ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಕ್ಟರ್‌ ಮನೆ ಹೊಕ್ಕ ಚಿರತೆ ಸೆರೆ

ಜಾಲಮಂಗಲದಲ್ಲಿ ಸತತ ಐದು ತಾಸು ಕಾರ್ಯಾಚರಣೆ
Last Updated 25 ಅಕ್ಟೋಬರ್ 2021, 6:54 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಜಾಲಮಂಗಲ ಗ್ರಾಮದ ಮನೆಯೊಂದಕ್ಕೆ ಹೊಕ್ಕು ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಸತತ ಐದು ಗಂಟೆ ಕಾರ್ಯಾಚರಣೆ ಮೂಲಕ ಸೆರೆ ಹಿಡಿಯಲಾಯಿತು. ಇದರಿಂದ ಗ್ರಾಮಸ್ಥರು ನಿಟ್ಟುಸಿರು
ಬಿಟ್ಟರು.

ಶನಿವಾರ ಮಧ್ಯರಾತ್ರಿ ಆಹಾರ ಅರಸುತ್ತಾ ಜಾಲಮಂಗಲ ಗ್ರಾಮಕ್ಕೆ ಬಂದ ಚಿರತೆಯು ವೈದ್ಯ ಡಾ.ಶಿವಣ್ಣ ಎಂಬುವರ ಹೊಸ ಮನೆಯ ಒಳಗೆ ನುಗ್ಗಿತು. ಮನೆಗೆ ನುಗ್ಗಿ ಕುರಿ ಹಾಗೂ ನಾಯಿ ಹಿಡಿಯಲು ಪ್ರಯತ್ನಿಸಿತ್ತು. ಕೂಡಲೇ ಮನೆಯಲ್ಲಿದ್ದವರು ಹೊರಗೆ ಓಡಿ ಬಂದಿದ್ದು, ಚಿರತೆಯನ್ನು ಮನೆಯೊಳಗೇ ಕೂಡಿ ಹಾಕಿದರು.

ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದರು. ಬಳಿಕ ಬನ್ನೇರುಘಟ್ಟದಿಂದ ಪಶುವೈದ್ಯರು ಹಾಗೂ ಅರಿವಳಿಕೆ ತಜ್ಞರ ತಂಡವನ್ನೂ ಕರೆಯಿಸಲಾಯಿತು. ಕಿಟಕಿಯ ಒಳಗಿನಿಂದ ಬಂದೂಕು ತೂರಿಸಿದ ತಜ್ಞರು ಹಲವು ಪ್ರಯತ್ನದ ನಂತರ ಕಡೆಗೂ ಚಿರತೆಗೆ ಅರಿವಳಿಕೆ ಇಂಜೆಕ್ಷನ್ ನೀಡುವಲ್ಲಿ ಯಶಸ್ವಿ ಆದರು.

ಪ್ರಜ್ಞೆ ತಪ್ಪಿದ ಚಿರತೆಗೆ ಬಲೆ ಹಾಕಿ ಅದನ್ನು ಸುರಕ್ಷಿತವಾಗಿ ಅರಣ್ಯ ಇಲಾಖೆಯ ಬೋನಿನೊಳಗೆ ಇರಿಸಲಾಯಿತು. ಅಲ್ಲಿಂದ ಅದನ್ನು ಕಾಡಿನತ್ತ ಕೊಂಡೊಯ್ಯಲಾಯಿತು.

ರಾಮನಗರ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು, ಎಸಿಎಫ್‌ ಸುರೇಂದ್ರ, ಆರ್‌ಎಫ್‌ಒ ಕಿರಣ್‌, ಡಿಆರ್‌ಎಫ್‌ಒ ರಾಜು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬನ್ನೇರುಘಟ್ಟದ ತಜ್ಞ ವೈದ್ಯ ಉಮಾಶಂಕರ್ ಸಹ ಬಂದಿದ್ದರು.

ಗ್ರಾಮಸ್ಥರ ದಂಡು: ಗ್ರಾಮದ ಒಳಗೇ ಚಿರತೆ ನುಗ್ಗಿದ ವಿಷಯ ತಿಳಿದು ನಸುಕಿನಿಂದಲೇ ಮನೆಯ ಸುತ್ತಮುತ್ತ ನೂರಾರು ಗ್ರಾಮಸ್ಥರು ನೆರೆದಿದ್ದರು. ಮನೆಯ ತಾರಸಿಯನ್ನೂ ಏರಿ ಕಾರ್ಯಾಚರಣೆಯನ್ನು ವೀಕ್ಷಿಸಿದರು. ಸುದ್ದಿ ತಿಳಿದು ಸುತ್ತಲಿನ ಊರುಗಳ ಜನರೂ ಕುತೂಹಲದಿಂದ ಬಂದಿದ್ದರು.

ನಾಯಿಗಳು, ಕುರಿಗಳನ್ನು ಹಿಡಿಯಲು ಚಿರತೆಗಳು ಗ್ರಾಮಗಳಿಗೆ ನುಗ್ಗುವುದು ಈಚೆಗೆ ಸಾಮಾನ್ಯವಾಗಿದೆ. ಈಗ ಗ್ರಾಮದ ಒಳಗೇ ಬರುತ್ತಿರುವುದು ಜನರ ಆತಂಕ ಹೆಚ್ಚಿಸಿದೆ. ಇನ್ನಷ್ಟು ಚಿರತೆಗಳು ಇರುವ ಆತಂಕ ಇದ್ದು, ಗ್ರಾಮದ ಹೊರವಲಯದಲ್ಲಿ ಅರಣ್ಯ ಇಲಾಖೆ ಬೋನು ಇಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT