ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಬಂದ್‌ ಪ್ರಾಯೋಜಿತ: ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಅಡ್ಡಿ

ಶಾಸಕ ಎಚ್.ಡಿ. ಕುಮಾರಸ್ವಾಮಿ ಆರೋಪ
Last Updated 22 ಫೆಬ್ರುವರಿ 2021, 5:33 IST
ಅಕ್ಷರ ಗಾತ್ರ

ಚನ್ನಪಟ್ಟಣ: ರಾಮನಗರದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ಅಕ್ಕೂರು ಗ್ರಾಮದಲ್ಲಿ ಭಾನುವಾರ ನೂತನ ಭೈರವೇಶ್ವರ ದೇವಸ್ಥಾನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ರೇಷ್ಮೆ ಬೆಳೆಗಾರರು, ರೀಲರ್ಸ್‌ಗಳ ಅನುಕೂಲಕ್ಕಾಗಿ ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ. ಇದನ್ನು ತಪ್ಪಿಸಲು ಕೆಲವರು ರಾಜಕೀಯವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ಬಂದ್ ಮಾಡಲಾಗಿದೆ. ಇದರಿಂದ ಮಾರುಕಟ್ಟೆ ನಿರ್ಮಾಣ ತಡೆ ಸಾಧ್ಯವಿಲ್ಲ ಎಂದು ಹೇಳಿದರು.

ರಾಮನಗರ ಬಂದ್ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತು. ಮಾಡುವವರಿಗೆ ದೂರದೃಷ್ಟಿ, ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ. ನಿನ್ನೆ ನಡೆದ ರಾಮನಗರ ಬಂದ್ ಪ್ರಾಯೋಜಿತವಾಗಿ ನಡೆದಿದೆ. ಜನರಿಂದ ಯಾವುದೇ ಬಂದ್ ನಡೆದಿಲ್ಲ. ಬಂದ್‌ಗೆ ಯಾಯ‍್ಯಾರು ಏನೇನು ದೇಣಿಗೆ ಕೊಟ್ಟಿದ್ದಾರೆ ಎನ್ನುವುದು ಗೊತ್ತಿದೆ. ಇದು ಜನರಿಂದ ನಡೆದ ಹೋರಾಟವಲ್ಲ. ಮುಂದಿನ ಚುನಾವಣೆಯಲ್ಲಿ ರಾಮನಗರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗುವವನು ಹಣ ಕೊಟ್ಟಿದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಮುಂಬರುವ ನಗರಸಭೆ ಚುನಾವಣೆಯಲ್ಲಿ ಜನರ ದಾರಿ ತಪ್ಪಿಸಲು ಕಾಂಗ್ರೆಸ್‌ನವರು ಹೊರಟಿದ್ದಾರೆ. ಕಾಂಗ್ರೆಸ್‌ನಿಂದ ರಾಮನಗರಕ್ಕೆ ಏನಾಯ್ತು, ನನ್ನಿಂದ ಏನಾಯ್ತು ಎಂದು ಜನರು ತೀರ್ಮಾನ ಮಾಡಲಿ. ಇಲ್ಲಿ ಜಾತಿ ಪ್ರಶ್ನೆ ಇಲ್ಲ. ಮುಸ್ಲಿಂ ಬಾಂಧವರಿಗೂ ತಿಳಿಸಿ ಹೇಳುತ್ತೇನೆ. ನಾನು ರಾಮನಗರ ಶಾಸಕನಾದ ಮೇಲೆ ಒಂದೇ ಒಂದು ಕೋಮುಗಲಭೆಗೆ ಅವಕಾಶ ಕೊಟ್ಟಿಲ್ಲ. ಇದು ರಾಮನಗರದ ಮುಸ್ಲಿಂ ಬಾಂಧವರಿಗೂ ಗೊತ್ತಿದೆ ಎಂದರು.

ದೇವಸ್ಥಾನಗಳು ಮನಸ್ಸಿಗೆ ನೆಮ್ಮದಿ ನೀಡುವ ತಾಣಗಳಾಗಿವೆ. ಗ್ರಾಮದ ಒಗ್ಗಟ್ಟು ಪ್ರದರ್ಶಿಸಲು ದೇವಸ್ಥಾನ ಸಹಕಾರಿಯಾಗಿದೆ. ಗ್ರಾಮಸ್ಥರು ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲದಂತೆ ಸಂತೋಷದಿಂದ ಬಾಳಬೇಕು ಎಂದು ಕಿವಿಮಾತು
ಹೇಳಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಯಮುತ್ತು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿಬಿಎಂಪಿ ಸದಸ್ಯೆ ನೇತ್ರಾವತಿ, ಎಂಜಿನಿಯರ್‌ಗಳಾದ ರಘುನಂದನ್, ನಾಗರಾಜು, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೃಷ್ಣೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT