ಮಂಗಳವಾರ, ನವೆಂಬರ್ 19, 2019
29 °C
ಗುತ್ತಿಗೆ ನೀಡಿ 9 ತಿಂಗಳಾದರೂ ಆರಂಭವಾಗದ ಸೇತುವೆ ನಿರ್ಮಾಣದ ಕಾಮಗಾರಿ

ರಾಮನಗರ| ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಿಂದ ಧರಣಿ ನಾಳೆ

Published:
Updated:
Prajavani

ರಾಮನಗರ: ಬಿಡದಿ ಹೋಬಳಿಯ ಗಾಣಕಲ್ ಮತ್ತು ಮುತ್ತುರಾಯನಗುಡಿ ಹಾಗೂ ಭದ್ರಾಪುರ ಕಾಲೊನಿಯ ನಡುವೆ ನದಿ ಹರಿಯುವ ಕಾರಣ, ಸುಗಮ ಸಂಚಾರಕ್ಕಾಗಿ ಸೇತುವೆ ನಿರ್ಮಿಸಿಕೊಡುವಂತೆ ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು.

ಇವರ ಮನವಿಗೆ ಸ್ಪಂದಿಸಿದ ಸರ್ಕಾರ ಸೇತುವೆ ನಿರ್ಮಾಣ ಕುರಿತು ರವಿಶಂಕರ್ ಎಂಬುವವರಿಗೆ ಕಳೆದ ಮಾರ್ಚ್‌ ತಿಂಗಳಿನಲ್ಲಿ ಗುತ್ತಿಗೆ ನೀಡಿತ್ತು. ಗುತ್ತಿಗೆ ನೀಡಿ ಒಂಬತ್ತು ತಿಂಗಳೇ ಕಳೆಯುತ್ತಾ ಬಂದಿದೆ. ಆದರೆ, ಈವರೆಗೆ ಸೇತುವೆ ನಿರ್ಮಾಣದ ಕಾಮಗಾರಿ ಇನ್ನೂ ಆರಂಭವಾಗಿಲ್ಲ.

ಧರಣಿ: ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದರೂ ಅನುಕೂಲವಾಗಿಲ್ಲ. ಆದ್ದರಿಂದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜ್ ಭದ್ರಯ್ಯ, ಕಾಲೊನಿ ನಿವಾಸಿಗಳಿಗೆ ಸೇತುವೆ ನಿರ್ಮಿಸಿ ಕೊಡುವಂತೆ ಒತ್ತಾಯಿಸಿ ಇದೇ 8 ರಂದು ಇಲ್ಲಿನ ಲೋಕೋಪಯೋಗಿ ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಲು ನಿರ್ಧರಿಸಿದ್ದಾರೆ.

30ಕ್ಕೂ ಹೆಚ್ಚು ಕುಟುಂಬದ ಗ್ರಾಮ: ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ಬಂದರೇ ಈ ಭಾಗದಲ್ಲಿನ ಸೀತನ ತೊರೆ ಹಳ್ಳದಲ್ಲಿ ನೀರು ಉಕ್ಕಿ ಹರಿಯುತ್ತದೆ. ಸುಮಾರು 30ಕ್ಕೂ ಹೆಚ್ಚು ಕುಟುಂಬಗಳಿರುವ ಈ ಗ್ರಾಮಕ್ಕೆ ಬೆಂಗಳೂರಿನಲ್ಲಿ ಮಳೆಯಾದರೆ ಇಲ್ಲಿನ ಜನರ ನೆಮ್ಮದಿ ಹಾಳಾಗುತ್ತದೆ. ಸಾಮಾನ್ಯ ದಿನಗಳಲ್ಲಿಯೂ ಹಳ್ಳದಲ್ಲಿ ಹರಿಯುವ ನೀರು ದಾಟಿಯೇ ಹೋಗಬೇಕಾದ ಸ್ಥಿತಿಯಲ್ಲಿದ್ದಾರೆ ಇಲ್ಲಿನ ಜನರು. ಇನ್ನು ಹಳ್ಳ ತುಂಬಿದರೇ ವಿದ್ಯಾರ್ಥಿಗಳು ಸ್ವಯಂ ಘೋಷಿತ ರಜೆ ಪಡೆಯಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿಕೊಂಡಿದ್ದಾರೆ.

ಪ್ರಥಮ ದರ್ಜೆ ಗುತ್ತಿಗೆದಾರ ರವಿಶಂಕರ್ ಎಂಬುವವರಿಗೆ ಸೇತುವೆ ನಿರ್ಮಾಣದ ಕುರಿತು ಸರ್ಕಾರ 5 ತಿಂಗಳ ಗಡುವು ಕೂಡ ನೀಡಿದೆ. ಆದರೆ, ಗಡುವಿಗೆ ಸೊಪ್ಪು ಹಾಕದ ಗುತ್ತಿಗೆದಾರ ಕಾಮಗಾರಿ ಇನ್ನೂ ಕೈಗೊಂಡಿಲ್ಲ. ಮಾರ್ಚ್ 9 ರಂದು ಕಾರ್ಯ ಆರಂಭಿಸಿ, ಆಗಸ್ಟ್ 8 ರಂದು ಪೂರ್ಣಗೊಳಿಸುವಂತೆ ಆದೇಶಿಸಿದೆ.

ಸೇತುವೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಸರ್ಕಾರ ಸೇತುವೆ ನಿರ್ಮಾಣ ಕುರಿತು ಈಗಾಗಲೇ ₹10 ಕೋಟಿ ಹಣ ಬಿಡುಗಡೆ ಮಾಡಿದೆ. ಈ ಕುರಿತು ಗಮನ ಹರಿಸಬೇಕಾದ ಇಲಾಖೆಯ ಅಧಿಕಾರಿಗಳು ಮಾತ್ರ ಇದಕ್ಕು ತಮಗೂ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂಬ ಆಕ್ಷೇಪ ಸ್ಥಳೀಯರದು.

ಚುನಾವಣೆ ಬಹಿಷ್ಕಾರ: 2001 ರಿಂದಲೂ ಸೇತುವೆ ನಿರ್ಮಿಸಿಕೊಡುವಂತೆ ಸ್ಥಳೀಯರು ಮುಖ್ಯಮಂತ್ರಿ, ಶಾಸಕರಿಗೆ, ಲೋಕೋಪಯೋಗಿ ಇಲಾಖೆ , ಸಚಿವರಿಗೆ ಹಾಗೂ ಜಿಲ್ಲಾ ಪಂಚಾಯಿತಿಗೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದ್ದಾರೆ. ಅನುದಾನ ಬಿಡುಗಡೆಗೊಂಡರು ಕಾಮಗಾರಿ ಪ್ರಾರಂಭವಾಗದಿದ್ದ ಕಾರಣ, ಕುಪಿತಗೊಂಡಿದ್ದ ಸ್ಥಳೀಯರು ಕಳೆದ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಲು ನಿರ್ಧರಿಸಿದ್ದರು.

ಚುನಾವಣಾ ಬಹಿಷ್ಕಾರಕ್ಕೆ ಹೆದರಿದ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಸ್ಥಳಕ್ಕೆ ದಾವಿಸಿ ಚುನಾವಣೆ ಮುಗಿದ ಕೂಡಲೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಚುನಾವಣೆ ಮುಗಿದು ಕೇಂದ್ರದಲ್ಲಿ ನೂತನ ಸರ್ಕಾರ ಆಸ್ತಿತ್ವಕ್ಕೆ ಬಂದು ತಿಂಗಳುಗಳೇ ಉರುಳಿದರೂ ಇಲ್ಲಿಯನ ತನಕ ಸೇತುವೆ ನಿರ್ಮಾನ ಕಾಮಗಾರಿ ಆರಂಭವಾಗಿಲ್ಲ.

ಪ್ರತಿಕ್ರಿಯಿಸಿ (+)