ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಮೀನು ಹಿಡಿಯಲು ಕೆರೆ ಏರಿ ಅಗೆದ ಭೂಪ!

ಉಯ್ಯಂಬಳ್ಳಿ ಗ್ರಾಮದಲ್ಲಿ ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ
Last Updated 19 ಜುಲೈ 2022, 4:06 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನ ಉಯ್ಯಂಬಳ್ಳಿ ಗ್ರಾಮದಲ್ಲಿ ಮೀನು ಹಿಡಿಯಲು ಕೆರೆಯ ಏರಿ ಅಗೆದು ನಾಶಪಡಿಸಿರುವ ವಿಚಾರ ಸಂಬಂಧ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಸೋಮವಾರ ನಡೆದ ವಾಗ್ವಾದವು ಘರ್ಷಣೆಗೆ ಕಾರಣವಾಯಿತು.

ಗ್ರಾಮ ಹೊರವಲಯದಲ್ಲಿರುವ ಪಂಚಾಯಿತಿಗೆ ಸೇರಿದ ಕೆರೆಗೆ ಶಿಂಷಾ ನದಿಯಿಂದ ನೀರು ತುಂಬಿಸಲಾಗಿತ್ತು. ಗ್ರಾಮದ ಯು.ಕೆ. ಶಿವಕುಮಾರ್‌ ಎಂಬುವರು ಏರಿಯನ್ನು ಜೆಸಿಬಿ ಯಂತ್ರದಿಂದ ಭಾನುವಾರ ಅಗೆದು ನೀರನ್ನು ಹೊರಗೆ ಬಿಟ್ಟಿದ್ದರು.

ಕೆರೆ ಏರಿ ಒಡೆದಿರುವ ಸಂಬಂಧ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷೆ ನಂದಿನಿಗೌಡ ನೇತೃತ್ವದಲ್ಲಿ ಪಕ್ಷದ ಮುಖಂಡರು ಪಂಚಾಯಿತಿಗೆ ಮುತ್ತಿಗೆ ಹಾಕಿ ಪಿಡಿಒ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಗ್ವಾದ ನಡೆಯಿತು.

ಪ್ರತಿಭಟನೆ ವೇಳೆ ಬಿಜೆಪಿಯವರು ಸಾರ್ವಜನಿಕವಾಗಿ ಬಳಕೆಯಾಗುವ ಕೆರೆಯನ್ನು ಕಾಂಗ್ರೆಸ್‌ ಮುಖಂಡ ಬಗೆಸಿ ಏರಿ ನಾಶಪಡಿಸಿದ್ದಾರೆ. ಆದರೂ, ಪಿಡಿಒ ಯಾವುದೇ ಕ್ರಮಕೈಗೊಂಡಿಲ್ಲ. ಆರೋಪಿಯನ್ನು ರಕ್ಷಿಸಲು ಮುಂದಾಗಿದ್ದಾರೆ. ಪಿಡಿಒಗೆ ಕಾಂಗ್ರೆಸ್‌ ರಕ್ಷಣೆ ನೀಡುತ್ತಿದೆ ಎಂದು ಧಿಕ್ಕಾರ ಕೂಗಿದರು.

ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್‌ ಮುಖಂಡರು, ಪಕ್ಷದ ವಿರುದ್ಧ ಏಕೆ ಪ್ರತಿಭಟನೆ ಕೂಗುತ್ತಿದ್ದೀರಿ. ಕೆರೆ ಏರಿ ಒಡೆದಿರುವುದಕ್ಕೂ ಕಾಂಗ್ರೆಸ್‌ಗೂ ಏನು ಸಂಬಂಧ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ನಾಯಕರು ಕಾಂಗ್ರೆಸ್‌ ವಿರುದ್ಧ ಘೋಷಣೆ ಕೂಗಿ ತಾವೂ ಪ್ರತಿಭಟನೆಗೆ ಮುಂದಾದರು.

ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಎರಡು ಕಡೆಯಿಂದ ಕೈಮಿಲಾಯಿಸುವ ಹಂತಕ್ಕೆ ಹೋಯಿತು. ಅಂತಿಮವಾಗಿ ಬಿಜೆಪಿಯವರು ಕೆರೆ ಏರಿ ಒಡೆದಿದ್ದರೂ ಯಾವುದೇ ಕ್ರಮಕೈಗೊಳ್ಳದ ಪಿಡಿಒ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ನೀವು ಅವರನ್ನು ರಕ್ಷಣೆ ಮಾಡಲು ನಮ್ಮ ವಿರುದ್ಧವೇ ಗಲಾಟೆ ಮಾಡುತ್ತಿದ್ದೀರಿ ಎಂದು ದೂರಿದರು.

ಪಂಚಾಯಿತಿ ಮುಂದೆ ಗಲಾಟೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಸಾತನೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಪಕ್ಷದ ಮುಖಂಡರನ್ನು ಸಮಾಧಾನಪಡಿಸಿ ಅಲ್ಲಿಂದ ಹೊರಗೆ ಕಳುಹಿಸಿದರು. ಪಿಡಿಒ ಅವರು ಬಿಜೆಪಿಯಿಂದ ನೀಡಿದ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

‘ಕಾಂಗ್ರೆಸ್‌ ಮುಖಂಡರು ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು ಗುತ್ತಿಗೆ ಪಡೆದಿದ್ದಾರೆ. ಮೀನು ಹಿಡಿಯುವ ಉದ್ದೇಶದಿಂದ ಕೆರೆಯಲ್ಲಿದ್ದ ನೀರನ್ನು ಖಾಲಿ ಮಾಡಲು ಏರಿ ಒಡೆದಿದ್ದಾರೆ. ಇದು ಕಾನೂನುಬಾಹಿರ ಕೃತ್ಯ’ ಎಂದುಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ನಂದಿನಿಗೌಡ ದೂರಿದರು.

ಪಿಡಿಒ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯವಹಿಸಿದ್ದರು. ಕಾಂಗ್ರೆಸ್‌ನವರು ನಮ್ಮ ವಿರುದ್ಧವೇ ಪ್ರತಿಭಟನೆ ಮುಂದಾಗಿದ್ದಾರೆ ಎಂದು ಟೀಕಿಸಿದರು.

‘ಶಿವಕುಮಾರ್‌ ಎಂಬುವರು ಜೆಸಿಬಿಯಿಂದ ಕೆರೆ ಏರಿ ಬಗೆಸಿದ್ದು ಪರಿಶೀಲಿಸಲಾಗಿದೆ. ಈ ಬಗ್ಗೆ ಸಾತನೂರು ಠಾಣೆಗೆ ದೂರು ನೀಡಿದ್ದೇವೆ. ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಕೆರೆ ಏರಿ ಒಡೆಯಲು ಯಾರಿಗೂ ಅವಕಾಶವಿಲ್ಲ. ಶಿವಕುಮಾರ್‌ ಕೆರೆ ಒಡೆದಿರುವುದು ತಪ್ಪು’ ಎಂದು ಪಿಡಿಒ ಮುನಿಮಾರೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT