ಭಾನುವಾರ, ಜೂನ್ 13, 2021
22 °C
ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ವಿನಯಕುಮಾರ್‌ ಭೇಟಿ

‘ಸಾವನದುರ್ಗ ಅಭಿವೃದ್ಧಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ತಾಲ್ಲೂಕಿನ ಗಿರಿಧಾಮ ಸಾವನದುರ್ಗವನ್ನು ಪ್ರವಾಸೋದ್ಯಮ ಇಲಾಖೆಯ ವಿಶೇಷ ಅನುದಾನದಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ.ವಿನಯ್‌ ಕುಮಾರ್‌ ತಿಳಿಸಿದರು.

ಬುಧವಾರ ಸಾವನದುರ್ಗಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ರಾಜ್ಯದ ಗಿರಿದುರ್ಗಗಳಲ್ಲಿ ಒಂದಾಗಿರುವ ಸಾವನದುರ್ಗದಲ್ಲಿನ ನೆಲೆಪಟ್ನದಲ್ಲಿ ಐತಿಹಾಸಿಕ ನೆಲೆಗಳನ್ನು ಗುರುತಿಸಿರುವುದಾಗಿ ಪ್ರವಾಸಿ ಬುಕಾನನ್‌ ದಾಖಲಿಸಿದ್ದಾನೆ. ಬೃಹತ್‌ ಶಿಲಾವಲ್ಕಲ ಬೆಟ್ಟ, ಸುತ್ತಲೂ ಅರಣ್ಯ ಪ್ರದೇಶದ ನಡುವೆ ಚೋಳರ ಕಾಲದ ಸಾವಂಧಿ ವೀರಭದ್ರಸ್ವಾಮಿ, ಲಕ್ಷ್ಮನರಸಿಂಹಸ್ವಾಮಿ, ವೈದ್ಯನಾಥೇಶ್ವರ ಸ್ವಾಮಿ, ಕೆಂಪೇಗೌಡರ ಹಜಾರ ಇದೆ ಎಂದು ಹೇಳಿದರು. 

‌ಏಳುಸುತ್ತಿನ ಕೋಟೆ, ಬೆಟ್ಟದ ಮೇಲೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದ ನಂದಿಯ ಗೋಪುರ, ಕಾಡಿನಲ್ಲಿನ ಆಂಜನೇಯ ಸ್ವಾಮಿ, ಪರಕಾಲ ಮಠ, ಹೊಯ್ಸಳರ ಕಾಲದ ಕೃಷ್ಣಸ್ವಾಮಿ ಗುಡಿ, ಟಿಪ್ಪುಸುಲ್ತಾನ್ ಗುರು ಗುಲಾಬ್‌ ಹುಸೇನ್‌ ಷಾ ಖಾತ್ರಿ ದರ್ಗಾ ಇದೆ. ಇವುಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೋಟೆಯೊಳಗಿನ ಕಾಶಿವಿಶ್ವೇಶ್ವರಸ್ವಾಮಿ ಶಿಥಿಲ ಗುಡಿ, ವೀರಗಲ್ಲುಗಳು, ಬಿದಿರ ಕಟ್ಟೆ ಇತರೆ ಸ್ಮಾರಕಗಳನ್ನು ರಕ್ಷಿಸಿ, ಅಭಿವೃದ್ಧಿ ಪಡಿಸಲು ಯೋಜನೆ ತಯಾರಿಸಲಾಗಿದೆ. ಚಾರಣಿಗರಿಗೆ ಅನುಕೂಲ ಮಾಡಿಕೊಡಲಾಗುವುದು. ಶಿಥಿಲವಾಗಿರುವ ಪ್ರವಾಸಿ ಮಂದಿರವನ್ನು ದುರಸ್ತಿಪಡಿಸಲಾಗುವುದು. ಮಂಚನಬೆಲೆ, ಮಾಗಡಿ, ಕಲ್ಯಾ, ತಿಪ್ಪಗೊಂಡನಹಳ್ಳಿ ಜಲಾಶಯಗಳನ್ನು ನೋಡಲು ಒಂದು ದಿನದ ಪ್ಯಾಕೇಜ್‌ ರೂಪಿಸುವ ಯೋಜನೆ ಇದೆ ಎಂದು ಮಾಹಿತಿ ನೀಡಿದರು. 

ತಾಲ್ಲೂಕು ಪಂಚಾಯಿತಿ ಇಒ ಟಿ.ಪ್ರದೀಪ್‌ ಮಾತನಾಡಿ, ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಅವರ ಮಾರ್ಗದರ್ಶನದಲ್ಲಿ ಪ್ರವಾಸಿ ಮಂದಿರವನ್ನು ದುರಸ್ತಿ ಪಡಿಸಿ ಪ್ರವಾಸಿಗರು ಉಳಿದುಕೊಳ್ಳಲು ಸೂಕ್ತ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು.

ಅರಣ್ಯ ಇಲಾಖೆಯ ಮಹೇಶ್‌, ಹನುಮಯ್ಯ, ಗುಲಾಬ್‌ ಷರೀಫ್‌, ಹಂಚಿಕುಪ್ಪೆ ಪಂಚಾಯಿತಿ ಬಿಲ್‌ ಕಲೆಕ್ಟರ್‌ ಪ್ರವೀಣ್‌ ಮಾಹಿತಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.