ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಮಗಂಟು ರೋಗ: ಶುಚಿತ್ವಕ್ಕೆ ಸಲಹೆ

ಗುನ್ನೂರು, ಹುಲಿಕೆರೆ ಗ್ರಾಮಗಳಲ್ಲಿ ರಾಸುಗಳ ವೀಕ್ಷಣೆ
Last Updated 23 ನವೆಂಬರ್ 2020, 4:20 IST
ಅಕ್ಷರ ಗಾತ್ರ

ರಾಮನಗರ: ರಾಸುಗಳಲ್ಲಿ ಚರ್ಮ ಗಂಟು ರೋಗಗಳು ಕಾಣಿಸಿಕೊಂಡ ಕೂಡಲೇ ವೈದ್ಯರ ಸಲಹೆ ಪಡೆದು ರಾಸುಗಳ ಆರೋಗ್ಯ ರಕ್ಷಿಸಲು ಮುಂದಾಗಬೇಕು ಎಂದು ಬಮೂಲ್‌ ನಿರ್ದೇಶಕ ಪಿ. ನಾಗರಾಜು ತಿಳಿಸಿದರು.

ಗುನ್ನೂರು, ಹುಲಿಕೆರೆ ಗ್ರಾಮಗಳಲ್ಲಿ ರೋಗ ಪೀಡಿತ ರಾಸುಗಳ ವೀಕ್ಷಣೆಯನ್ನು ಪಶು ವೈದ್ಯರ ಜೊತೆ ನಡೆಸಿ ಅವರು ಮಾತನಾಡಿದರು.

‘ಚರ್ಮಗಂಟುರೋಗ ಜಾನುವಾರುಗಳನ್ನು ಬಹುಬೇಗನೆ ಬಾಧಿಸುತ್ತಿದೆ. ರೋಗ ವೈರಾಣುವಾಗಿದ್ದು, ಸೊಳ್ಳೆಗಳಿಂದ ಹರಡುತ್ತದೆ. ರಾಸುಗಳಿಗೆ ಸೊಳ್ಳೆ ಕಚ್ಚದಂತೆ ಕೊಟ್ಟಿಗೆಯ ಸ್ವಚ್ಛತೆ ಕಾಪಾಡಬೇಕು. ನೊಣ, ಕೀಟ, ಸೊಳ್ಳೆ ರಾಸುಗಳ ಮೇಲೆ ಓಡಾಡದಂತೆ ಎಚ್ಚರವಹಿಸಿ ಗಾಯದ ಮೇಲೆ ಹೊಂಗೆ, ಬೇವಿನ ಎಣ್ಣೆ ಲೇಪಿಸಬೇಕು. ರೋಗ ಹತೋಟಿಗೆ ಬರುವವರೆಗೂ ರೈತರು ಜಾನುವಾರುಗಳನ್ನು ಬೇರೆಡೆಯಿಂದ ತರುವುದು ಮಾರಾಟ ಮಾಡುವುದು ಬೇಡ. ಇದರಿಂದ ಎಲ್ಲಾ ರಾಸುಗಳಿಗೂ ರೋಗ ಹರಡುತ್ತದೆ. ರೋಗ ಪೀಡಿತ ರಾಸಿನಲ್ಲಿ ಹಾಲಿನ ಇಳುವರಿ ಕುಂಟಿತವಾಗುತ್ತದೆ. ರೈತರು ಗಾಬರಿಯಾಗುವುದು ಬೇಡ. ಪಶುವೈದ್ಯರಿಂದ ಅಗತ್ಯ ಮಾಹಿತಿ ಪಡೆದುಕೊಂಡು ರಾಸುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸ ಬೇಕು ಬಮೂಲ್ ನಿಮ್ಮೊಂದಿಗಿದೆ’ ಎಂದು ತಿಳಿಸಿದರು.

ಹುಲಿಕೆರೆ ಪಶುವೈದ್ಯ ಆಸ್ಪತ್ರೆಯ ಡಾ. ನಾಗೇಶ್ ಮಾತನಾಡಿ, ‘ಗುನ್ನೂರು 8, ಹುಲಿಕೆರೆ 14, ಕೋಟಹಳ್ಳಿ 4 ರಾಸುಗಳಿಗೆ ಚರ್ಮಗಂಟು ರೋಗ ಅಂಟಿದೆ. ನಾಲ್ಕೈದು ರಾಸುಗಳು ಹೆಚ್ಚಿನ ಪ್ರಮಾಣದ ರೋಗಕ್ಕೆ ತುತ್ತಾಗಿವೆ ಈಗಾಗಲೇ ಸೂಕ್ತ ಚಿಕಿತ್ಸೆ ರಾಸುಗಳಿಗೆ ನೀಡಲಾಗಿದ್ದು ಹಲವು ರಾಸುಗಳು ರೋಗದಿಂದ ಪಾರಾಗಿವೆ. ಕಾಲು ಊತ, ಗುಂಡಿಗೆ, ಚಪ್ಪೆ ಊತ, ರಾಸುಗಳ ಮೈಮೇಲೆ ಗುಳ್ಳೆಗಳು, ಗಾಯಗಳು, ವಿಪರೀತ ಜ್ವರ, ಜೊಲ್ಲು ಸುರಿಸುವುದು, ಮೇವು ಬಿಡುವುದು, ನಿತ್ರಾಣಗೊಳ್ಳುವುದು ಚರ್ಮಗಂಟು ರೋಗದ ಲಕ್ಷಣವಾಗಿವೆ. ರೈತರು ರೋಗಪೀಡಿತ ರಾಸುಗಳನ್ನು ಬೇರೆಡೆ ಕಟ್ಟಬೇಕು ಸೊಳ್ಳೆಗಳಿಂದ ಹರಡುವ ವೈರಾಣು ರೋಗವಾಗಿರುವ ಕಾರಣ ಸೊಳ್ಳೆಗಳು ರಾಸುಗಳಿಗೆ ಕಚ್ಚದಂತೆ ಕೊಟ್ಟಿಗೆಯಲ್ಲಿ ಸೊಳ್ಳೆಪರದೆ ರಕ್ಷಣೆ ಜಾನುವಾರುಗಳಿಗೆ ಕೊಡಬೇಕು. ಪ್ರತಿದಿನ ರಾಸುಗಳನ್ನು ತೊಳೆದು ಶುಚಿತ್ವಗೊಳಿಸಿ ಅವುಗಳ ತಪಾಸಣೆ ವೈದ್ಯರಿಂದ ಮಾಡಿಸಬೇಕು ಎಂದರು.

ಬಮೂಲ್ ಉಪ ವ್ಯವಸ್ಥಾಪಕ ಡಾ. ಜಿ.ಟಿ. ಗಣೇಶ್ ಮಾತನಾಡಿ, ಒಕ್ಕೂಟದಿಂದ ಈಗಾಗಲೇ ರೈತರಿಗೆ ರೋಗ ಹತೋಟಿಗೆ ಬೇಕಾದ ಆಯುರ್ವೇದ ಔಷಧಿ ಸರಬರಾಜು ಮಾಡುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT