ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈದ್ಯ ಪದ್ಧತಿಯಲ್ಲೂ ಮಾರ್ಪಾಡು ಅವಶ್ಯ’

13ನೇ ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನ ಹಾಗೂ ಮೂಲಿಕಾ ಉತ್ಸವಕ್ಕೆ ಚಾಲನೆ
Last Updated 10 ಅಕ್ಟೋಬರ್ 2019, 14:20 IST
ಅಕ್ಷರ ಗಾತ್ರ

ರಾಮನಗರ: ಪಾರಂಪರಿಕ ವೈದ್ಯರೂ ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ತಮ್ಮ ಚಿಕಿತ್ಸಾ ವಿಧಾನ ಹಾಗೂ ಸಂಶೋಧನೆಗಳಲ್ಲಿ ಮಾರ್ಪಾಡು ಮಾಡಿಕೊಳ್ಳುವ ಅಗತ್ಯ ಇದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.

ನಗರದ ಬಿಜಿಎಸ್ ಶಾಖಾ ಮಠದ ಆವರಣದಲ್ಲಿ ಗುರುವಾರ ಪಾರಂಪರಿಕ ವೈದ್ಯ ಪರಿಷತ್‌, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಯೋಗದಲ್ಲಿ 13ನೇ ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನ ಹಾಗೂ ಮೂಲಿಕಾ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಹವನ್ನು ಧರ್ಮ ಮಾರ್ಗದಲ್ಲಿ ನಡೆಸದಿರುವುದೇ ರೋಗಕ್ಕೆ ಮೂಲವಾಗಿದೆ. ಪ್ರಕೃತಿ ನಿಯಮಗಳಿಗೆ ಅನುಗುಣವಾಗಿ ಬದುಕಿದಲ್ಲಿ ನಾವೆಲ್ಲರೂ ಶತಾಯುಷಿಗಳಾಗಬಹುದು. ಜಗತ್ತಿನಲ್ಲಿ ಪ್ರೀತಿಯಿಂದ ನೀಡುವ ಚಿಕಿತ್ಸೆಗೆ ವಾಸಿಯಾಗದ ಕಾಯಿಲೆ ಇಲ್ಲ. ಪ್ರೀತಿಯಿಂದ ಸೇವೆ ಮಾಡುವುದು ನಮ್ಮ ಧ್ಯೇಯ ಆಗಬೇಕು ಎಂದು ಹೇಳಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ.ಬಿ. ನಾಯಕ್ ಮಾತನಾಡಿ, ಇಂದು ಪಾರಂಪರಿಕ ವೈದ್ಯ ಪದ್ಧತಿಯು ವಿಜ್ಞಾನ, ತಂತ್ರಜ್ಞಾನದೊಂದಿಗೆ ಮುಖಾಮುಖಿ ಆಗಿದ್ದು, ಅನೇಕ ಸವಾಲುಗಳು ಎದುರಾಗಿವೆ. ಯಾವುದು ಉತ್ಕೃಷ್ಟವೋ ಅದು ಉಳಿಯಲಿದೆ. ಈ ಸಮಕಾಲೀನ ಸವಾಲುಗಳು, ಶೋಧಗಳ ಕುರಿತು ಸಮ್ಮೇಳನದಲ್ಲಿ ಚರ್ಚೆ ಆಗಬೇಕು ಎಂದು ಸಲಹೆ ನೀಡಿದರು.

ಏಡ್ಸ್‌ ಇಂದು ಜಗತ್ತಿನ ಕಾಡುತ್ತಿರುವ ಮಾರಕ ರೋಗವಾಗಿದೆ. ಇದಕ್ಕೆ ಪಾರಂಪರಿಕ ಪದ್ಧತಿಯಲ್ಲಿ ಔಷಧ ಇದೆ ಎನ್ನುತ್ತಾರೆ. ಆದರೆ ಅದರ ಪ್ರಯೋಗ, ಪ್ರಚಾರ ಆಗಿಲ್ಲ. ಯಾವುದೇ ಪ್ರಯೋಗಕ್ಕೆ ನಿರ್ದಿಷ್ಟತೆ ಬಂದಾಗ ಮಾತ್ರ ಅದು ಪರಿಣಾಮಕಾರಿ ಆಗಲು ಸಾಧ್ಯ ಎಂದರು.

ರಾಮನಗರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಎನ್. ನಟರಾಜು ಮಾತನಾಡಿ, 2015ರಲ್ಲಿ ಸರ್ಕಾರ ಜೀವವೈವಿಧ್ಯ ಸಮಿತಿಗಳನ್ನು ರಚನೆ ಮಾಡಿದರೂ ಅದರಿಂದ ಪ್ರಯೋಜನ ಆಗಿಲ್ಲ. ಇಂದಿನ ಪೀಳಿಗೆಗೆ ಈ ಪದ್ಧತಿಯನ್ನು ನಾವೆಲ್ಲರೂ ಪರಿಚಯಿಸುವ ಅಗತ್ಯ ಇದೆ. ಕನಿಷ್ಠ ರಾಮನಗರ ಜಿಲ್ಲೆಯಲ್ಲಿ ಕಾರ್ಯಾಗಾರ, ಆರೋಗ್ಯ ಶಿಬಿರಗಳನ್ನು ಆಯೋಜಿಸಬೇಕು ಎಂದು ಕೋರಿದರು.

ಪರಿಷತ್‌ನ ಗೌರವ ಉಪಾಧ್ಯಕ್ಷ ಗಾ.ನಂ. ಶ್ರೀಕಂಠಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಜನರಿಗೆ ಇಂದು ಆಸ್ಪತ್ರೆಗಳಿಗಿಂತ ಆರೋಗ್ಯ ಶಿಕ್ಷಣದ ಅಗತ್ಯ ಇದೆ. ಸರ್ಕಾರವು ತನ್ನ ಕೋಟ್ಯಂತರ ರೂಪಾಯಿಗಳ ಆರೋಗ್ಯ ಬಜೆಟ್‌ನಲ್ಲಿ ಈ ಪದ್ಧತಿಗೂ ಅನುದಾನ ಮೀಸಲಿಡಬೇಕು. ಪಾರಂಪರಿಕ ವೈದ್ಯರಿಗೆ ಆಶಾ ಕಾರ್ಯಕರ್ತರ ಸ್ಥಾನಮಾನ ನೀಡಿ ಅವರನ್ನು ಸೇವೆಗೆ ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಶಸ್ತಿ ಪ್ರದಾನ: ಇದೇ ಸಂದರ್ಭ ಕ್ಷೇತ್ರದಲ್ಲಿನ ಉತ್ತಮ ಸೇವೆಗಾಗಿ ತುರುವೇಕೆರೆಯ ರೆಹಾನ ಬೇಗಂ, ವಿಜಯಪುರ ಜಿಲ್ಲೆಯ ಸಾಯಪ್ಪಣ್ಣ ವೀರಗಂಟಪ್ಪ, ಹಾವೇರಿ ಜಿಲ್ಲೆಯ ಗಣಪತಿ, ರಾಯಚೂರು ಜಿಲ್ಲೆಯ ದುರ್ಗಪ್ಪ ನರಸಪ್ಪ ಹಾಗೂ ರಾಮನಗರ ಜಿಲ್ಲೆಯ ಲಕ್ಕಯ್ಯನಪಾಳ್ಯದವರಾದ ಮೂಡಲಪ್ಪ ಅವರಿಗೆ ಪಾರಂಪರಿಕ ವೈದ್ಯ ರತ್ನ ಪ್ರಶಸ್ತಿ ಹಾಗೂ ₨10 ಸಾವಿರ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಪರಿಷತ್‌ನ ಗೌರವ ಅಧ್ಯಕ್ಷ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆದಿಚುಂಚನಗಿರಿ ಶಾಖಾಮಠದ ಅನ್ನದಾನೇಶ್ವರ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ಮೂರ್ತಿ ಆನಂದ ಸ್ವಾಮಿ, ಬಾಲಕೃಷ್ಣ ಗುರೂಜಿ, ತಿರುವೆಂಕಟ ಜಿಯರ್‌, ಪರಿಷತ್‌ನ ಅಧ್ಯಕ್ಷ ನೇರ್ಲಿಗೆ ಗುರುಸಿದ್ದಪ್ಪ, ಕಾರ್ಯದರ್ಶಿ ಶಾಂಂತವೀರಪ್ಪ ಸಂಸ್ಥಾಪಕ ಸದಸ್ಯರಾದ ಹರಿರಾಮಮೂರ್ತಿ, ಸತ್ಯನಾರಾಯಣ ಭಟ್‌ ಇದ್ದರು. ಶೈಲಾ ಶ್ರೀನಿವಾಸ್‌ ನಿರೂಪಿಸಿದರು.

***
ಮನುಷ್ಯನ ಡಿಎನ್‌ಎ ಬದಲಾದ ಹಾಗೆಯೇ ಔಷಧ ಕ್ರಮವೂ ಬದಲಾಗಬೇಕು. ಪಾರಂಪರಿಕ ವೈದ್ಯರು ಇಂದಿನ ಅಗತ್ಯಗಳಿಗೆ ತಕ್ಕಂತೆ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು

- ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT