತನ್ಯ ಭವನದಲ್ಲಿ ಸಿಪಿಐ(ಎಂ) ವತಿಯಿಂದ ಮಂಗಳವಾರ ನಡೆದ ಲೋಕಸಭಾ ಚುನಾವಣೆ–2019 ಬೆಂಗಳೂರು ಗ್ರಾಮಾಂತರ ಕ್ಷೇತ್ರದ ರಾಮನಗರ ಜಿಲ್ಲಾ ರಾಜಕೀಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚುನಾವಣಾ ಸಂದರ್ಭದಲ್ಲಿ ಸಮಾಜದಲ್ಲಿನ ಪ್ರಮುಖ ಸಮಸ್ಯೆಗಳು ಚರ್ಚೆಯಾಗಬೇಕು. ಆದರೆ ಈ ಚುನಾವಣೆಯಲ್ಲಿ ಜಾತಿ, ಧರ್ಮ, ವ್ಯಕ್ತಿಗತ ಹಾಗೂ ವೈಯುಕ್ತಿಕ ವೈಭವೀಕರಣಗಳ ಚರ್ಚೆ ನಡೆಯುತ್ತಿದೆ. ಜನರ ಸಮಸ್ಯೆಗಳು ರಾಜಕಾರಣಿಗಳಿಗೆ ಗೌಣವಾಗಿದೆ ಎಂದು ತಿಳಿಸಿದರು.

ಕೇಂದ್ರದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಐದು ವರ್ಷಗಳ ಹಿಂದೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದ ವಿಚಾರಗಳು ಈಗಲೂ ಈಡೇರಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಹೇಳಿ, ಇರುವ ಉದ್ಯೋಗವನ್ನು ನಾಶಪಡಿಸಿದ್ದಾರೆ. ಬಿಜೆಪಿಯವರು ಈಚೆಗೆ ಬಿಡುಗಡೆ ಮಾಡಿರುವ ಪ್ರಣಾಳಿಕೆ ನೀರಸವಾಗಿದೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯನ್ನು ಮೋದಿಯ ಹೆಸರು ಹೇಳಿಕೊಂಡು 'ಮೋದಿ ಮೇನಿಯಾ' ಸೃಷ್ಟಿಸುತ್ತಿದ್ದಾರೆ. ಐದು ವರ್ಷಗಳಲ್ಲಿ ಬಿಜೆಪಿಯವರು ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯವನ್ನು ನಾಶಗೊಳಿಸಿದ್ದಾರೆ. ಒಕ್ಕೂಟ ತತ್ವಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ತಡೆಯೊಡ್ಡುತ್ತಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಕ್ಷೀಣಿಸಲು ಕಾರಣಕರ್ತರಾಗಿದ್ದಾರೆ ಎಂದರು.
ಸ್ವಾಮಿನಾಥನ್ ವರದಿಯ ಪ್ರಕಾರ ರೈತರಿಗೆ ಸೌಲಭ್ಯಗಳನ್ನು ನೀಡುತ್ತೇವೆ ಎಂದಿದ್ದ ಕೇಂದ್ರ ಸರ್ಕಾರ ಆ ಪ್ರಯತ್ನವನ್ನೇ ಮಾಡಲಿಲ್ಲ. ಕಾರ್ಮಿಕರ ಪರವಾಗಿದ್ದ ಕಾನೂನುಗಳನ್ನು ರದ್ದು ಮಾಡಿ, ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.

ನೋಟು ಅಮಾನ್ಯೀಕರಣದಿಂದ ದೇಶದ ಆರ್ಥಿಕ ವ್ಯವಸ್ಥೆ ಕುಸಿಯಿತು. 500 ಹಾಗೂ 1000 ನೋಟುಗಳ ಅಮಾನ್ಯೀಕರಣದಿಂದ ದೇಶದಲ್ಲಿನ ಭ್ರಷ್ಟಾಚಾರ, ಭಯೋತ್ಪಾದಕತೆ, ನಕಲಿ ನೋಟು ಚಲಾವಣೆ ಹಾಗೂ ಕಪ್ಪು ಹಣ ಸಂಗ್ರಹವಾಗುವುದು ತಪ್ಪುತ್ತದೆ ಎಂದಿದ್ದರು. ಆದರೆ ನೋಟು ಅಮಾನ್ಯೀಕರಣವಾದರೂ ಸಮಾಜದಲ್ಲಿ ಈ ಮೇಲಿನ ಅಂಶಗಳು ನಡೆಯುತ್ತಲೇ ಇವೆ ಎಂದು ತಿಳಿಸಿದರು.

ಸೈನ್ಯ ಮತ್ತು ರಕ್ಷಣೆಯ ವಿಚಾರವನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ. ಭಾರತೀಯ ಸೈನ್ಯವನ್ನು ಮೋದಿ ಸೈನ್ಯ ಎನ್ನುವ ಮೂಲಕ ತನ್ನ ಖಾಸಗಿ ಆಸ್ತಿಯನ್ನಾಗಿ ಮಾಡಿಕೊಂಡಿದೆ. ಸೈನಿಕರನ್ನು ರಕ್ಷಣೆ ಮಾಡಬೇಕಾದುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ. ಆದರೆ ಕೇಂದ್ರ ಸರ್ಕಾರ ಸೈನಿಕರನ್ನು ಹಾಗೂ ಭಯೋತ್ಪಾದನೆಯ ಮೇಲಿನ ದಾಳಿಯನ್ನು ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಂಡವಾಳ ಮಾಡಿಕೊಳ್ಳುತ್ತಿದೆ ಎಂದರು.

ದೇಶದಲ್ಲಿ ಐಕ್ಯತೆಯನ್ನು ಸ್ಥಾಪಿಸಬೇಕಾಗಿದ್ದ ಕೇಂದ್ರ ಸರ್ಕಾರ ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಿ ಐಕ್ಯತೆಯನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ. ಈ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ನೇತೃತ್ತದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಎರಡು ಜಾತಿಯವರು ಒಟ್ಟಾಗಿ ಕುಳಿತುಕೊಳ್ಳಲಾಗದ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಸಿಪಿಐ(ಎಂ) ವಲಯ ಕಾರ್ಯದರ್ಶಿ ಸಿ. ಸ್ವಾಮಿರಾಜ್, ಜಿಲ್ಲಾ ಕಾರ್ಯದರ್ಶಿ ಕೆ.ಎನ್. ಉಮೇಶ್, ರಾಜ್ಯ ಸಮಿತಿ ಸದಸ್ಯ ಬಿ. ರಾಜಶೇಖರ್ ಮೂರ್ತಿ, ಪದಾಧಿಕಾರಿಗಳಾದ ಬಿ.ಬಿ. ರಾಘವೇಂದ್ರ, ಎನ್.ಬಿ. ಮಹಾಂತೇಶ್, ಡಿ. ಚಂದ್ರಶೇಖರ್ ಇದ್ದರು.

*ಜಿಎಸ್‌ಟಿಯಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಆದರೆ ಕೇಂದ್ರ ಸರ್ಕಾರ ಸುಳ್ಳು ಅಂಕಿಅಂಶಗಳನ್ನು ನೀಡುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದೆ
ಕೆ. ಪ್ರಕಾಶ್‌
ರಾಜ್ಯ ಸಮಿತಿ ಸದಸ್ಯ, ಸಿಪಿಐ(ಎಂ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT