ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವನದುರ್ಗದಲ್ಲಿ ಸಸಿ ನೆಡಲು ನಿರ್ಧಾರ

ಅರಣ್ಯ ಸಂರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿ
Last Updated 3 ಮೇ 2021, 4:05 IST
ಅಕ್ಷರ ಗಾತ್ರ

ಮಾಗಡಿ: ಪೂರ್ವ ಮುಂಗಾರು ಆರಂಭವಾಗಿದ್ದು, ತಾಲ್ಲೂಕಿನ ಸಾವನದುರ್ಗ ಗಿರಿದುರ್ಗದ ತಪ್ಪಲಿನಲ್ಲಿ ಇರುವ ಅರಣ್ಯ ಪ್ರದೇಶದಲ್ಲಿ ವಿವಿಧ ಜಾತಿಯ ಬೀಜ ಬಿತ್ತನೆ ಮತ್ತು ಸಸಿ ನೆಡುವ ಕಾರ್ಯ ಆರಂಭಿಸಲಾಗುವುದು ಎಂದು ಪರಿಸರವಾದಿ ಟಿ.ಆರ್. ಅಭಿಲಾಷ್ ತಿಳಿಸಿದರು.

ಸಾವನದುರ್ಗದ ಅರಣ್ಯ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ಸಸ್ಯ ಸಂಕುಲ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈ ಅರಣ್ಯ ಪ್ರದೇಶದಲ್ಲಿ ಪಾರಂಪರಿಕ ಗಿಡಮೂಲಿಕಾ ಸಸ್ಯಗಳಿವೆ. ಮಲೇಷ್ಯಾ, ಚೀನಾ ಸೇರಿದಂತೆ ಇತರೆ ದೇಶಗಳಿಂದ ಗಿಡಮೂಲಿಕಾ ತಜ್ಞರು ಭೇಟಿ ನೀಡಿದ್ದರು. 280 ಎಕರೆ ಪ್ರದೇಶದಲ್ಲಿ ಔಷಧಿ ಸಸ್ಯ ಸಂರಕ್ಷಣೆ ಪ್ರದೇಶವನ್ನು ಅರಣ್ಯ ಇಲಾಖೆಯವರು ರಕ್ಷಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಇಂದಿನ ದಿನಮಾನಗಳಲ್ಲಿ ಬೆಂಗಳೂರು, ಇತರೆ ನಗರಗಳಿಗೆ ಸಾಕಾಗುವಷ್ಟು ಆಮ್ಲಜನಕವನ್ನು ಪುಕ್ಕಟೆಯಾಗಿ ಒದಗಿಸುವ ತಾಣ ಸಾವನದುರ್ಗದ ಅರಣ್ಯ. ಇದನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ. ವಲಯ ಅರಣ್ಯಾಧಿಕಾರಿ ಪುಷ್ಪಲತಾ ಅವರೊಂದಿಗೆ ಚರ್ಚಿಸಿ, ಮಳೆಗಾಲದಲ್ಲಿ ಅರಣ್ಯ ಪ್ರದೇಶದಲ್ಲಿ ಕ್ಲಬ್ ಮಾಗಡಿ ಮತ್ತು ಪರಿಸರವಾದಿಗಳ ಸಹಕಾರದೊಂದಿಗೆ ಬೀಜದ ಉಂಡೆಗಳನ್ನು ಎಸೆಯುವುದು ಮತ್ತು ಸಸಿ ನೆಡುವ ಆಂದೋಲನ ಆರಂಭಿಸಲಾಗುವುದು ಎಂದರು.

ಅರಣ್ಯ ರಕ್ಷಕ ಎ.ಸಿ. ಮಹೇಶ್ ಮಾತನಾಡಿ, ‘6,774 ಎಕರೆ ವಿಸ್ತೀರ್ಣದ ಅರಣ್ಯದಲ್ಲಿ ವಿವಿಧ ಪ್ರಭೇದಕ್ಕೆ ಸೇರಿದ ಪಕ್ಷಿಸಂಕುಲ, ಮಂಗಗಳಿವೆ. ಕಾಡಾನೆ, ಚಿರತೆ, ಕರಡಿ, ಚಿಪ್ಪುಹಂದಿ, ನರಿ, ಮುಳ್ಳುಹಂದಿ, ಹಾವುಗಳಿವೆ. ನೀರಿನ ದೊಣೆಗಳು, ಹಳ್ಳಕೊಳ್ಳ, ಒರತೆಗಳಿವೆ’ ಎಂದರು.

ಪರಿಸರವಾದಿ ರವಿಶಂಕರ್ ಮಾತನಾಡಿ, ‘ಸಂಜೆ ಸಮಯದಲ್ಲಿ ಸಾವನದುರ್ಗದ ಕರಿಕಲ್ಲು ಮತ್ತು ಬಿಳಿಕಲ್ಲು ಬೆಟ್ಟದ ಮೇಲೆ ಹತ್ತಿ ನಿಂತರೆ ಸ್ವರ್ಗ ಸದೃಶವಾದಂತೆ ಬೆಂಗಳೂರು ನಗರದ ದೀಪಗಳು ನಕ್ಷತ್ರಗಳಂತೆ ಮಿನುಗುತ್ತವೆ. ಸಾವನದುರ್ಗದ ವನಸಂಪತ್ತು ಉಳಿಸಿ, ಬೆಳೆಸಲು ನಾವೆಲ್ಲರೂ ಶ್ರಮಿಸುವ ಅಗತ್ಯವಿದೆ’ ಎಂದರು.

ವಲಯ ಅರಣ್ಯ ಅಧಿಕಾರಿ ಪುಷ್ಪಲತಾ ಮಾತನಾಡಿ, ಸಾವನದುರ್ಗದ ವನಸಂಪತ್ತು, ಪರಿಸರ ಸಂರಕ್ಷಿಸಲು ಶಕ್ತಿಮೀರಿ ಶ್ರಮಿಸುತ್ತಿದ್ದೇವೆ. ಅರಣ್ಯ ಇಲಾಖೆಯ ಮೇಲಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು, ಪರಿಸರವಾದಿಗಳು ನೀಡುವ ಸಲಹೆ, ಸಹಾಯ ಬಳಸಿಕೊಂಡು ಅರಣ್ಯ ರಕ್ಷಿಸಲು ಅಹರ್ನಿಶಿ ದುಡಿಯುವುದು ನಮ್ಮ ಕರ್ತವ್ಯ. ಮಳೆಗಾಲದಲ್ಲಿ ನಂದನವನದಂತೆ ಕಂಗೊಳಿಸುವ ಸಾವನದುರ್ಗವನ್ನು ನೋಡುವುದೇ ಮಹದಾನಂದ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT