ಮಂಗಳವಾರ, ನವೆಂಬರ್ 19, 2019
29 °C
ಸಾತನೂರು ಸಂತೆಮಾಳದಲ್ಲಿ ಧರಣಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ

ಡಿಕೆಶಿಗೆ ಮತ್ತೆ ಕಸ್ಟಡಿ ವಿರೋಧಿಸಿ ಪ್ರತಿಭಟನೆ

Published:
Updated:
Prajavani

ಸಾತನೂರು (ಕನಕಪುರ): ಶಾಸಕ ಡಿ.ಕೆ. ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಶುಕ್ರವಾರ ಮತ್ತೆ ಕಸ್ಟಡಿಗೆ ಪಡೆದಿರುವುದನ್ನು ವಿರೋಧಿಸಿ ‘ಸಾತನೂರು ಹೋಬಳಿ ಕಾಂಗ್ರೆಸ್‌ ಸಮಿತಿ ಮತ್ತು ನಾಗರಿಕ ಬಂಧುಗಳ’ ವತಿಯಿಂದ ಶನಿವಾರ ಪ್ರತಿಭಟನಾ ಧರಣಿ ನಡೆಯಿತು.

ಹೋಬಳಿ ವ್ಯಾಪ್ತಿಯ ಮುಖಂಡರು ಬೆಳಿಗ್ಗೆ 10ರಿಂದ ಸಾತನೂರು ಸಂತೆಮಾಳದಲ್ಲಿ ಶ್ಯಾಮಿಯಾನ ಹಾಕಿ ಪ್ರತಿಭಟನಾ ಧರಣಿ ನಡೆಸಿ ಕೇಂದ್ರ ಸರ್ಕಾರ, ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ವಿರುದ್ಧ ಘೋಷಣೆ ಕೂಗಿದರು.

‘ಮೋದಿ ಮತ್ತು ಅಮಿತ್‌ ಶಾ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

ಇ.ಡಿ ಅಧಿಕಾರಿಗಳು ಕರೆದಾಗಲೆಲ್ಲ ಅವರು ವಿಚಾರಣೆಗೆ ಹೋಗಿ ಸಹಕರಿಸುತ್ತಿದ್ದರೂ ದುರುದ್ದೇಶದಿಂದ ಕಸ್ಟಡಿಗೆ ಪಡೆದರು. ಮತ್ತೆ 4 ದಿನಗಳ ಕಾಲ ಕಸ್ಟಡಿ ವಿಸ್ತರಿಸಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರುಗಳಾಗುತ್ತಿದ್ದರೂ ಅದನ್ನು ಲೆಕ್ಕಿಸದೆ ತೊಂದರೆ ಕೊಡುತ್ತಿದ್ದಾರೆ ಎಂದು ಟೀಕಿಸಿದರು.

‘ಕಸ್ಟಡಿಗೆ ಪಡೆಯುವ ದುರುದ್ದೇಶದಿಂದ ಅಧಿಕಾರಿಗಳು ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ತನಿಖೆಯ ನೆಪದಲ್ಲಿ ಭಯೋತ್ಪಾದಕರನ್ನು ನಡೆಸಿಕೊಳ್ಳುವ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾರೆ. ಇದೆಲ್ಲದರ ವಿರುದ್ದ ನಾವು ತಾಳ್ಮೆ ಕಳೆದುಕೊಳ್ಳದೆ ಶಾಂತಿಯುತ ಹೋರಾಟ ನಡೆಸುತ್ತಿದ್ದೇವೆ’ ಎಂದರು.

‘ಶಿವಕುಮಾರ್‌ ಏನು ದೇಶದ್ರೋಹಿಯೇ, ಅವರೇನು ದೇಶಬಿಟ್ಟು ಓಡಿ ಹೋಗಿದ್ದಾರೆಯೇ. ಅವರು ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಪ್ರಬಲ ರಾಜಕಾರಣಿ. ಅವರನ್ನು ಮಟ್ಟ ಹಾಕುವುದಕ್ಕಾಗಿ ಅವರ ವಿರುದ್ಧ ಸುಳ್ಳು ಕೇಸಿನ ನಾಟಕವಾಡುತ್ತಿದ್ದಾರೆ. ಇದನ್ನು ಖಂಡಿಸಿ ಮುಂದೆ ಉಗ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಶೇಖರ್‌, ಮುಖಂಡರಾದ ಎಲವಳ್ಳಿ ನಾಗರಾಜು, ಸೂ‍ರ‍್ನಳ್ಳಿ ರಾಜಣ್ಣ, ಸುರೇಶ್‌, ಎಸ್.ಎಸ್‌.ಶಂಕರ್‌, ಪುಟ್ಟಮಾದು, ಎಸ್.ಜೆ.ನಾಗರಾಜು, ಶಿವಸ್ವಾಮಿ, ಕೃಷ್ಣಮೂರ್ತಿ, ಬಸವರಾಜು, ಸಂದೀಪ, ಡಿ.ಎಂ.ಮುತ್ತರಾಜು, ಚಂದ್ರು, ಉಮೇಶ್‌, ಲೋಕೇಶ್‌ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)