ಗುರುವಾರ , ಅಕ್ಟೋಬರ್ 1, 2020
21 °C
ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ವಿಡಿಯೊ ಸಂವಾದ

ರಾಮನಗರ | ಕೋವಿಡ್ ಪರೀಕ್ಷೆ ಹೆಚ್ಚಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಗೆ ನಿಗದಿಯಾಗಿರುವ ಗುರಿಗೆ ಮಾತ್ರ ಕೋವಿಡ್ ಪರೀಕ್ಷೆಯನ್ನು ಸೀಮಿತಗೊಳಿಸದೇ ಅವಶ್ಯಕತೆ ಇರುವ ಕಡೆ ಹೆಚ್ಚಿನ ಪರೀಕ್ಷೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್ ಅಶ್ವತ್ಥ ನಾರಾಯಣ ಸೂಚಿಸಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಅವರು ಸೋಮವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಜಿಲ್ಲೆಯಲ್ಲಿ ಐ.ಎಲ್.ಐ ಹಾಗೂ ಎಸ್.ಎ.ಆರ್.ಐ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸಿ. ಮಧುಮೇಹ, ರಕ್ತದ ಒತ್ತಡ ಇತರೆ ಕಾಯಿಲೆಯಿಂದ ಬಳಲುತ್ತಿರುವವರ ಬಗ್ಗೆ ಹೆಚ್ಚಿನ ನಿಗಾ ವಹಿಸಿ. ಪ್ರಾಥಮಿಕ ಹಂತದಲ್ಲೇ ಕೋವಿಡ್ ಕಾಯಿಲೆಯನ್ನು ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸಿ ಎಂದರು. ಕೋವಿಡ್ ಸಂಬಂಧಿಸಿದಂತೆ ಸಾರ್ವಜನಿಕರು ಸಂಪರ್ಕಿಸಲು ತೆರೆಯಲಾಗಿರುವ ಸಹಾಯವಾಣಿಯ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ "ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಾರ್ವಜನಿಕರು ಹೆಚ್ಚು ಸಂಪರ್ಕಿಸುತ್ತಾರೆ’ ಎಂದು ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯಲ್ಲಿ ನರ್ಸ್‌‌ಗಳ ಕೊರತೆ ಇದ್ದರೆ ಬೇರೆ ಸ್ಥಳದಿಂದ 15 ನರ್ಸ್‌ಗಳ ವ್ಯವಸ್ಥೆ ಮಾಡಲಾಗುವುದು. ಅವರಿಗೆ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಆರೋಗ್ಯ ಇಲಾಖೆಯಿಂದ ಕಲ್ಪಿಸಿಕೊಡಬೇಕು ಎಂದು ಸಚಿವರು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್ ಮಾತನಾಡಿ ಜಿಲ್ಲೆಯಲ್ಲಿ 19,840 ಸ್ಯಾಂಪಲ್‌ಗಳ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ 1,670 ಪಾಸಿಟಿವ್ ಕಂಡುಬಂದಿರುತ್ತದೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಕೋವಿಡ್ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲೆಗೆ 6,000 ಆ್ಯಂಟಿಜೆನ್ ಕಿಟ್ ನೀಡಲಾಗಿದ್ದು 5,462 ಬಳಸಿಕೊಳ್ಳಲಾಗಿದೆ. ಇದರಲ್ಲಿ 469 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದೆ ಎಂದರು.

40 ಲಕ್ಷ ಮಾನವ ದಿನ: ಜಿಲ್ಲೆಯಲ್ಲಿರುವ 122 ಗ್ರಾಮ ಪಂಚಾಯಿತಿಗಳಿಂದ 2020ರ ಆಗಸ್ಟ್ 10ರ ಅಂತ್ಯಕ್ಕೆ ದಾಖಲೆಯಾದ 40 ಲಕ್ಷ ಮಾನವ ದಿನಗಳನ್ನು ನರೇಗಾ ಯೋಜನೆಯಡಿ ಸೃಜಿಸಲಾಗಿದೆ. ವಾರ್ಷಿಕವಾಗಿ ನೀಡಲಾಗಿರುವ 50 ಲಕ್ಷ ಮಾನವ ದಿನಗಳ ಗುರಿಯ ಪೈಕಿ ಈಗಾಗಲೇ 21 ಲಕ್ಷ ಮಾನವ ದಿನಗಳಿಗಿಂತ ಅಧಿಕ ಸಾಧನೆಯನ್ನು ಜಿಲ್ಲೆಯಲ್ಲಿ ಮಾಡಲಾಗಿದೆ. ಒಟ್ಟಾರೆಯಾಗಿ ಶೇ 173 ಸಾಧನೆ ಮಾಡುವ ಕೊರೊನಾದಿಂದ ಉದ್ಯೋಗ ಸಿಗದಿದ್ದವರಿಗೆ ಜಿಲ್ಲಾ ಪಂಚಾಯಿತಿ ನೆರವಾಗಿದೆ ಎಂದು ಇಕ್ರಂ ಸಚಿವರಿಗೆ ಮಾಹಿತಿ ನೀಡಿದರು.

ಆಟದ ಮೈದಾನ: ಜಿಲ್ಲೆಯಲ್ಲಿ 1400ಕ್ಕೂ ಹೆಚ್ಚು ಪ್ರಾಥಮಿಕ, ಪ್ರೌಢ ಮತ್ತು ಪ್ರೌಢಶಾಲೆಗಳಿವೆ. ಈ ಪೈಕಿ ಆಯ್ದ 500 ಶಾಲೆಗಳನ್ನು ಗುರುತಿಸಿ ಅಲ್ಲಿ ಆಟದ ಮೈದಾನವನ್ನು ನಿರ್ಮಿಸಲಾಗುತ್ತಿದೆ. ಸುಮಾರು ಒಂದು ಎಕರೆಯಷ್ಟು ಕನಿಷ್ಠ ಜಾಗವನ್ನು ಹೊಂದಿರುವ ಶಾಲೆಗಳಲ್ಲಿ ಮಕ್ಕಳಿಗೆ ಆಟದ ಮೈದಾನವನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ, ಓಟದ ಟ್ರ‍್ಯಾಕ್, ಕಬಡ್ಡಿ, ವಾಲಿಬಾಲ್ ಮತ್ತು ಬಾಸ್ಕೆಟ್ ಬಾಲ್ ಕೋರ್ಟ್, ಹೈಜಂಪ್ ಮತ್ತು ಲಾಂಗ್ ಜಂಪ್ ಗೆ ಅನುಕೂಲವಾಗುವಂತೆ ಮರಳು ಗುಂಡಿಗಳ ನಿರ್ಮಾಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಸಿಇಒ ಮಾಹಿತಿ ನೀಡಿದರು.

ಅಭಿನಂದನೆ: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ನೂತನವಾಗಿ ರೂಪಿಸಿರುವ ಜಿಲ್ಲಾವಾರು ಶ್ರೇಯಾಂಕ ವ್ಯವಸ್ಥೆಯಲ್ಲಿ ರಾಮನಗರ ಜಿಲ್ಲೆ 'ಎ' ಗ್ರೇಡ್ ಸಾಧನೆ ಮಾಡಿದೆ. ಇದಕ್ಕಾಗಿ ಜಿಲ್ಲೆಗೆ ಹೆಸರು ತಂದುಕೊಟ್ಟ ವಿದ್ಯಾರ್ಥಿಗಳು, ಅಧಿಕಾರಿಗಳು ಮತ್ತು ಶಿಕ್ಷಕರನ್ನು ಸಚಿವರು ಅಭಿನಂದಿಸಿದರು.

'ಈ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲಾವಾರು ಶ್ರೇಯಾಂಕ ವ್ಯವಸ್ಥೆಯಲ್ಲಿ ರಾಮನಗರ 'ಎ' ಗ್ರೇಡ್ ಸಾಧನೆ ಮಾಡಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಅಭಿನಂದನೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎನ್ ಅಶ್ವತ್ಥ ನಾರಾಯಣ ಹೇಳಿದರು.

ಕೋವಿಡ್ ಆರೈಕೆ ಕೇಂದ್ರ ಆರಂಭ

'ರಾಮನಗರದಲ್ಲಿರುವ ಕೋವಿಡ್-19 ಆಸ್ಪತ್ರೆಯು ಬಹುತೇಕ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕುಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೆರವಿನಿಂದ ಪ್ರತಿ ತಾಲ್ಲೂಕಿನಲ್ಲೂ ಕೋವಿಡ್ ಕೇರ್ ಸೆಂಟರ್ ಅನ್ನು ಪ್ರಾರಂಭಿಸಲಾಗುತ್ತಿದೆ. ಮೊದಲ ಹಂತದಲ್ಲಿ ದೊಡ್ಡ ಮರಳವಾಡಿಯಲ್ಲಿ 118 ಹಾಸಿಗೆಗಳ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ. ಇನ್ನು ಮುಂದೆ ಈ ಭಾಗದಲ್ಲಿನ ಕೋವಿಡ್ ಸೋಂಕಿತರಿಗೆ ಇಲ್ಲೇ ಚಿಕಿತ್ಸೆ ನೀಡಲಾಗುವುದು. ಅದೇ ರೀತಿ ಮಾಗಡಿಯಲ್ಲೂ 100 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಅನ್ನು ಇನ್ನೆರಡು ದಿನಗಳಲ್ಲಿ ಪ್ರಾರಂಭಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಸಚಿವರಿಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು