ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಆಗಬೇಕಿದ್ದವ ಶವವಾದ: ಯೋಧ ವೆಂಕಟ ನರಸಿಂಹಮೂರ್ತಿ ಪೋಷಕರ ಶೋಕ

ಹೊಂಬಾಳಮ್ಮನ ಪೇಟೆ ಯೋಧ ಜಮ್ಮುವಿನಲ್ಲಿ ಹುತಾತ್ಮ
Last Updated 15 ಜನವರಿ 2020, 13:25 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ಹೊಂಬಾಳಮ್ಮನ ಪೇಟೆಯಲ್ಲಿನ ಈ ಮನೆಯಲ್ಲೀಗ ಸಂಕ್ರಾಂತಿ ಸಂಭ್ರಮದ ಬದಲಿಗೆ ಸೂತಕದ ಛಾಯೆ ಆವರಿಸಿದೆ. ಬದುಕಿಗೆ ಆಸರೆ ಆಗಲಿದ್ದ ಮಗನನ್ನು ಕಳೆದುಕೊಂಡ ಪೋಷಕರ ಶೋಕ ಮನ ಕಲಕುವಂತಿದೆ.

ಜಮ್ಮುವಿನ ಉಧಂಪುರ್ ಸೈನಿಕ ನೆಲೆಯಲ್ಲಿ ಅರೆಸೈನಿಕ ಪಡೆಯ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾಗಡಿಯ ಯೋಧ ವೆಂಕಟ ನರಸಿಂಹಮೂರ್ತಿ (29) ಮಂಗಳವಾರ ಸಂಜೆ ಹುತಾತ್ಮರಾಗಿದ್ದಾರೆ. ಇದ್ದೊಬ್ಬ ಮಗ ಶವವಾಗಿ ಬರುವುದನ್ನು ಊಹಿಸಿಕೊಳ್ಳಲೂ ಆಗದೇ ಪೋಷಕರು ಕಣ್ಣೀರು ಹಾಕತೊಡಗಿದ್ದಾರೆ. ಗುರುವಾರ ಸಂಜೆ ವೇಳೆಗೆ ಮೃತದೇಹ ಮಾಗಡಿಗೆ ಬರುವ ನಿರೀಕ್ಷೆ ಇದೆ.

ಪಾಪಣ್ಣ–ವಿಜಯಮ್ಮ ದಂಪತಿಗೆ ಇಬ್ಬರು ಮಕ್ಕಳು. ಅವರಲ್ಲಿ ವೆಂಕಟ ಹಿರಿಯವರು. ಅವರಿಗೆ ತಂಗಿ ಗಿರಿಜಾ ಇದ್ದಾರೆ. ಕಾಲೇಜಿನ ದಿನಗಳಲ್ಲಿ ಉತ್ತಮ ಕುಸ್ತಿಪಟುವಾಗಿದ್ದ ವೆಂಕಟ್ ಓದಿನಲ್ಲೂ ಮುಂದೆ ಇದ್ದರು. ಮಗನಿಗೊಂದು ಮದುಮೆ ಮಾಡಲು ಪೋಷಕರು ಹುಡುಗಿಯ ಹುಡುಕಾಟದಲ್ಲಿ ಇದ್ದರು.

‘ಒಬ್ಬನೇ ಮಗನನ್ನು ಪೈಲ್ವಾನ್ ಮಾಡಿದೆ. ಆಟದಲ್ಲಿ ಸಾಕಷ್ಟು ಪ್ರಶಸ್ತಿ ಪಡೆದಿದ್ದ. ಓದಿನಲ್ಲೂ ಮುಂದಿದ್ದ. ಬಡತನದಲ್ಲಿ ಬೆಳೆದು ದೊಡ್ಡವನಾಗಿ ದೇಶದ ಗಡಿಕಾಯಲು ಹೋಗುತ್ತೇನೆ ಎಂದಾಗ, ಇಲ್ಲ ಎನ್ನದೇ ಕಳುಹಿಸಿದೆ. ಮೂರು ದಿನಗಳ ದಿನಗಳ ಹಿಂದೆ ಮೊಬೈಲ್‌ ಕರೆ ಮಾಡಿ ಅರ್ಧಗಂಟೆ ಮಾತನಾಡಿದ್ದ. ಮದುವೆ ಮಾಡಲು ಕನ್ಯೆ ನೋಡುತ್ತಿದ್ದೆವು. ವಿಧಿ ನಮ್ಮಿಂದ ನಮ್ಮ ಮಗನನ್ನು ಕಿತ್ತುಕೊಂಡಿದೆ. ಸಾವಿನ ಬಗ್ಗೆ ಖಚಿತವಾಗಿ ಯಾರೂ ಹೇಳುತ್ತಿಲ್ಲ’ ಎಂದು ಸೈನಿಕನ ತಂದೆ ಪಾಪಣ್ಣ ಕಂಬನಿ ಮಿಡಿದರು.

ತಾಯಿ ವಿಜಯಮ್ಮ ಪುತ್ರನ ಸಾವಿನಿಂದ ಕಂಗಾಲಾಗಿ ಅನ್ನನೀರು ಬಿಟ್ಟಿದ್ದಾರೆ. ಅಳುವುದನ್ನು ಬಿಟ್ಟರೆ ಬೇರೆನೂ ಮಾತನಾಡುತ್ತಿಲ್ಲ. ಅಣ್ಣನ ನೆನಪು ಮಾಡಿಕೊಂಡು ಗಿರಿಜ ಸಂಕಟಪಟ್ಟರು.

ಮೃತನ ಚಿಕ್ಕಪ್ಪನ ಮಗ ಗಂಗನರಸಿಂಹಯ್ಯ ಮಾತನಾಡಿ 'ಊರಿಗೆ ಉಪಕಾರಿಯಾಗಿದ್ದ ನನ್ನ ತಮ್ಮ ಸಾಯುವವನಲ್ಲ. ಧೃಢಕಾಯವಾಗಿದ್ದವನು. ಮೊನ್ನೆಯಷ್ಟೇ ರಾಜಸ್ತಾನದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದ. ಕೇರಳದಲ್ಲಿ ಒಂದು ತಿಂಗಳು ಕಬಡ್ಡಿ ತರಬೇತು ಪಡೆದು, ಹರಿಯಾಣದಲ್ಲಿ ನಡೆದ ಕಬಡ್ಡಿ ಟೂರ್ನಿಯಲ್ಲಿ ಕ್ಯಾಪ್ಟನ್ ಆಗಿ ತಂಡ ಜಯಗಳಿಸಲು ಶ್ರಮಿಸಿದ್ದ’ ಎಂದು ನೆನಪು ಮಾಡಿಕೊಂಡರು.

‘ಆತ ಮನೆಯ ಆಧಾರ ಸ್ತಂಭವಾಗಿದ್ದ. ತಾತನಿಂದ ಬಂದು ಹಳೆಯ ಕುಂಬಾರ ಹೆಂಚಿನ ಮನೆ ಶಿಥಿಲವಾಗಿದ್ದ ಕಾರಣ, ಬಾಡಿಗೆ ಮನೆ ಮಾಡಿ ಮನೆಯವರನ್ನು ಸಾಕುತ್ತಿದ್ದ’ ಎಂದು ನುಡಿದರು.

‘ವೆಂಕಟೇಶ ಹೊಂಬಾಳಮ್ಮನಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ, ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದಿದ್ದ. ನಂತರದಲ್ಲಿ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿಯು ಮುಗಿಸಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಬಿಎಂ ಪದವಿ ಗಳಿಸಿದ್ದ. ಓದಿದ ಜೊತೆಗೆ ಉತ್ತಮ ಕ್ರೀಡಾಪಟುವೂ ಆಗಿದ್ದ. 2013ರಲ್ಲಿ ಅರೆಸೈನಿಕ ಪಡೆಗೆ ಆಯ್ಕೆಯಾಗಿ 7 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ’ ಎಂದು ಅವರ ಬಾಲ್ಯದ ಗೆಳೆಯರಾದ ತ್ಯಾಗರಾಜು ಮತ್ತು ಕೃಷ್ಣಮೂರ್ತಿ ತಿಳಿಸಿದರು.

ತಹಶೀಲ್ದಾರ್‌ ಭೇಟಿ

ವೆಂಕಟ ಅವರ ಮನೆಗೆ ತಹಶೀಲ್ದಾರ್‌ಎನ್‌. ರಮೇಶ್ ಬುಧವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಅಂತ್ಯಕ್ರಿಯೆ ನಡೆಯಲಿರುವ ತೋಟದ ಸ್ಥಳವನ್ನೂ ಪರಿಶೀಲಿಸಿದರು. ಅಧಿಕಾರಿಗಳನ್ನು ಕಾಣುತ್ತಲೇ ಮೃತನ ಕುಟುಂಬಸ್ಥರ ಕಣ್ಣೀರು ಹೆಚ್ಚಾಯಿತು. ಪೇಟೆಯ ನಿವಾಸಿಗಳು ‘ಶವ ಬರುವುದು ಯಾವಾಗ? ನಮ್ಮ ಹುಡುಗನಿಗೆ ಏನಾಗಿದೆ?’ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದರು.

***
ವೆಂಕಟ ಅವರ ನಿಧನಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲ. ಗುರುವಾರ ಸಂಜೆ ವೇಳೆಗೆ ಶವ ಬರಲಿದ್ದು, ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು

–ಎನ್‌. ರಮೇಶ್‌ , ಮಾಗಡಿ ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT