ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರ್ಕಾವತಿ ಬಲದಂಡೆ ನಾಲೆ ಏತ ನೀರಾವರಿ ಯೋಜನೆಯ ಪುನಶ್ಚೇತನ ಕಾಮಗಾರಿಗೆ DCM ಚಾಲನೆ

Published : 8 ಸೆಪ್ಟೆಂಬರ್ 2024, 14:33 IST
Last Updated : 8 ಸೆಪ್ಟೆಂಬರ್ 2024, 14:33 IST
ಫಾಲೋ ಮಾಡಿ
Comments

ಕನಕಪುರ (ರಾಮನಗರ): ‘ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ನಮ್ಮ ಭಾಗದಲ್ಲಿ ಅಂತಹ ಮಳೆಯಾಗಿಲ್ಲ. ಹಾಗಾಗಿ, ಅರ್ಕಾವತಿ ಬಲದಂಡೆ ನಾಲೆ ಏತ ನೀರಾವರಿ ಯೋಜನೆಯನ್ನು ತುರ್ತಾಗಿ ಪುನಶ್ಚೇತನ ಮಾಡಿ ಚಾಲನೆ ನೀಡಿದ್ದೇನೆ. ಇದು ನನ್ನ ಬಹುದಿನಗಳ ಕನಸಾಗಿದ್ದು, ಸಾವಿರ ಎಕರೆಗೂ ಹೆಚ್ಚು ಭೂಮಿಯ ನೀರಾವರಿಗೆ ಅನುಕೂಲವಾಗಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ತಾಲ್ಲೂಕಿನ ಹಾರೋಬೆಲೆಯ ಮೂಲೆಗುಂದಿಯಲ್ಲಿ ಅರ್ಕಾವತಿ ಜಲಾಶಯ ಬಲದಂಡೆ ಏತನೀರಾವರಿ ಯೋಜನೆಯ ಪುನಶ್ಚೇತನ ಕಾಮಗಾರಿಗೆ ಶನಿವಾರ ಪ್ರಯೋಗಾರ್ಥ ಚಾಲನೆ ನೀಡಿ ಅವರು ಮಾತನಾಡಿದರು.

‘ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಸಚಿವನಾಗಿದ್ದಾಗ, ಒತ್ತಾಯ ಮಾಡಿ ಅವರನ್ನು ಕರೆದುಕೊಂಡು ಬಂದು ಅರ್ಕಾವತಿ ಬಲದಂಡೆ ನಾಲೆಯ ಏತ ನೀರಾವರಿ ಕಾಮಗಾರಿ ಉದ್ಘಾಟಿಸಲಾಗಿತ್ತು. ಯೋಜನೆಗೆ ಈ ಭಾಗದ ರೈತರು ಕಡಿಮೆ ಬೆಲೆಗೆ ತಮ್ಮ ಜಮೀನು ಕಳೆದುಕೊಂಡಿದ್ದಾರೆ. ಹಣಕ್ಕೆ ಕಷ್ಟವಿದ್ದ ಕಾಲದಲ್ಲೂ ಕೃಷ್ಣ ಅವರ ಕೈಯಿಂದ ಸುಮಾರು 300 ರೈತರಿಗೆ ಎಕರೆ ಇಂತಿಷ್ಟು ಎಂದು ಹೆಚ್ಚುವರಿಯಾಗಿ ₹7 ಕೋಟಿ ಪರಿಹಾರ ಕೊಡಿಸಲಾಗಿತ್ತು’ ಎಂದು ನೆನೆದರು.

‘ಇಂದು ನಾನೇ ನೀರಾವರಿ ಸಚಿವನಾಗಿದ್ದು, ಇಂತಹ ನೂರು ಯೋಜನೆಗಳನ್ನು ಮಾಡುವ ಶಕ್ತಿ ನನಗಿದೆ. ಶಿಂಷಾ ನೀರನ್ನು ಸಾತನೂರು ಹಾಗೂ ಕೆಂಪಮ್ಮನದೊಡ್ಡಿವರೆಗೂ ಕೊಂಡೊಯ್ಯಲಾಗುತ್ತಿದೆ. ದೊಡ್ಡಆಲಹಳ್ಳಿ ಕೆರೆಗೂ ನೀರು ತುಂಬಿಸಲಾಗುತ್ತಿದೆ. ಕೈಲಾಂಚ, ಮಾಗಡಿ, ಮಾತೂರು ಕೆರೆ, ಚನ್ನಪಟ್ಟಣ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಲಾಯಿತು. ಆದರೂ ಜನಕ್ಕೆ ನಮ್ಮ ಕೆಲಸದ ಮಹತ್ವ ಗೊತ್ತಾಗಲಿಲ್ಲ’ ಎಂದರು.

ಸಾಕಷ್ಟು ಶ್ರಮಿಸಿರುವೆ: ‘ಯೋಜನೆಗಾಗಿ ಆರಂಭದಿಂದಲೂ ಸಾಕಷ್ಟು ಶ್ರಮಿಸಿರುವೆ. ಯೋಜನೆಯ ಲಾಭ ಪಡೆಯುವವರು ತಮ್ಮ ಬದುಕು ಹಸನು ಮಾಡಿಕೊಳ್ಳಬೇಕು. ಯೋಜನೆಯಿಂದ ಅಂತರ್ಜಲ ಮಟ್ಟ ಹೆಚ್ಚಿ, ಕೃಷಿ– ಹೈನುಗಾರಿಕೆಗೆ ಉಪಯುಕ್ತವಾಗಲಿದೆ. ಇನ್ಮುಂದೆ ತಾಲ್ಲೂಕಿಗೆ ನಿಯಮಿತವಾಗಿ ಭೇಟಿ ನೀಡಿ, ಹೋಬಳಿ ಕೇಂದ್ರಗಳಲ್ಲೂ ಜನರ ಅಹವಾಲು ಆಲಿಸುವೆ’ ಎಂದು ಭರವಸೆ ನೀಡಿದರು.

‘ಈ ಭಾಗದ ಜನಕ್ಕೆ ನೀರಿನ ಮಹತ್ವ ಗೊತ್ತಾಗಬೇಕೆಂದರೆ ಕೋಲಾರ ಚಿಕ್ಕಬಳ್ಳಾಪುರಕ್ಕೆ ಹೋಗಿ ನೋಡಿ. ತರಕಾರಿ ಮತ್ತು ಹಣ್ಣುಗಳನ್ನು ಬೆಳೆದು ರೈತರು ಬದುಕುತ್ತಿದ್ದಾರೆ. 2013ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಕೆ.ಸಿ ವ್ಯಾಲಿ ಯೋಜನೆ ಕಾರ್ಯಗತಗೊಳಿಸಿ, ಕೊಳಚೆ ನೀರನ್ನು ಶುದ್ಧೀಕರಣ ಮಾಡಿ ಕೋಲಾರದ ಕೆರೆಗಳನ್ನು ತುಂಬಿಸಿತು. ಈಗ ಎತ್ತಿನಹೊಳೆಯಿಂದ ಕುಡಿಯುವ ನೀರು ಕೊಡಲಾಗುತ್ತದೆ’ ಎಂದು ತಿಳಿಸಿದರು.

ಈ ಭಾಗದ ಜನರು ತಮ್ಮ ಆಸ್ತಿ ಮಾರಿಕೊಳ್ಳಬಾರದು. ನಿಮ್ಮ ಆಸ್ತಿ ಮೌಲ್ಯವನ್ನು ಹೆಚ್ಚಿಸುತ್ತೇನೆ. ನನ್ನ ತಲೆಯಲ್ಲಿ ಒಂದಿಷ್ಟು ಲೆಕ್ಕಾಚಾರಗಳಿದ್ದು ಅವುಗಳೇನು ಎಂದು ನಿಮಗೆ ಈಗ ಅರ್ಥವಾಗುತ್ತಿರಬಹುದು.
ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ

‘ಸರ್ಕಾರವು ಜನ ಕಲ್ಯಾಣಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಪ್ರತಿ ಕುಟುಂಬಕ್ಕೆ ₹5 ಸಾವಿರಕ್ಕೂ ಹೆಚ್ಚು ಮೊತ್ತ ಪಾವತಿಯಾಗುವ ಉಚಿತ ಯೋಜನೆಗಳನ್ನು ನೀಡುತ್ತಿದೆ. ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು ₹20 ಸಾವಿರ ಕೋಟಿ ಭರಿಸುತ್ತಿದೆ. ವಿವಿಧ ಉಚಿತ ಯೋಜನೆಗಳಿಗಾಗಿ ಸರ್ಕಾರ ಸುಮಾರು ₹90 ಕೋಟಿಯನ್ನು ವಿನಿಯೋಗಿಸುತ್ತಿದೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್. ರವಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಇದ್ದರು.

‘ಶೆಡ್‌ನಲ್ಲಿ ಊಟ ಹಾಕಿಸ್ತಿದ್ದೀಯಲ್ಲ ಎಂದಿದ್ದರು’

‘ಶಿವಲಿಂಗೇಗೌಡರು ಶಾಸಕರಾಗಿದ್ದಾಗ ಇಲ್ಲಿನ ಸ್ಥಳೀಯ ನಾಯಕ ನಾಗಣ್ಣ ಬಂದು ನನ್ನನ್ನು ಭೇಟಿಯಾಗಿ ಹಾರೋಬೆಲೆ ಭಾಗದಲ್ಲಿದ್ದ ಸಿಮೆಂಟ್ ಕಾರ್ಖಾನೆಗಳು ವಾಪಸ್ ಹೋಗುತ್ತಿವೆ. ಈಗ ನೀರಾವರಿಗಾಗಿ ಒಂದಷ್ಟು ಕೆಲಸ ಮಾಡಿ ಎಂದಿದ್ದರು. ವೀರೇಂದ್ರ ಪಾಟೀಲ್ ಅವರ ಸಂಪುಟದಲ್ಲಿ ಸಚಿವರಾಗಿದ್ದ ಪುಟ್ಟಸ್ವಾಮಿಗೌಡರನ್ನು ಇಲ್ಲಿಗೆ ಕರೆದುಕೊಂಡು ಬಂದೆ. ಗುತ್ತಿಗೆದಾರರಿಗೆ ನಿರ್ಮಿಸಿದ್ದ ಶೆಡ್‌ ಒಂದರಲ್ಲಿ ಅವರಿಗೆ ಊಟ ಹಾಕಿಸಿದ್ದೆ. ಕಾರ್ಯಕರ್ತರ ಮನೆಯಲ್ಲಿ ಊಟ ಹಾಕಿಸುವುದು ಬಿಟ್ಟು ಗುತ್ತಿಗೆದಾರನ ಶೆಡ್ಡಿನಲ್ಲಿ ಊಟ ಹಾಕಿಸುತ್ತಿದ್ದೀಯಲ್ಲ ಶಿವಕುಮಾರ್ ಎಂದು ಗೌಡರು ಹೇಳಿದರು.

ಈ ಭಾಗದಲ್ಲಿ ದೊಡ್ಡ ಮನೆಗಳು ಇರಲಿಲ್ಲವಾದ್ದರಿಂದ ಅಲ್ಲಿ ಊಟ ಹಾಕಿಸಿದ್ದೆ. ಗೌಡರು ಹೀಗೆ ಹೇಳಿಬಿಟ್ಟರಲ್ಲ ಎಂದು ಬೇಸರವಾಗಿತ್ತು. ಆಗ ಸ್ಥಳೀಯರೊಬ್ಬರು ಮನೆ ಮಾರುತ್ತಿದ್ದಾರೆ ಎನ್ನುವ ವಿಷಯ ಕೇಳಿ ಗೆಳೆಯ ಸಂಪತ್ ಅವರನ್ನು ಕಳಿಸಿ 20 ಎಕರೆ ಜಮೀನಿನ ಜೊತೆಗೆ ಕೋಡಹಳ್ಳಿಯಲ್ಲಿ ಮನೆ ತೆಗೆದುಕೊಂಡೆ. ಕೋಡಹಳ್ಳಿಯಲ್ಲಿ ಈ ಮೊದಲೇ ಟೆಂಟ್ ಇದ್ದರೂ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಂಡಿರಲಿಲ್ಲ’ ಎಂದು ಶಿವಕುಮಾರ್ ನೆನೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT