ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗೇಶ್ವರ್ ಕುಂಟು ಕುದುರೆ: ಟೀಕೆಯಲ್ಲಿ ಈಗ ಕಾಂಗ್ರೆಸ್‌ ಸರಣಿ

ಡಿಕೆಶಿ ಅಶ್ವಮೇಧದ ಕುದುರೆ ಇದ್ದಂತೆ ತಾಕತ್ತಿದ್ದರೆ ಕಟ್ಟಿ ಹಾಕಲಿ: ಮುಖಂಡರ ಸವಾಲು
Last Updated 28 ಜುಲೈ 2020, 4:18 IST
ಅಕ್ಷರ ಗಾತ್ರ

ಚನ್ನಪಟ್ಟಣ: ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ’ಕುಂಟು ಕುದುರೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ.ವೀರೇಗೌಡ ಟೀಕಿಸಿದರು.

ಪಟ್ಟಣದ ತಾಲ್ಲೂಕು ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ‘ಶಿವಕುಮಾರ್ ಅವರು ಅಶ್ವಮೇಧದ ಕುದುರೆ ಇದ್ದಂತೆ. ಧೈರ್ಯ ಇದ್ದರೆ ಅವರನ್ನು ಕಟ್ಟಿಹಾಕಲಿ ನೋಡೋಣ‘ ಎಂದು ಸವಾಲು ಹಾಕಿದರು.

’ಜನರಿಂದ ತಿರಸ್ಕೃತರಾದ ಯೋಗೇಶ್ವರ್ ಅವರಿಂದ ಡಿ.ಕೆ.ಶಿವಕುಮಾರ್ ಅವರು ಸಂಘಟನೆ ಪಾಠ ಕಲಿಯಬೇಕಿಲ್ಲ. ಚುನಾವಣೆಯಲ್ಲಿ ಸೋತ ನಂತರ ತಾಲ್ಲೂಕಿನತ್ತ ಸುಳಿಯದ ಅವರು, ಇದೀಗ ಪರಿಷತ್ ಸದಸ್ಯರಾಗಿ ಅಧಿಕಾರ ಸಿಕ್ಕ ತಕ್ಷಣ ಪ್ರಮಾಣ ವಚನ ಸ್ವೀಕಾರಕ್ಕೂ ಮೊದಲೇ ಸರ್ಕಾರಿ ಕಚೇರಿಯೊಳಗೆ ತಮ್ಮ ಪಕ್ಷದ ಮುಖಂಡರನ್ನು ಕೂರಿಸಿ ಸಭೆ ನಡೆಸುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮ ದುರಾಡಳಿತ ಪ್ರದರ್ಶನ ಮಾಡಿದ್ದಾರೆ’ ಎಂದು ಹರಿಹಾಯ್ದರು.

ಸೋತೆನೆಂದು ತಲೆಮರೆಸಿಕೊಂಡಿದ್ದ ಯೋಗೇಶ್ವರ್ ಇದೀಗ ಬಂದಿದ್ದಾರೆ. ದಬ್ಬಾಳಿಕೆ ಬಿಟ್ಟು ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ತಾಲ್ಲೂಕಿನ ಅಭಿವೃದ್ಧಿಯತ್ತ ಗಮನಹರಿಸಲಿ ಎಂದು ಹರಿಹಾಯ್ದರು.

ಮುಖಂಡ ಶರತ್ಚಂದ್ರ ಮಾತನಾಡಿ, ’ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ₹500 ಕೋಟಿ ವೆಚ್ಚದ ಸತ್ತೇಗಾಲ ಯೋಜನೆ ಅನುಷ್ಠಾಗೊಳಿಸಿದ್ದಾರೆ. ರೈತರಿಗೆ ಗುಣಮಟ್ಟದ ವಿದ್ಯುತ್ ನೀಡಲು ₹200 ಕೋಟಿ ವೆಚ್ಚದಲ್ಲಿ ಪ್ರತಿ ರೈತರ ಪಂಪ್ ಸೆಟ್ ಗೆ ಪ್ರತ್ಯೇಕ ಟ್ರಾನ್ಸ್ ಫಾರ್ಮರ್ ಅಳವಡಿಸುವ ಯೋಜನೆ ತಂದಿದ್ದಾರೆ. ಯೋಗೇಶ್ವರ್ 20 ವರ್ಷ ಶಾಸಕರಾಗಿದ್ದ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ’ ಎಂದರು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ದುಕೃಷ್ಣ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷಗಾದಿಗೆ ಬಂದ ತಕ್ಷಣವೇ ಪಕ್ಷ ಸಂಘಟನೆಗೆ ವಿನೂತನವಾದ ಆಯಾಮಗಳನ್ನು ಅನುಸರಿಸುತ್ತಾ ಇಡೀ ರಾಜ್ಯದ ಗಮನ ಸೆಳೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ಎಲ್ಲರಿಗೂ ತಿಳಿದಿದೆ. ಮುಂದೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರವುದರಲ್ಲಿ ಯಾವುದೇ ಅನುಮಾನವಿಲ್ಲ. ಅಂತಹವರ ಬಗ್ಗೆ ಮಾತನಾಡುವ ನೈತಿಕತೆ ಯೋಗೇಶ್ವರ್ ಗೆ ಇಲ್ಲ ಎಂದರು.

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಾದು, ಕುಕ್ಕುಟ ಮಂಡಳಿ ಅಧ್ಯಕ್ಷ ಡಿ.ಕೆ.ಕಾಂತರಾಜು, ಕಿಸಾನ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಆರ್.ನವ್ಯಶ್ರೀ, ಎಪಿಎಂಸಿ ನಿರ್ದೇಶಕ ವಾಸಿಲ್ ಆಲಿಖಾನ್, ಮುಖಂಡರಾದ ಟಿ.ವಿ.ಗಿರೀಶ್, ಎಸ್.ಸಿ.ಶೇಖರ್, ರಂಗನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT