ರಾಮನಗರ: ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು, ತೀವ್ರ ಬರದಿಂದ ನಲುಗುತ್ತಿರುವ ಜಿಲ್ಲೆಯ ಹಾರೋಹಳ್ಳಿ, ಕನಕಪುರ ಹಾಗೂ ಸಾಧಾರಣ ಬರಪೀಡಿತ ಚನ್ನಪಟ್ಟಣ ತಾಲ್ಲೂಕಿನಲ್ಲಿ ಬುಧವಾರ ‘ಫಾಸ್ಟ್‌ಟ್ರಾಕ್’ ಬರ ಪರಿಶೀಲನೆ ನಡೆಸಿದರು! ಸಮಯದ ಅಭಾವದಿಂದಾಗಿ ಉಳಿದೆರಡು ತಾಲ್ಲೂಕುಗಳಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ.
ಹಾರೋಹಳ್ಳಿ ಪಟ್ಟಣದಲ್ಲಿ ‘ತಾಲ್ಲೂಕಿನ ಬರಪೀಡಿತ ಪ್ರದೇಶಗಳ ವೀಕ್ಷಣೆ ಮತ್ತು ರೈತರ ಜೊತೆ ಸಮಾಲೋಚನೆ’ ಬ್ಯಾನರ್ ಹೊಂದಿದ್ದ
ಪೆಂಡಾಲ್‌ನಲ್ಲಿ, ಬೆಳಿಗ್ಗೆ 8.50ಕ್ಕೆ ನಾಲ್ವರು ರೈತರ ಅಹವಾಲು ಆಲಿಸುವುದರೊಂದಿಗೆ ಸಚಿವರ ಕಾರ್ಯಕ್ರಮ ಶುರುವಾಯಿತು.
ಅಲ್ಲಿಂದ ಕನಕಪುರ ಮತ್ತು ಚನ್ನಪಟ್ಟಣ ತಾಲ್ಲೂಕಿನ ರಸ್ತೆ ಬದಿಯ ತೆಂಗು, ರಾಗಿ, ಜೋಳದ ಜಮೀನುಗಳಿಗೆ ಭೇಟಿ ನೀಡಿದ ಸಚಿವರು, ಎಲ್ಲಿಯೂ ಹತ್ತದಿನೈದು ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಲ್ಲಲಿಲ್ಲ. ರೈತರ ಸಮಸ್ಯೆ ಆಲಿಸಲಿಲ್ಲ. ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಮತ್ತು ರೈತರೊಂದಿಗೆ ಸಭೆಯನ್ನೂ ನಡೆಸಲಿಲ್ಲ.
ಮಧ್ಯಾಹ್ನ 3.20ಕ್ಕೆ ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆದರು. ಬರ ನಿರ್ವಹಣೆ ಕುರಿತು ಸ್ಥಳೀಯ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯ ಎಸ್. ರವಿ ಅವರ ಸಲಹೆ ಜೊತೆಗೆ, ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿಇಒ ಅವರು ತೋರಿಸಿದ ಪ್ರಾತ್ಯಕ್ಷಿಕೆಯನ್ನು ಆಲಿಸಿದರು. ತಾವು 4 ನಿಮಿಷವಷ್ಟೇ ಮಾತನಾಡಿ, 40 ನಿಮಿಷದಲ್ಲಿ ಸಭೆ ಮುಗಿಸಿದರು.
ಬರ ಕುರಿತು ಜನಪ್ರತಿನಿಧಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಜ್ಜಾಗಿ ಬಂದಿದ್ದ ಕೃಷಿ, ತೋಟಗಾರಿಕೆ, ರೇಷ್ಮೆ, ನೀರಾವರಿ, ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತ್ವರಿತವಾಗಿ ಮುಗಿದ ಸಭೆಗೆ ಸಂತಸಗೊಂಡು ತಮ್ಮ ಕಚೇರಿಯತ್ತ ಹೆಜ್ಜೆ ಹಾಕಿದರು.
ಸಚಿವರ ಬರ ವೀಕ್ಷಣೆಗೆ ರಾಮನಗರದ ಜನಪ್ರತಿನಿಧಿಯಾಗಿ ಶಾಸಕ ಹುಸೇನ್ ಮತ್ತು ಕನಕಪುರದ ಪ್ರತಿನಿಧಿಯಾಗಿ ಪರಿಷತ್ ಸದಸ್ಯ ರವಿ ಸಾಥ್ ಕೊಟ್ಟರು. ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಕ್ಷೇತ್ರವಾದ ಚನ್ನಪಟ್ಟಣದಲ್ಲಿ ಅಧಿಕಾರಿಗಳು ಮಾತ್ರ ಇದ್ದರು.
ಬರ ವೀಕ್ಷಣೆ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ತಂದಿದ್ದ ಹಾರಗಳನ್ನು ಸಚಿವರು ನಿರಾಕರಿಸಿದರು. ಮಾರ್ಗಮಧ್ಯೆ ಕಬ್ಬಾಳಮ್ಮ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಚನ್ನಪಟ್ಟಣದ ಜಗದಾಪುರದ ಮುಂದಿನ ಗ್ರಾಮದಲ್ಲಿ ಮಳೆ ಲೆಕ್ಕಿಸದೆ ಛತ್ರಿ ಹಿಡಿದು ರಸ್ತೆ ಪಕ್ಕದ ಜಮೀನಿನ ಬೆಳೆ ವೀಕ್ಷಿಸಿದರು.
ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎನ್. ಅಂಬಿಕಾ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮುನೇಗೌಡ, ಪಶು ಸಂಗೋಪನೆ ಇಲಾಖೆಯ ಡಾ. ಎಂ. ಆಂಜನಪ್ಪ ಸೇರಿದಂತೆ ಕೆಲ ಇಲಾಖೆಗಳ ಅಧಿಕಾರಿಗಳು ಇದ್ದರು. 25ಕ್ಕೂ ಹೆಚ್ಚು ಕಾರುಗಳು ಸಚಿವರನ್ನು ಹಿಂಬಾಲಿಸಿದವು.
ರಸ್ತೆಯಲ್ಲೇ ರೈತರಿಂದ ಮನವಿ: ಹಿರಿಯ ರೈತ ಮುಖಂಡ ಸಿ. ಪುಟ್ಟಸ್ವಾಮಿ ನೇತೃತ್ವದಲ್ಲಿ ರೈತರು ಚನ್ನಪಟ್ಟಣದಲ್ಲಿ ಸಚಿವರನ್ನು ತಡೆದು, ಬರ ಪರಿಹಾರಕ್ಕೆ ಕೈಗೊಳ್ಳಬೇಕಾದ 12 ಕ್ರಮಗಳ ಕುರಿತು ಮನವಿ ಸಲ್ಲಿಸಿದರು. ಹೊಂಬಾಳೇಗೌಡ, ಮಲ್ಲಿಕಾರ್ಜುನಗೌಡ, ರಾಜು, ಮಲ್ಲಿಕಾರ್ಜುನ್, ಸಿದ್ದಪ್ಪ, ದೇವರಾಜು, ಪುಟ್ಟರಾಜು, ಜಗದೀಶ್, ರುದ್ರಪ್ಪ ಮುಂತಾದವರು ಇದ್ದರು.
ಎಲ್ಲಾ ತಾಲ್ಲೂಕುಗಳಲ್ಲಿ ಮಳೆ ಕೊರತೆ ಇದೆ. ಕನಕಪುರದ ಕೋಡಿಹಳ್ಳಿ ಮತ್ತು ರಾಮನಗರ ಕಸಬಾ ಹೋಬಳಿಯಲ್ಲಿ ಹೆಚ್ಚಿನ ಕೊರತೆ ಇದ್ದು ತಾಲ್ಲೂಕುಗಳಲ್ಲಿ ಶೇ 50ರಷ್ಟು ಬೆಳೆ ನಷ್ಟವಾಗುವ ಪರಿಸ್ಥಿತಿ ಎದುರಾಗಿದೆ– ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಜಿಲ್ಲಾಧಿಕಾರಿ
‘ತೀವ್ರ ಬರ ಎದುರಿಸುತ್ತಿರುವ ಕರ್ನಾಟಕದ ನೆರವಿಗೆ ಕೇಂದ್ರ ಸರ್ಕಾರ ಬಾರದಿದ್ದರೂ ರಾಜ್ಯ ಸರ್ಕಾರ ನಮ್ಮ ರೈತರ ಪರ ಸದಾ ಇರಲಿದೆ. ಆ ನಿಟ್ಟಿನಲ್ಲಿ ಸ್ವತಃ ನಾನೇ ಬರಪೀಡಿತ ಪ್ರದೇಶಗಳನ್ನು ವೀಕ್ಷಣೆ ಮಾಡಿ ರೈತರ ಭೇಟಿ ಮಾಡಿದ್ದೇನೆ. ಬರ ಪರಿಹಾರ ಕಾರ್ಯಕ್ರಮಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಜಿಲ್ಲಾಡಳಿತಕ್ಕೆ ಹಣ ಬಿಡುಗಡೆ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು.
ಹಾರೋಹಳ್ಳಿ ಮತ್ತು ರಾಮನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ‘ಬೆಳೆ ನಷ್ಟ ಮೇವು ಕೊರತೆ ನೀರಿನ ಸಮಸ್ಯೆ ಬೆಳೆಗಳಿಗೆ ರೋಗಬಾಧೆ ಸೇರಿದಂತೆ ಬರದಿಂದಾಗಿ ಉಂಟಾಗಿರುವ ಸಮಸ್ಯೆಗಳಿಗೆ ಅಧಿಕಾರಿಗಳಿಗೆ ವಿಳಂಬ ಮಾಡದೆ ಸ್ಪಂದಿಸಬೇಕು. ಕುಡಿಯುವ ನೀರಿನ ಸಮಸ್ಯೆಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಬೆಳೆಗಳಲ್ಲಿ ಕಾಣಿಸಿಕೊಂಡಿರುವ ರೋಗಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯವರು ಆದಷ್ಟು ಬೇಗ ಪರಿಹಾರ ಕಂಡುಹಿಡಿಯಬೇಕು. ಬರ ಕುರಿತು ನಡೆಯುವ ಸಚಿವ ಸಂಪುಟದಲ್ಲಿ ಸರ್ಕಾರ ಪರಿಹಾರ ಕಾರ್ಯಕ್ರಮಗಳನ್ನು ಘೋಷಿಸಲಿದೆ. ಹೊಸ ತಾಲ್ಲೂಕು ಹಾರೋಹಳ್ಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ಜೊತೆಗೆ ಇಲ್ಲಿನ ದೇವಸ್ಥಾನಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಪೈರು ಕಿತ್ತು ತೋರಿಸಿದ ರೈತರು ಕನಕಪುರ ತಾಲ್ಲೂಕಿನ ದಾಳಿಂಬ ಸಮೀಪದ ಕಾಳೇಗೌಡನದೊಡ್ಡಿ ಚನ್ನಪಟ್ಟಣದ ಜಗದಾಪುರದ ರೈತರ ಹೊಲಗಳಿಗೆ ಭೇಟಿ ನೀಡಿದ ಸಚಿವರು ರೋಗಬಾಧೆ ಮತ್ತು ಮಳೆಯಿಂದ ಒಣಗಿದ ಬೆಳೆಗಳ ಪೈರನ್ನು ಪರಿಶೀಲಿಸಿದರು. ಬೆಳೆಗಳನ್ನು ರೋಗದಿಂದ ಪಾರು ಮಾಡಲು ಅಗತ್ಯ ಔಷಧೋಪಚಾರದ ಕುರಿತು ರೈತರಿಗೆ ಮಾರ್ಗದರ್ಶನ ನೀಡುವಂತೆ ಸ್ಥಳದಲ್ಲಿದ್ದ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು. ‘ನಮ್ಮ ಬೆಳೆ ಹಾಳಾಗಿದ್ದು ಹಾಕಿದ ಬಂಡವಾಳವೂ ಕೈ ಸೇರುವುದಿಲ್ಲ. ನಮಗೆ ನೀವೇ ಅಗತ್ಯ ಪರಿಹಾರ ಒದಗಿಸಿ ಕೊಡಬೇಕು’ ಎಂದು ರೈತರು ಈ ವೇಳೆ ಮನವಿ ಮಾಡಿದರು. ‘ಸರ್ಕಾರ ಎಲ್ಲಾ ರೈತರಿಗೂ ಬೆಳೆ ನಷ್ಟಕ್ಕೆ ನಿಯಮಾನುಸರ ಪರಿಹಾರ ನೀಡಲಿದೆ’ ಎಂದು ಸಚಿವರು ಭರವಸೆ ನೀಡಿದರು.
‘ಜಿಲ್ಲೆಯಲ್ಲಿ ರೈತಾಪಿ ವರ್ಗದವರೇ ಹೆಚ್ಚಾಗಿದ್ದುರೇಷ್ಮೆ ಮತ್ತು ಹಾಲು ಉತ್ಪಾದನೆಯೇ ಬದುಕಿಗೆ ಆಧಾರವಾಗಿದೆ. ಇವೆರಡರ ಮೇಲೂ ಬರದ ಕರಿಛಾಯೆ ಆವರಿಸಿದೆ. ರೇಷ್ಮೆಗೆ ಪ್ರೋತ್ಸಾಹಧನ ಸಿಗುವ ನಿರೀಕ್ಷೆಯಲ್ಲಿದ್ದ ರೈತರಿಗೆ ಇನ್ನೂ ಸಿಕ್ಕಿಲ್ಲ. ತೆಂಗು ರೇಷ್ಮೆ ಮಾವು ರಾಗಿ ತೊಗರಿ ಸೇರಿದಂತೆ ವಿವಿಧ ಬೆಳೆಗಳು ಸಹ ರೋಗಬಾಧೆ ಎದುರಿಸುತ್ತಿವೆ. ಅಂತರ್ಜಲ ಕುಸಿದಿದೆ. ದನಕರುಗಳಿಗೆ ಕುಡಿಯವ ನೀರಿನ ಬರದ ಆತಂಕ ಎದುರಾಗಿದೆ. ಕೆರೆ–ಕಟ್ಟೆಗಳನ್ನು ತುಂಬಿಸಬೇಕಿದೆ. ಇವೆಲ್ಲವನ್ನು ಪರಿಶೀಲಿಸಿರುವ ಸಚಿವರು ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಹೆಕ್ಟೇರ್ ಲೆಕ್ಕದಲ್ಲಿ ನಿಗದಿಪಡಿಸಿರುವ ಪರಿಹಾರ ಬದಲು ಪ್ರತಿ ಎಕರೆಗೆ ₹20 ಸಾವಿರ ಕೊಡಿಸಬೇಕು. ಜಿಲ್ಲೆಗೆ ಹೆಚ್ಚಿನ ಪರಿಹಾರ ಸಿಗುವಂತೆ ಮಾಡಬೇಕು’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಸಚಿವರಿಗೆ ಮನವಿ ಮಾಡಿದರು.
ಹಾರೋಹಳ್ಳಿ ಮತ್ತು ರಾಮನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ‘ಹಾರೋಹಳ್ಳಿ ತಾಲ್ಲೂಕು ಹಲವು ವಿಷಯಗಳಲ್ಲಿ ಹಿಂದುಳಿದಿದೆ. ತಾಲ್ಲೂಕು ಕಚೇರಿಗಳು ಆಸ್ಪತ್ರೆ ಶಾಲಾ- ಕಾಲೇಜು ಸೇರಿದಂತೆ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಸಚಿವರು ತಾಲ್ಲೂಕು ಅಭಿವೃದ್ಧಿಗೆ ನೆರವಾಗಬೇಕು. ಪಟ್ಟಣದ ಪುರಾತನ ಅರುಣಾಚಲ ಮತ್ತು ಚಾಮುಂಡೇಶ್ವರಿ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು’ ಎಂದರು.
‘ಬರದ ಬೆನ್ನಲ್ಲೇ ಬಮೂಲ್ ರೈತರಿಂದ ಖರೀದಿ ಮಾಡುವ ಹಾಲಿನ ದರವನ್ನು ₹2 ಕಡಿತ ಮಾಡಿದೆ. ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ನ. 1ರಿಂದಲೇ ಜಾರಿಗೆ ಬಂದಿರುವ ಈ ಆದೇಶವನ್ನು ರೈತರ ಹಿತದೃಷ್ಟಿಯಿಂದ ಕೂಡಲೇ ಹಿಂಪಡೆಯಬೇಕು. ರೇಷ್ಮೆ ಬೆಳೆಗೆ ರೋಗಗಳ ಕಾಟ ಹೆಚ್ಚಾಗಿದ್ದು ಇದರ ತಡೆಗೆ ಅಧಿಕಾರಿಗಳು ಸೂಕ್ತ ಪರಿಹಾರ ಒದಗಿಸಬೇಕು.ಈಗಾಗಲೇ ಮಳೆಗಾಲದ ಕೊನೆಯ ದಿನಗಳು ಮುಗಿದಿವೆ. ಕೆರೆ–ಕಟ್ಟೆಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಮಳೆಯಾಶ್ರಿತ ಸಾಲುಬೆಳೆ ಬೆಳೆಯುವ ಸ್ಥಿತಿಯಲ್ಲಿ ರೈತರಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬರದ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮುಂದೆ ಚುನಾವಣೆ ಘೋಷಣೆಯಾದಾಗ ಅಧಿಕಾರಿಗಳ ಗಮನ ಬೇರೆಡೆ ಇರಲಿದೆ. ಹಾಗಾಗಿ ಬರವನ್ನು ಸಮರ್ಥವಾಗಿ ಎದುರಿಸಲು ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು. ನರೇಗಾ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ದುಡಿಯುವ ಕೈಗಳಿಗೆ ಹೆಚ್ಚಿನ ಕೆಲಸ ಕೊಡಬೇಕು’ ಎಂದು ಸಲಹೆ ನೀಡಿದರು.
ರೈತರು ಏನಂದರು?
‘ಬೆಳೆ ನಷ್ಟವಾದಾಗ ನೆರವಿಗೆ ಬರುವ ಬೆಳೆ ವಿಮೆ ಸೇರಿದಂತೆ ರೈತರಿಗೆ ಕೃಷಿ ತೋಟಗಾರಿಕೆ ರೇಷ್ಮೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ರೈತರಿಗೆ ಸಿಗುವ ಸವಲತ್ತುಗಳು ರೈತರಿಗೆ ಸರಿಯಾಗಿ ತಲುಪುತ್ತಿಲ್ಲ. ಈ ಬಗ್ಗೆ ಪೇಪರ್‌ನಲ್ಲಿ ಬಂದರಷ್ಟೇ ಸಾಲದು. ಗ್ರಾಮಗಳ ಮಟ್ಟದಲ್ಲಿ ಸಹ ಹೆಚ್ಚಿನ ಪ್ರಚಾರ ಮಾಡಿ ರೈತರಿಗೆ ಜಾಗೃತಿ ಮೂಡಿಸಬೇಕು. ಆಗ ಮಾತ್ರ ರೈತರಿಗೆ ಸವಲತ್ತುಗಳು ತಲುಪುತ್ತವೆ. ಇಲ್ಲದಿದ್ದರೆ ಕೆಲವರಷ್ಟೇ ಅವುಗಳ ಪ್ರಯೋಜನ ಪಡೆಯುತ್ತಾರೆ. ಬರದಿಂದಾಗಿ ದನಕರುಗಳಿಗೆ ಸರಿಯಾಗಿ ಮೇವು ಸಿಗುತ್ತಿಲ್ಲ. ಮೊದಲು ಮೇವಿನ ವ್ಯವಸ್ಥೆ ಮಾಡಿ’.– ಪುಟ್ಟಸ್ವಾಮಿ ರೈತ ದೊಡ್ಡಬಾದಗೆರೆ
‘ಬೆಳೆ ನಷ್ಟ ಮತ್ತು ಬರ ಪರಿಹಾರ ಎಂದು ಸರ್ಕಾರ ಕೊಡುವ ₹100–₹500ರವರೆಗಿನ ಪುಡಿಗಾಸಿನ ಪರಿಹಾರದ ಚೆಕ್ ಏನಕ್ಕೂ ಸಾಲುವುದಿಲ್ಲ. ಬೆಳೆಗೆ ನಾವು ಹಾಕಿದ ಬಂಡವಾಳ ಸಹ ದಕ್ಕುವುದಿಲ್ಲ. ಮಳೆ ಕೈ ಕೊಟ್ಟಿದ್ದರಿಂದ ನಾವು ಬಿತ್ತಿರುವ ಬೆಳೆ ಕೈ ಸೇರುವ ಗ್ಯಾರಂಟಿ ಇಲ್ಲ. ನಮ್ಮ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ನಮಗಾಗಿರುವ ನಷ್ಟವನ್ನು ಸರಿಯಾಗಿ ಲೆಕ್ಕ ಹಾಕಿ ಪರಿಹಾರ ಕೊಡಬೇಕು. ಹಾಗೆಯೇ 20 ವರ್ಷಗಳಿಂದ ದುರಸ್ತಿ ಕಾಣದೆ ಹದಗೆಟ್ಟಿರುವ ದೊಡ್ಡಬಾದಗೆರೆ ರಸ್ತೆಯನ್ನು ದುಸ್ತಿ ಮಾಡಿಕೊಡಿ’ರಾಮಚಂದ್ರ ರೈತ ಹಾರೋಹಳ್ಳಿ ತಾಲ್ಲೂಕು
‘ಸುಮಾರು 50 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಎರಡು ಗ್ರಾಮಗಳ ರೈತರಿಗೆ ಇದುವರೆಗೆ ಹಕ್ಕುಪತ್ರ ಸಿಕ್ಕಿಲ್ಲ. ಜನಪ್ರತಿನಿಧಿಗಳು ಕೊಡಿಸಲು ಯತ್ನಿಸಿದರೂ ಅರಣ್ಯ ಇಲಾಖೆಯವರು ಅಡ್ಡಗಾಲು ಹಾಕುತ್ತಾ ಬಂದಿದ್ದಾರೆ. ಬರದಿಂದಾಗಿ ನಮ್ಮ ಬೆಳೆಯೂ ನಷ್ಟವಾಗಿದೆ. ಪಹಣಿ ಇಲ್ಲದ ನಾವು ಪರಿಹಾರ ಪಡೆಯೋದು ಹೇಗೆ? ಅದಕ್ಕೆ ಏನು ಮಾಡಬೇಕು ತಿಳಿಸಿ. ಪರಿಹಾರದಿಂದ ನಮ್ಮನ್ನು ವಂಚಿತರನ್ನಾಗಿಸಬೇಡಿ’.– ಮುದ್ದುಕೃಷ್ಣ ಬೆಟ್ಟಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.