ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ದಾಖಲೆ ಸೃಷ್ಟಿಸಿ ಹಣ ದುರ್ಬಳಕೆ

ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ಅಧ್ಯಕ್ಷ ರಾಘವೇಂದ್ರ ನೇಕಾರ ಆರೋಪ
Last Updated 7 ಆಗಸ್ಟ್ 2019, 14:32 IST
ಅಕ್ಷರ ಗಾತ್ರ

ಮಾಗಡಿ: ‘ಜವಳಿ ಇಲಾಖೆ ವತಿಯಿಂದ, ಪಟ್ಟಣದ ನೇಕಾರರಿಗೆ 300 ಮಗ್ಗ ಮಂಜೂರು ಮಾಡಿರುವುದಾಗಿ, ನಕಲಿ ದಾಖಲೆ ಸೃಷ್ಟಿಸಿ, ಹಣ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಸಿ, ನ್ಯಾಯ ದೊರಕಿಸಿಕೊಡಬೇಕು’ ಎಂದು ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ಅಧ್ಯಕ್ಷ ರಾಘವೇಂದ್ರ ನೇಕಾರ ಆಗ್ರಹಪಡಿಸಿದರು.

ಇಲ್ಲಿನ ಕಲ್ಯಾಬಾಗಿಲು ಬಳಿ ಬುಧವಾರ ನಡೆದ ‘ರಾಷ್ಟ್ರೀಯ ನೇಕಾರರ ದಿನ’ದ ಅಂಗವಾಗಿ ನೇಕಾರರಪ್ರತಿಭಾವಂತ ಮಕ್ಕಳಿಗೆ ಮತ್ತು ಹಿರಿಯ ನೇಕಾರರಿಗೆ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಾರ್ಷಿಕ ಶೇ 3ರ ಬಡ್ಡಿ ದರದಲ್ಲಿ ಸರ್ಕಾರ ಮಂಜೂರು ಮಾಡಿದ್ದ ಸಾಲ ನೇಕಾರರಿಗೆ ತಲುಪಿಲ್ಲ. ನೇಕಾರರಿಗೆ ಬಡಾವಣೆ ನಿರ್ಮಿಸಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಮಗ್ಗದ ನೇಕಾರರಿಗೆ ಸವಲತ್ತು ದೊರಕಿಸಿಕೊಡಲು ಶ್ರಮಿಸಲಾಗುವುದು’ ಎಂದು ಅವರು ತಿಳಿಸಿದರು.

ಹಿರಿಯ ನೇಕಾರ ಎಚ್‌.ಹನುಮಂತಯ್ಯ ಮಾತನಾಡಿ, ‘ಕೈಮಗ್ಗದ ಗುಂಡಿಗಳು ಪ್ರೋತ್ಸಾಹವಿಲ್ಲದೆ ಕಣ್ಮರೆಯಾಗಿವೆ. ನೇಕಾರರ ಸ್ಥಿತಿ ಶೋಚನೀಯವಾಗಿದೆ. ಜಾಗತೀಕರಣದಿಂದಾಗಿ ಕೈಮಗ್ಗಗಳಿಗೆ ನೆಲೆ ಇಲ್ಲದಂತಾಗಿದೆ. ಸ್ವಾಮಿನಾಥನ್‌ ವರದಿ ಜಾರಿಗೊಳಿಸಿ, ಕುಲ ಕಸುಬು ಉಳಿಸಲು ಸರ್ಕಾರ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ನೇಕಾರರ ಸಂಘದ ಮುಖಂಡರಾದ ಕದಂಬ ಗಂಗರಾಜು, ದಯಾನಂದ್‌,ಕೋಟಪ್ಪನಪಾಳ್ಯದ ಸುರೇಶ್‌, ಭೈರಪ್ಪ, ನೀಲಕಂಠಯ್ಯ, ಬಿಜೆಪಿ ಮುಖಂಡ ಶಶಿಧರ್‌, ಕರಲಮಂಗಲ ಧನಂಜಯ, ತಿಗಳ ಸಮುದಾಯ ಮುಖಂಡ ಎಚ್‌.ಎಸ್‌.ಕೆಂಪಣ್ಣ, ಗಂಗರೇವಣ್ಣ, ಜ್ಯೋತಿಪಾಳ್ಯ ಧನಂಜಯ, ಹರೀಶ್‌ ಮಾತನಾಡಿದರು.

ರೈತ ಮುಖಂಡ ಚನ್ನಿಗರಾಯಪ್ಪ, ಮುನಿಕೃಷ್ಣ, ನೇಕಾರರು ಇದ್ದರು. ಕಬಡ್ಡಿ ಕ್ರೀಡಾಪಟು ಕಲ್ಯಾ ವಿನೋದ್ ಅವರಿಗೆ ಎ.ಎಚ್‌.ಬಸವರಾಜು ₹ 15 ಸಾವಿರ ನಗದು ನೀಡಿ ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT