ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಮೇಲೆ ದೌರ್ಜನ್ಯ: ಬಂಧನಕ್ಕೆ ಆಗ್ರಹ

Last Updated 1 ಜೂನ್ 2019, 10:32 IST
ಅಕ್ಷರ ಗಾತ್ರ

ರಾಮನಗರ: ಮಾಗಡಿಯ ಅರಳಕುಪ್ಪೆ ಗ್ರಾಮದಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿರುವವರನ್ನು ಬಂಧಿಸಬೇಕು. ನಮಗೆ ರಕ್ಷಣೆ ನೀಡಬೇಕು ಎಂದು ಸ್ಥಳೀಯರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ದಲಿತ ಮಹಿಳೆಯರಾದ ಬೋರಮ್ಮ, ಚಿಕ್ಕಮ್ಮ, ಚಿಕ್ಕಮಾರಯ್ಯ, ಸಣ್ಣಮ್ಮ, ಈರಮ್ಮ, ಸೌಮ್ಯ, ಚಿಕ್ಕತಾಯಮ್ಮ, ಶಿವಮ್ಮ, ಬೆಟ್ಟಮ್ಮ ಮಾತನಾಡಿ ‘ಸವರ್ಣೀಯ ಹುಡುಗರ ದೌರ್ಜನ್ಯದಿಂದ ದಲಿತರಿಗೆ ನೆಮ್ಮದಿ ಇಲ್ಲದಂತಾಗಿದೆ. ಮಾರ್ಚ್‌ 25ರಂದು ಅರಳಕುಪ್ಪೆ ಗ್ರಾಮದೇವತೆ ಹಬ್ಬದಲ್ಲಿ ನಡೆದ ಕ್ಷುಲ್ಲಕ ಘಟನೆಯಿಂದ ದಲಿತ ಹುಡುಗರ ಮೇಲೆ ದೌರ್ಜನ್ಯ ನಡೆದಿದೆ. ಘಟನೆಗೆ ಕಾರಣರಾದವರನ್ನು ಇಲ್ಲಿಯವರೆಗೆ ಬಂಧಿಸಿಲ್ಲ’ ಎಂದು ಆರೋಪಿಸಿದರು.

‘ಹೊಲೆಯರ ದೇವಾಲಯ ಊರ ಮುಂದೆ ಏಕೆ ಇರಬೇಕು? ಕಿತ್ತು ಹಾಕಬೇಕು. ನಮ್ಮ ವಿರುದ್ಧ ದೂರು ನೀಡಿದರೆ ನಿಮ್ಮ ಮಾನಭಂಗ ಮಾಡುತ್ತೇವೆ. ನಮ್ಮ ಮುಂದೆ ದಲಿತರ ಹುಡುಗರು ಸ್ಕೂಟರ್ ಓಡಿಸುವುದು ಸರಿಯಲ್ಲ. ದಲಿತರನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ’ ಎಂದು ದೂರಿದರು.

‘ಠಾಣೆಗೆ ಬಂದ ನಮ್ಮನ್ನು ಪೊಲೀಸರು ಕಾಯಿಸಿದರು. ಮಾರ್ಚ್‌ 29ರಂದು ರಾತ್ರಿ 12ಕ್ಕೆ ದೂರು ದಾಖಲಿಸಿದರು. ನಮಗೆ ರಕ್ಷಣೆ ದೊರೆಯುತ್ತಿಲ್ಲ. ದಲಿತರು ಕೂಲಿ ಮಾಡಬೇಕು. ಗ್ರಾಮದಲ್ಲಿ ಬದುಕಲು ನಮಗೆ ಜೀವಭಯವಿದೆ. ದಲಿತರಿಗೆ ವಾಸಕ್ಕೆ ಬೇರೆ ಕಡೆ ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

‘ಮಾಗಡಿಯ ಡಿವೈಎಸ್ ಪಿ ಅವರು ಆರೋಪಿಗಳನ್ನು ಬಂಧಿಸದೇ ರಾಜಿ ಮಾಡಿಕೊಳ್ಳಿ ಎನ್ನುತ್ತಾರೆ. ರಕ್ಷಣೆ ಕೊಡಬೇಕಾದ ಪೊಲೀಸರೇ ಆರೋಪಿಗಳ ಪರವಾಗಿ ಮಾತನಾಡುತ್ತಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು, ಜತೆಗೆ ಗ್ರಾಮದಲ್ಲಿ ಶಾಂತಿಸಭೆ ನಡೆಸಬೇಕು’ ಎಂದು ದಲಿತ ಮುಖಂಡರು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್ ಮಾತನಾಡಿ ‘ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸುತ್ತೇನೆ. ದೌರ್ಜನ್ಯ ನಡೆಸುವವರ ಮೇಲೆ ಕ್ರಮಕೈಗೊಳ್ಳಲು ಸೂಚಿಸುತ್ತೇನೆ. ಸದ್ಯದಲ್ಲಿಯೇ ಗ್ರಾಮದಲ್ಲಿ ಶಾಂತಿ ಸಭೆ ನಡೆಸುತ್ತೇನೆ’ ಎಂದು ಭರವಸೆ ನೀಡಿದರು.

ಮುಖಂಡರಾದ ಸಿ. ಜಯರಾಂ, ಕೆ. ಲಕ್ಷ್ಮಣ್, ಎಚ್.ಆರ್. ಹುಚ್ಚಪ್ಪ, ಚಂದ್ರಶೇಖರ್, ಚಿಕ್ಕಣ್ಣ, ಬೆಟ್ಟಮ್ಮ, ಕೃಷ್ಣಮೂರ್ತಿ, ನರಸಿಂಹ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT