ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣದಲ್ಲಿ ಪಕ್ಷಾಂತರ ಪರ್ವದ ಸದ್ದು: ಜೆಡಿಎಸ್‌ ಮುಖಂಡರು ಬಿಜೆಪಿಗೆ

ಜೆಡಿಎಸ್‌ನಿಂದ ಬಿಜೆಪಿ ತೆಕ್ಕೆಗೆ ಲಿಂಗೇಶ್‌ಕುಮಾರ್: ಇಂದು ನಿರ್ಧಾರ ಪ್ರಕಟ
Last Updated 18 ಫೆಬ್ರುವರಿ 2022, 7:28 IST
ಅಕ್ಷರ ಗಾತ್ರ

ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವದ ಸದ್ದು ಜೋರಾಗಿದೆ.

ಚನ್ನಪಟ್ಟಣದಲ್ಲಿ ತಮ್ಮ ವಿರೋಧಿ ಪಕ್ಷಗಳಿಂದ ಮುಖಂಡರನ್ನು ಬಿಜೆಪಿಗೆ ಸೆಳೆಯಲು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್‌ ಶತಪ್ರಯತ್ನ ನಡೆಸಿದ್ದಾರೆ.

ಇದೇ 21ರಂದು ಸಂಜೆ 6ಕ್ಕೆ ಬೆಂಗಳೂರಿನಲ್ಲಿರುವ ಮಲ್ಲೇಶ್ವರ ಕಚೇರಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಅಧ್ಯಕ್ಷತೆಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ಕಾರ್ಯಕ್ರಮದಲ್ಲಿ ಚನ್ನಪಟ್ಟಣದ ಜೆಡಿಎಸ್, ಕಾಂಗ್ರೆಸ್‌ನ ಹಲವು ಮುಖಂಡರು ಬಿಜೆಪಿ ಕೈ ಹಿಡಿಯಲಿದ್ದಾರೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು ತಿಳಿಸಿದ್ದಾರೆ.

ಚನ್ನಪಟ್ಟಣದ ಜೆಡಿಎಸ್ ಪ್ರಭಾವಿ ಮುಖಂಡರಲ್ಲಿ ಒಬ್ಬರಾದ ಲಿಂಗೇಶ್‌ಕುಮಾರ್ ಬಿಜೆಪಿ ಸೇರುವುದು ಖಚಿತವಾಗಿದೆ. ಹತ್ತಾರು ವರ್ಷದಿಂದ ಅವರು ಜೆಡಿಎಸ್‌ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಬಮುಲ್‌ ನಿರ್ದೇಶಕ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕರೂ ಆಗಿದ್ದರು. ಈಚೆಗೆ ತಾಲ್ಲೂಕು ಜೆಡಿಎಸ್ ಘಟಕದಲ್ಲಿ ಜಯಮುತ್ತು ಹಾಗೂ ಲಿಂಗೇಶ್‌ಕುಮಾರ್ ಬಣಗಳ ನಡುವೆ ಸಾಕಷ್ಟು ಜಟಾಪಟಿ ನಡೆಯುತ್ತಲೇ ಇತ್ತು. ಕಳೆದ ಬಮೂಲ್ ಆಡಳಿತ ಮಂಡಳಿ ಚುನಾವಣೆಯಲ್ಲೂ ಇದು ಬಹಿರಂಗವಾಗಿದ್ದು, ಇಬ್ಬರು ನಾಯಕರೇ ನೇರ ಸ್ಪರ್ಧೆಗೆ ನಿಂತಿದ್ದರು. ಬಳಿಕ ಲಿಂಗೇಶ್‌ ಪಕ್ಷದಿಂದ ಅಂತರ ಕಾಯ್ದುಕೊಂಡು ಬಂದಿದ್ದಾರೆ.

ಜೆಡಿಎಸ್‌ನ ಇನ್ನಷ್ಟು ಸ್ಥಳೀಯ ಮುಖಂಡರೂ ಅವರೊಟ್ಟಿಗೆ ಬಿಜೆಪಿ ಸೇರಲಿದ್ದಾರೆ ಎಂದು ಸುದ್ದಿ ಹಬ್ಬಿದೆ. ಇದಕ್ಕೆ ಜೆಡಿಎಸ್ ಹಾಗೂ ಕುಮಾರಸ್ವಾಮಿ ಯಾವ ರೀತಿ ಉತ್ತರ ನೀಡಲಿದ್ದಾರೆ ಎಂಬುದು ಸದ್ಯದ ಕುತೂಹಲವಾಗಿದೆ.

ನಾಲ್ವರಲ್ಲಿ ಜೆಡಿಎಸ್‌ ಅಧಿಕಾರ ಸೀಮಿತ: ಯುವಸೇನೆ ಆರೋಪ

ಚನ್ನಪಟ್ಟಣ: ‘ತಾಲ್ಲೂಕು ಜೆಡಿಎಸ್‌ನಲ್ಲಿ ಸಾಮಾನ್ಯ ಕಾರ್ಯಕರ್ತರ ಸಮಸ್ಯೆ ಆಲಿಸದ ಕಾರಣ ಬೇಸತ್ತು ಪಕ್ಷ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇವೆ’ ಎಂದು ಎಚ್‌ಡಿಕೆ ಯುವಸೇನೆ ಪದಾಧಿಕಾರಿಗಳು ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುವಸೇನೆ ಅಧ್ಯಕ್ಷ ಸುಣ್ಣಘಟ್ಟ ಅಶ್ವತ್ಥ್ ಮಾತನಾಡಿ, ಪಕ್ಷ ಸಂಘಟನೆಗೆ ಮಾತ್ರ ಕಾರ್ಯಕರ್ತರು ಬೇಕು. ಅಧಿಕಾರಕ್ಕೆ ಬಲಾಢ್ಯರು ಬೇಕು. ಕೇವಲ ನಾಲ್ಕು ಮಂದಿಗೆ ಮಾತ್ರ ಎಲ್ಲ ಅಧಿಕಾರವೂ ಬೇಕು. ಎಲ್ಲ ಕೆಲಸಗಳೂ ಬೇಕು. ಕಾರ್ಯಕರ್ತರನ್ನು ಕಡೆಗಣಿಸುವ ಮುಖಂಡರ ವರ್ತನೆಯಿಂದ ಬೇಸತ್ತು ಈ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.

ಕುಮಾರಸ್ವಾಮಿ ಚನ್ನಪಟ್ಟಣದ ಶಾಸಕರಾಗುವ ಮೊದಲೇ ಎಚ್‌ಡಿಕೆ ಯುವಸೇನೆ ಆರಂಭಿಸಿದ್ದೆವು. ಸುಮಾರು 700 ಸದಸ್ಯರನ್ನು ನೋಂದಣಿ ಮಾಡಿಕೊಂಡು ತಾಲ್ಲೂಕಿನಲ್ಲಿ ಪಕ್ಷ ಬಲಪಡಿಸಿದ್ದೇವೆ. ಸಂಘಟನೆಯಿಂದ ಮಾಡಿದ ಕಾರ್ಯಕ್ರಮಗಳಿಗೆ ಯಾರಿಂದಲೂ ಬಿಡಿಗಾಸು ಪಡೆದಿಲ್ಲ ಎಂದರು.

ಕುಮಾರಸ್ವಾಮಿ ಶಾಸಕರಾದ ನಂತರ ತಾಲ್ಲೂಕಿನಲ್ಲಿ ಸಾಮಾನ್ಯ ಕಾರ್ಯಕರ್ತರು ತಮಗೆ ರಾಜಕೀಯ ಸ್ಥಾನಮಾನ ಸಿಗುತ್ತದೆ ಎಂದುಕೊಂಡಿದ್ದರು. ಆದರೆ, ಇಲ್ಲಿ ಕೆಲವೇ ಗುತ್ತಿಗೆದಾರರಿಗೆ ಮಾತ್ರ ಮಣೆಹಾಕುವ ಪ್ರವೃತ್ತಿ ಆರಂಭವಾಯಿತು. ಪಕ್ಷಕ್ಕಾಗಿ ದುಡಿದವರು ಮೂಲೆಗುಂಪಾದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಷ್ಟು ವರ್ಷ ಜೆಡಿಎಸ್ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದೇವೆ. ಮುಂದೆ ನಮ್ಮ ರಾಜಕೀಯ ಜೀವನ ಭದ್ರಪಡಿಸಿಕೊಳ್ಳಬೇಕಾಗಿದೆ. ಹಾಗಾಗಿ, ಯುವಸೇನೆಯ ಬಹುತೇಕ ಮಂದಿ ಜೆಡಿಎಸ್ ತೊರೆಯಲು ನಿರ್ಧಾರ ಮಾಡಿದ್ದೇವೆ. ನಿಗದಿತ ದಿನದಂದು ಸಾಮೂಹಿಕವಾಗಿ ಬಿಜೆಪಿಗೆ ಸೇರ್ಪಡೆ ಆಗುತ್ತೇವೆ ಎಂದು ಸ್ಪಷ್ಟಪಡಿಸಿದರು.

ಯುವ ಸೇನೆಯ ಉಪಾಧ್ಯಕ್ಷ ಶಿವರಾಮು, ಪದಾಧಿಕಾರಿಗಳಾದ ಚಾಮರಾಜು, ಶಿವು, ವಸಂತಮ್ಮ, ರತ್ನಮ್ಮ, ಜಯರಾಮು, ರೋಷನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT