ಮಂಗಳವಾರ, ಮಾರ್ಚ್ 2, 2021
19 °C
ವಿವಿಧ ಇಲಾಖೆ ಅಧಿಕಾರಿಗಳೊಟ್ಟಿಗೆ ಡಿಸಿಎಂ ಅಶ್ವತ್ಥನಾರಾಯಣ ಸಭೆ

ತಜ್ಞ ವೈದ್ಯರು, ಸಿಬ್ಬಂದಿ ನೇಮಕಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ 550 ಹಾಸಿಗೆ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆಗೆ ಅಗತ್ಯ ತಜ್ಞ ವೈದ್ಯರು, ವೈದ್ಯರು ಹಾಗೂ ಸಿಬ್ಬಂದಿಯನ್ನು ಆದ್ಯತೆ ಮೇರೆಗೆ ಒದಗಿಸಲು ಕ್ರಮ
ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಿಂದ ಮಂಗಳವಾರ ನಡೆದ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು. ಹಾಲಿ ರಾಮನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 100 ಹಾಸಿಗೆಗಳ
ಜಿಲ್ಲಾಸ್ಪತ್ರೆಯನ್ನು ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆಯಾಗಿ ಪರಿವರ್ತಿಸಿ ಕಾಯಕಲ್ಪ ನೀಡಬೇಕು. ಇಲ್ಲಿನ ಸಿಬ್ಬಂದಿ ಪೈಕಿ ಹೆಚ್ಚುವರಿ ಸಿಬ್ಬಂದಿಯನ್ನು ಹೊಸ ಜಿಲ್ಲಾಸ್ಪತ್ರೆಗೆ ನಿಯೋಜಿಸಿಕೊಳ್ಳಬೇಕು ಎಂದು
ಸೂಚಿಸಿದರು.

ಟ್ರಾಮಾ ಸೆಂಟರ್: ಮೈಸೂರು ಮತ್ತು ಬೆಂಗಳೂರಿನ ನಡುವೆ 10 ಪಥದ ರಸ್ತೆ ನಿರ್ಮಾಣವಾಗುತ್ತಿದೆ. ಮೈಸೂರು ಮತ್ತು ಬೆಂಗಳೂರು ಹೊರತು ಪಡಿಸಿದರೆ ಮಧ್ಯಭಾಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇರುವುದಿಲ್ಲ. ನೂತನವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಹಾಗೂ ಟ್ರಾಮಾ ಸೆಂಟರ್‌ಗಾಗಿ ಬೇಕಿರುವ ಕಟ್ಟಡದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಇಲ್ಲಿಗೆ ತಜ್ಞ ವೈದ್ಯರನ್ನು ನೇಮಿಸುವ ಬಗ್ಗೆ ಅವರು ಮುಖ್ಯ ಕಾರ್ಯದರ್ಶಿ ಜೊತೆ ಚರ್ಚಿಸಿದರು.

ತಾಲ್ಲೂಕು ಆಸ್ಪತ್ರೆಗಳು ಮೇಲ್ದರ್ಜೆಗೆ: ಚನ್ನಪಟ್ಟಣ ಹಾಗೂ ಮಾಗಡಿ ತಾಲ್ಲೂಕಿನಲ್ಲಿ 50 ಹಾಸಿಗೆಯುಳ್ಳ ಆಸ್ಪತ್ರೆಗಳಿದ್ದು, ಈ ಆಸ್ಪತ್ರೆಗಳನ್ನು 100 ಹಾಸಿಗೆಗೆ ಉನ್ನತೀಕರಿಸಿಕೊಡಲು ಆರೋಗ್ಯ ಇಲಾಖೆಯ ಕೇಂದ್ರ
ಕಚೇರಿಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ತಿಳಿಸಿದರು.

ಹೈಟೆಕ್ ರೇಷ್ಮೆ ಮಾರುಕಟ್ಟೆ: ಪೊಲೀಸ್ ತರಬೇತಿ ಕೇಂದ್ರದ ಹತ್ತಿರವಿರುವ ರೇಷ್ಮೆ ತರಬೇತಿ ಸಂಸ್ಥೆಯಲ್ಲಿ ರೇಷ್ಮೆ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ಕನ್ಸಲ್ಟೆನ್ಸಿ ಸರ್ವಿಸ್ ಟೆಂಡರ್ ಕರೆಯಲಾಗಿದೆ. ಆಯ್ಕೆ ಪ್ರಕ್ರಿಯೆ
ಪ್ರಗತಿಯಲ್ಲಿದೆ. ₨75 ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ಈಗಾಲೇ ನಬಾರ್ಡ್‌ನಿಂದ ₨35 ಕೋಟಿ ನೀಡಲಾಗಿದೆ ಎಂದು ರೇಷ್ಮೆ ಇಲಾಖೆ ನಿರ್ದೇಶಕರು ವಿಡಿಯೋ ಸಂವಾದದಲ್ಲಿ ತಿಳಿಸಿದರು. ‘ಹಾಲಿ ಇರುವ ರೇಷ್ಮೆ ಮಾರುಕಟ್ಟೆ ಸ್ಥಳ ಚಿಕ್ಕದಾಗಿದ್ದು, ಗೂಡು ಹರಾಜಿಗೆ ಜಾಗದ ತೊಂದರೆ ಇದೆ. ಆದಷ್ಟು ಶೀಘ್ರ ಹೊಸ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ಕೆಲಸ ಪ್ರಾರಂಭವಾಗಬೇಕು’ ಎಂದು ಸಚಿವರು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಜಿಲ್ಲಾಶಸ್ತ್ರ ಚಿಕಿತ್ಸಕ ಡಾ. ಶಶಿಧರ್ ಮತ್ತಿತರರು ಇದ್ದರು.

ಮಾವು ಸಂಸ್ಕರಣ ಘಟಕ ಶೀಘ್ರ

ಚನ್ನಪಟ್ಟಣ ತಾಲ್ಲೂಕಿನ ಭೈರಾಪಟ್ಟಣದಲ್ಲಿ ಪ್ರಾರಂಭವಾಗುವ ಮಾವು ಸೇರಿದಂತೆ ವಿವಿಧ ಹಣ್ಣುಗಳ ಸಂಸ್ಕರಣ ಘಟಕದ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಆಡಳಿತ ವಿಭಾಗ, ತರಬೇತಿ ಕೇಂದ್ರ, ವಸ್ತು ಪ್ರದರ್ಶನ ಹಾಗೂ ಮಾರಾಟ ಕೇಂದ್ರ, ಸ್ಥಳೀಯ ಹಾಗೂ ಮತ್ತು ಆಮದು ಪ್ಯಾಕಿಂಗ್‌ ಘಟಕ, ಹಣ್ಣು ಮಾಗಿಸುವ ಚೇಂಬರ್, ಕೋಲ್ಡ್ ಸ್ಟೋರೇಜ್ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಆಸಕ್ತರಿಂದ ಅರ್ಜಿ ಕರೆಯಲಾಗಿದೆ. ಇದಕ್ಕಾಗಿ ₨10 ಕೋಟಿಯನ್ನು ಆರ್.ಕೆ.ವಿ,ಕೆ ರಫ್ತಾರ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಪಡೆಯಲು ಯೋಜಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕರು ವಿಡಿಯೋ ಸಂವಾದದಲ್ಲಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, ಯಾವುದೇ ತೊಂದರೆ ಇದ್ದಲ್ಲಿ ತಮ್ಮ ಗಮನಕ್ಕೆ ತಂದು ಪರಿಹರಿಸಿಕೊಂಡು ಶೀಘ್ರವಾಗಿ ಮಾವು ಸಂಸ್ಕರಣ ಘಟಕದ ಕೆಲಸ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ
ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು