ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಸಾಲ ವಿತರಣೆ: ಶೀಘ್ರ ಆದೇಶ

ರಾಮನಗರ ಎಪಿಎಂಸಿಗೆ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಭೇಟಿ
Last Updated 19 ಏಪ್ರಿಲ್ 2020, 16:01 IST
ಅಕ್ಷರ ಗಾತ್ರ

ರಾಮನಗರ: ಸಹಕಾರ ಬ್ಯಾಂಕ್ ಹಾಗೂ ಸಂಘಗಳ ಮೂಲಕ ಈ ವರ್ಷವೂ ರೈತರಿಗೆ ಎಂದಿನಂತೆ ಬೆಳೆ ಸಾಲ ಸಿಗಲಿದೆ. ಇನ್ನೆರಡು ದಿನದಲ್ಲಿ ಮಾರ್ಗಸೂಚಿಗಳೊಂದಿಗೆ ಆದೇಶ ಹೊರಡಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಭಾನುವಾರ ಮುಂಜಾನೆ ಭೇಟಿ ನೀಡಿ ರೈತರು, ವರ್ತಕರ ಸಮಸ್ಯೆ ಆಲಿಸಿದ ಸಂದರ್ಭ ಅವರು ಮಾತನಾಡಿದರು. ಕಳೆದ ವರ್ಷ ರೈತರಿಗೆ ₹13 ಸಾವಿರ ಕೋಟಿ ಬೆಳೆ ಸಾಲ ನೀಡಲಾಗಿತ್ತು. ಈ ವರ್ಷವೂ ಅಷ್ಟೇ ಪ್ರಮಾಣದ ಸಾಲ ವಿತರಣೆ ಆಗಲಿದೆ ಎಂದರು.

ಬೆಳೆ ನಷ್ಟಕ್ಕೆ ಪರಿಹಾರ: ಯಾವ ಬೆಳೆಗಳು ಮಾರಾಟವಾಗದೇ ಹೊಲದಲ್ಲೇ ಉಳಿಯುತ್ತದೆಯೋ ಅಂತಹದ್ದಕ್ಕೆ ಮಾತ್ರ ಸರ್ಕಾರ ಬೆಳೆನಷ್ಟ ಪರಿಹಾರ ನೀಡಲಿದೆ. ಅಧಿಕಾರಿಗಳು ಜಮೀನುಗಳಿಗೆ ತೆರಳಿ ಸರ್ವೆ ನಡೆಸಲಿದ್ದಾರೆ. ರಾಜ್ಯದಲ್ಲಿ ದಪ್ಪ ಮೆಣಸಿನಕಾಯಿ ಸಹಿತ ಕೆಲವು ಬೆಳೆಗಳಿಗೆ ನಿರೀಕ್ಷೆಯಷ್ಟು ಮಾರುಕಟ್ಟೆ ಇಲ್ಲ ಎಂಬ ಮಾಹಿತಿ ಇದೆ. ಹಲವು ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ರೈತರಿಂದ ತರಕಾರಿ ಕೊಂಡು ಸಾರ್ವಜನಿಕರಿಗೆ ಉಚಿತವಾಗಿ ಹಂಚುತ್ತಿರುವುದು ಉತ್ತಮ ಬೆಳವಣಿಗೆ. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಆಲೋಚಿಸಿದ್ದು, ಬೆಂಗಳೂರಿನ‌ 1400 ಅಪಾರ್ಟ್ ಮೆಂಟ್ ಗಳಿಗೆ ಈಗಾಗಲೇ ಮನೆ ಬಾಗಿಲಿಗೆ ತರಕಾರಿ ಪೂರೈಕೆ ಮಾಡಲಾಗುತ್ತಿದೆ. ರೈತರು ಎಷ್ಟೇ ಉತ್ಪನ್ನ ತಂದರೂ‌ ಖರೀದಿ ಮಾಡಿ‌ ಮಾರಾಟ ಮಾಡುವಂತೆ ಹಾಪ್ ಕಾಮ್ಸ್ ಗಳಿಗೆ ಸೂಚಿಸಲಾಗಿದೆ. ಹಾಪ್‌ಕಾಮ್ಸ್‌ಗಳು ದಿನವಿಡೀ ತೆರೆದಿದ್ದು, ಅಗತ್ಯ ಉತ್ಪನ್ನಗಳನ್ನು ಜನರಿಗೆ ಒದಗಿಸಲಿವೆ ಎಂದರು.

ಇಂದು ಸಭೆ: ಲಾಕ್ ಡೌನ್ ಸಡಿಲಿಕೆ ಸಂಬಂಧ ಸರ್ಕಾರ ಕೆಲವು‌ ನಿರ್ಧಾರಗಳನ್ನು‌ ತೆಗೆದುಕೊಂಡಿದೆ. ಈ ಸಂಬಂಧ ಚರ್ಚೆಗೆ ಸೋಮವಾರ ಮುಖ್ಯಮಂತ್ರಿ ಸಚಿವ ಸಂಪುಟ ಸಭೆ ಕರೆದಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ರಾಜ್ಯದಲ್ಲಿ ಕೃಷಿ‌ ಉತ್ಪನ್ನಗಳ ಸಾಗಾಟ ಮತ್ತು ಮಾರಾಟಕ್ಕೆ ಯಾವುದೇ ಪಾಸ್ ಬೇಕಿಲ್ಲ. ಸರಕು ಸಾಗಣೆ ವಾಹನಗಳು ಹಾಗೂ ಕೃಷಿ ಕಾರ್ಯಕ್ಕೆ ಹೋಗುವವರಿಗೆ ಪೊಲೀಸರೂ ಸೇರಿದಂತೆ ಯಾರೂ ತೊಂದರೆ ನೀಡುವಂತೆ ಇಲ್ಲ. ರೈತರು ಬೆಂಗಳೂರಿನಲ್ಲಿ ಸಹ ತರಕಾರಿಯನ್ನು ಯಾವುದೇ ಅಡ್ಡಿ ಇಲ್ಲದೇ ಮಾರಬಹುದಾಗಿದೆ ಎಂದರು.

ಇತರರೂ ನೀಡಿ: ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಬಮೂಲ್ ಈಗಾಗಲೇ ತಲಾ ₹3 ಸಾವಿರ ರೂಪಾಯಿ ಪ್ರೋತ್ಸಾಹ ಧನ ಘೋಷಿಸಿದೆ. ಇಲ್ಲನ ಕೆಲವು ಸಂಘಗಳು ₹5 ಸಾವಿರ ನೀಡುತ್ತಿವೆ. ರಾಜ್ಯದಲ್ಲಿನ ಇತರ ಹಾಲು ಉತ್ಪಾದಕ ಸಂಘಗಳೂ ಈ ನಡೆ ಅನುಸರಿಸಬೇಕು ಎಂದು ಸಲಹೆ ನೀಡಿದರು.

ರಾಮನಗರದ ಎಪಿಎಂಸಿಯಲ್ಲಿ ಉತ್ತಮ ವ್ಯವಸ್ಥೆ ಮಾಡಿದ್ದು, ರೈತರಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ನೋಡಿಕೊಂಡಿದ್ದಾರೆ. ಇಲ್ಲಿ ಮುಂಜಾನೆ 3ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಉತ್ಪನ್ನ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ರೈತರಿಗೆ ತೊಂದರೆ ನೀಡದಂತೆ ಸೂಚಿಸಿದ್ದೇನೆ. ದಪ್ಪ ಮೆಣಸಿನಕಾಯಿ, ನಿಂಬೆಹಣ್ಣು ಸೇರಿದಂತೆ ಕೆಲವು ಉತ್ಪನ್ನಗಳಷ್ಟೇ ಮಾರಾಟ ಆಗುತ್ತಿಲ್ಲ ಎಂದು ವರ್ತಕರು ಮಾಹಿತಿ ನೀಡಿದ್ದಾರೆ ಎಂದರು.

ಬಳಿಕ ಸಚಿವರು ಎಪಿಎಂಸಿ ಪ್ರಾಂಗಣದಲ್ಲಿ ಮಾರುಕಟ್ಟೆ ಸಿಬ್ಬಂದಿ, ಆಡಳಿತ ಮಂಡಳಿ ಜತೆ ಸಭೆ ನಡೆಸಿದರು. ಇದೇ ಸಂದರ್ಭ ಆಶಾ ಕಾರ್ಯಕರ್ತೆಯರಿಗೆ ನೆರವಿನ ಚೆಕ್‌ ವಿತರಿಸಿದರು. ಆದರೆ, ಭೇಟಿ ಸಂದರ್ಭ ಪರಸ್ಪರ ಅಂತರ ಕಾಯ್ದುಕೊಳ್ಳದಿರುವುದೂ ಕಂಡುಬಂದಿತು. ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನೂಪ್‌ ಶೆಟ್ಟಿ, ರಾಮನಗರ ಎಪಿಎಂಸಿ ಅಧ್ಯಕ್ಷ ದೊರೆಸ್ವಾಮಿ, ಬಮೂಲ್ ನಿರ್ದೇಶಕ ಪಿ. ನಾಗರಾಜು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT