ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ | ದಯಾನಂದ ಸಾಗರ್‌ ಆಸ್ಪತ್ರೆ: ಕೋವಿಡ್‌ ಚಿಕಿತ್ಸೆ

ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್‌ ಮಾತುಕತೆ
Last Updated 28 ಜೂನ್ 2020, 17:01 IST
ಅಕ್ಷರ ಗಾತ್ರ

ಕನಕಪುರ: ಕೊರೊನಾ ಸೋಂಕಿನ ಕಾಯಿಲೆಯನ್ನು ಸಮರ್ಥವಾಗಿ ಹೆದರಿಸಲು ಆರೋಗ್ಯ ಇಲಾಖೆ ಸಜ್ಜಾಗಬೇಕಿದೆ. ಅದಕ್ಕಾಗಿ ದಯಾನಂದ ಸಾಗರ ಮೆಡಿಕಲ್‌ ಕಾಲೇಜಿನ ಸಹಕಾರವನ್ನು ಕೋರಲಾಗಿದ್ದು, ಅಗತ್ಯ ಸಹಕಾರ ನೀಡಲು ಆಡಳಿತ ಮಂಡಳಿ ಒಪ್ಪಿದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್‌ ತಿಳಿಸಿದರು.

ತಾಲ್ಲೂಕಿನ ಮರಳವಾಡಿ ಹೋಬಳಿ ವ್ಯಾಪ್ತಿಯಲ್ಲಿರುವ ಡಾ.ಚಂದ್ರಮ್ಮ ದಯಾನಂದಸಾಗರ್‌ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕೋವಿಡ್‌-19 ಚಿಕಿತ್ಸೆಗೆ ಕೈಗೊಂಡಿರುವ ಅಗತ್ಯ ಸೇವೆಗಳ ಬಗ್ಗೆ ಪರಿಶೀಲಿಸಿ ಅವರು ಮಾತನಾಡಿದರು.

ಈಗಾಗಲೇ ದಯಾನಂದ ಸಾಗರ ಮೆಡಿಕಲ್‌ ಕಾಲೇಜಿನಲ್ಲಿ ಕೋವಿಡ್‌ಗೆ 26 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಎಲ್ಲರೂ ಗುಣಮುಖರಾಗಿ ಇಂದು ಮನೆಗೆ ವಾಪಸ್ಸಾಗುತ್ತಿದ್ದಾರೆ. ಮುಂದೆ ಇಡೀ ತಾಲ್ಲೂಕಿಗೆ ಇಲ್ಲಿ ಕೋವಿಡ್‌-19 ಚಿಕಿತ್ಸೆ ಕೊಡಿಸುವಷ್ಟು ವ್ಯವಸ್ಥೆ ಮಾಡಿಸಲು ಇಂದು ದಯಾನಂದಸಾಗರ್‌ ಗ್ರೂಪ್‌ನ ಹೇಮಚಂದ್ರಸಾಗರ್ ಅವರೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿದರು.

ಆಸ್ಪತ್ರೆಯಲ್ಲಿ ಈಗಾಗಲೇ 30 ಬೆಡ್‌ ವ್ಯವಸ್ಥೆಯನ್ನು ಮಾಡಿದ್ದು, ಇದರೊಂದಿಗೆ ಮತ್ತೆ 30 ಬೆಡ್‌ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ತಾಲ್ಲೂಕಿನಲ್ಲಿ ಕೋವಿಡ್‌-19 ಸೋಂಕಿಗೆ ಸಂಬಂಧಿಸಿದಂತೆ ಎಲ್ಲರಿಗೂ ಇಲ್ಲಿಯೇ ಚಿಕಿತ್ಸೆ ಕೊಡಲು ಕಾಲೇಜಿನ ಮುಖ್ಯಸ್ಥರು ಒಪ್ಪಿಕೊಂಡಿದ್ದು, ನಾಲ್ಕು ವಾರಗಳಲ್ಲಿ 100 ಹಾಸಿಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.

ಇದಲ್ಲದೆ ತಾಲ್ಲೂಕಿನಲ್ಲಿ 25 ಪ್ರಾಥಮಿಕ ಆರೋಗ್ಯ ಕೇಂದ್ರ, 2 ಸಮುದಾಯ ಆರೋಗ್ಯ ಕೇಂದ್ರಗಳಿದ್ದು, ಅವುಗಳನ್ನು ದಯಾನಂದ ಆಸ್ಪತ್ರೆ ಸಹಕಾರದೊಂದಿಗೆ ಕಾರ್ಯಾಚರಿಸಲು ಅನುವು ಮಾಡಿಕೊಡಲಾಗುವುದು. ಎಲ್ಲ ರೀತಿಯ ವೈದ್ಯಕೀಯ ಸೇವೆ ಜತೆಗೆ ತಂತ್ರಜ್ಞಾನದಡಿ ವೈದ್ಯಕೀಯ ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ವಿವರಿಸಿದರು.

ಜನರ ಜೀವಕ್ಕೆ ಯಾವುದೇ ಅಪಾಯವಾಗದಂತೆ ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಲು ವ್ಯವಸ್ಥೆ ಸಜ್ಜಾಗೊಳಿಸುತ್ತಿದ್ದು, ಎಲ್ಲಾ ಹಂತದ ತಯಾರಿ ಮಾಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ವೈದ್ಯರ ಮತ್ತು ಸಿಬ್ಬಂದಿ ಕೊರತೆಯಿನ್ನು ನೀಗಿಸಲು ವೈದ್ಯಕೀಯ ಸಿಬ್ಬಂದಿ ಅರೆ ವೈದ್ಯಕೀಯ ಸಿಬ್ಬಂದಿಯನ್ನು ನೀಡಲು ಆಸ್ಪತ್ರೆಯ ಮುಖ್ಯಸ್ಥರಲ್ಲಿ ಮನವಿ ಮಾಡಲಾಗಿದೆ. ಅವರು ಕಲುಹಿಸಿಕೊಡಲು ಒಪ್ಪಿದ್ದಾರೆ ಎಂದು ಹೇಳಿದರು.

ಗ್ರಾಮಗಳಿಂದ ಆಸ್ಪತ್ರೆಗೆ ಕರೆತರಲು ತೊಂದರೆ ಆಗದಂತೆ ಹೆಚ್ಚುವರಿಯಾಗಿ ಆಂಬುಲೆನ್ಸ್‌ಗಳನ್ನು ಕಳುಹಿಸಿಕೊಡಲಿದ್ದಾರೆ. ಇಡೀ ತಂಡ ಮುಂದೆ ಬಂದು ಆರೋಗ್ಯ ಸೇವೆ ಮಾಡುತ್ತಿದ್ದಾರೆ. ಟೆಸ್ಟಿಂಗ್‌‌ ಲ್ಯಾಬ್‌ ಮಾಡುತ್ತಿದ್ದು, ಇನ್ನೊಂದು ವಾರದಲ್ಲಿ ಕೃತಕ ಲ್ಯಾಬೊರೇಟರಿ ನಿರ್ಮಾಣವಾಗಲಿದೆ. ಸಾರ್ವಜನಿಕರಿಗೆ ಆರೋಗ್ಯ ಸೇವೆ ಮಾಡಲು ಮೆಡಿಕಲ್ ಕಾಲೇಜು ಕೈಜೋಡಿಸಲಿದೆ ಎಂದು ಹೇಳಿದರು.

ದಯಾನಂದ ಸಾಗರ ಗ್ರೂಫ್‌ ನ ಛೇರ‍್ಮನ್‌ ಹೇಮಚಂದ್ರ ಸಾಗರ, ಟಿಂಟಿ‍ಶ ಎಚ್‌.ಸಾಗರ್‌, ನಿಶಾನ್‌ ಸಾಗರ್‌, ಮೆಡಿಕಲ್‌ ಆಫೀಸರ್‌ ಡಾ.ಮದನ್‌ ಗಾಯಕವಾಡ್‌, ಡಿಎಸ್‌ಐಎಂಇಆರ್‌ ಡೀನ್‌ ಡಾ.ಅಶೋಕ್‌, ಜಿಲ್ಲಾಧಿಕಾರಿ ಅರ್ಚನಾ, ಉಪ ವಿಭಾಗಾಧಿಕಾರಿ ಡಾ. ದಾಕ್ಷಾಯಿಣಿ, ಡಿ.ಎಚ್‌.ಒ ಡಾ.ಯೋಗೀಶ್‌, ಸಿಇಒ ಇಕ್ರಂ, ಇಒ ಟಿ.ಎಸ್‌.ಶಿವರಾಮ್‌, ಟಿಎಚ್‌ಒ ಡಾ.ನಂದಿನಿ, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಎಚ್‌.ಎಸ್‌.ಮುರಳೀಧರ್‌, ಎಸ್‌.ಜಗನ್ನಾಥ್‌, ಮುಖಂಡರಾದ ಮಲ್ಲೇಶ್‌, ಪ್ರಕಾಶ್‌, ಆನಂದ, ರಾಜೇಶ್‌, ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT