ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ: ದಾಖಲೆ ಪರಿಶೀಲನೆ ಆರಂಭ

ಕೈಕೊಟ್ಟ ಅಂತರ್ಜಾಲ: ಪರಿಶೀಲನಾ ಕಾರ್ಯ ಮೂರು ಗಂಟೆ ತಡ
Last Updated 6 ಜೂನ್ 2019, 13:22 IST
ಅಕ್ಷರ ಗಾತ್ರ

ರಾಮನಗರ: ಸಿಇಟಿ ಪರೀಕ್ಷೆ ಬರೆದು ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಲು ಸಿದ್ಧತೆ ನಡೆಸಿರುವ ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನಾ ಕಾರ್ಯವು ಗುರುವಾರ ಇಲ್ಲಿನ ಶಾಂತಿನಿಕೇತನ ಕಾಲೇಜು ಆವರಣದಲ್ಲಿ ಆರಂಭಗೊಂಡಿತು. ಅಂತರ್ಜಾಲ ಸಮಸ್ಯೆಯಿಂದಾಗಿ ಮೂರು ಗಂಟೆ ಕಾಲ ತಡವಾಗಿ ಪರಿಶೀಲನೆ ಕಾರ್ಯವು ಚಾಲನೆ ಪಡೆಯಿತು.

ಬೆಳಿಗ್ಗೆ 9ಕ್ಕೆ ಪರಿಶೀಲನಾ ಕಾರ್ಯಕ್ಕೆ ಚಾಲನೆ ದೊರೆಯಿತಾದರೂ ಬಿಎಸ್‌ಎನ್‌ಎಲ್‌ ಅಂತರ್ಜಾಲ ಸೇವೆ ಲಭ್ಯವಾಗಲಿಲ್ಲ. ಇದರಿಂದಾಗಿ ಪರಿಶೀಲನಾ ಕಾರ್ಯಕ್ಕೆ ತೊಡಕಾಯಿತು. ದೂರದಿಂದ ಬಂದಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು ಕಾಯುತ್ತಲೇ ಇದ್ದರು.

ಕೇಂದ್ರದ ನೋಡಲ್‌ ಅಧಿಕಾರಿಗಳು ಬಿಎಸ್‌ಎನ್‌ಎಲ್‌ ಅಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರಾದರೂ ಸ್ಪಂದನೆ ದೊರೆಯಲಿಲ್ಲ. ಮಧ್ಯಾಹ್ನ 12 ಗಂಟೆ ವೇಳೆಗೆ ಪರ್ಯಾಯ ಅಂತರ್ಜಾಲ ವ್ಯವಸ್ಥೆ ಬಳಸಿ ಕಾರ್ಯ ಆರಂಭಿಸಲಾಯಿತು. ಸಂಜೆ 4 ಗಂಟೆ ಸುಮಾರಿಗೆ ದಿನದ ಕಾರ್ಯವು ಮುಗಿಯಿತು. ಮೊದಲ ದಿನ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ವರ್ಷದಿಂದ ಜಿಲ್ಲಾ ಕೇಂದ್ರದಲ್ಲಿ ಈ ಸಹಾಯ ಕೇಂದ್ರಗಳನ್ನು ತೆರದಿದೆ. ಸಿಇಟಿ ಬರೆದು ರ್‍ಯಾಂಕ್‌ಗಳನ್ನು ಪಡೆದಿರುವ ವಿದ್ಯಾರ್ಥಿಗಳು ತಮ್ಮ ರ್‍ಯಾಂಕ್‌ಗಳಿಗೆ ಅನುಗುಣವಾಗಿ ನಿಗದಿತ ದಿನಗಳಂದು ಬಂದು ಇಲ್ಲಿ ದಾಖಲೆಗಳನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಇದಕ್ಕೆಂದು ಪ್ರಾಧಿಕಾರವು ಎರಡು ಕೌಂಟರ್‌ಗಳನ್ನು ತೆರೆದಿದ್ದು, ಸಿಬ್ಬಂದಿಯನ್ನು ನಿಯೋಜಿಸಿದೆ.

ವಿದ್ಯಾರ್ಥಿಗಳು ನೋಡಲ್‌ ಕೇಂದ್ರಗಳಿಗೆ ಬಂದು ನೋಂದಣಿ ಮಾಡಿಕೊಂಡು ತಮ್ಮ ಮೂಲ ದಾಖಲಾತಿಗಳನ್ನು, ಗೆಜೆಟೆಡ್‌ ಅಧಿಕಾರಿಗಳಿಂದ ಧೃಡೀಕರಿಸಿದ ಒಂದು ಸೆಟ್‌ ಝೆರಾಕ್ಸ್‌ ಪ್ರತಿಗಳನ್ನು ಪ್ರಸ್ತುತಪಡಿಸಬೇಕಾಗುತ್ತದೆ. ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ಅದರ ನಕಲು ಪ್ರತಿಗಳನ್ನು ತಮ್ಮಲ್ಲಿ ಇರಿಸಿಕೊಂಡು ಮೂಲ ದಾಖಲೆಗಳನ್ನು ವಾಪಸ್ ನೀಡುತ್ತಾರೆ. ದಾಖಲೆ ಪರಿಶೀಲನೆ ಸ್ವೀಕೃತಿ ಪತ್ರವನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ. ಒಬ್ಬ ಅಭ್ಯರ್ಥಿಯು ಮೆಡಿಕಲ್‌, ಎಂಜಿನಿಯರಿಂಗ್‌ , ವಾಸ್ತುಶಿಲ್ಪ ಹೀಗೆ ಬೇರೆ ಬೇರೆ ಕೋರ್ಸುಗಳಿಗೆ ಅರ್ಹತೆ ಪಡೆದಿದ್ದರೂ ಏಕಕಾಲಕ್ಕೆ ದಾಖಲೆ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

‘ಜಿಲ್ಲೆಯ ಯಾವುದೇ ಭಾಗದ ವಿದ್ಯಾರ್ಥಿಗಳು ತಮ್ಮ ದಾಖಲೆಗಳನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಈ ಜಿಲ್ಲೆಯವರಾಗಿದ್ದು, ಹೊರ ಜಿಲ್ಲೆಗಳಲ್ಲಿ ವ್ಯಾಸಂಗ ಮಾಡಿದವರೂ ಹಾಜರಾಗಬಹುದಾಗಿದೆ’ ಎಂದು ಕೇಂದ್ರದ ನೋಡಲ್‌ ಅಧಿಕಾರಿ ನಾರಾಯಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ದಿನದಂದು ಮೊದಲ 2 ಸಾವಿರ ರ್‍ಯಾಂಕ್‌ ಒಳಗಿನ ವಿದ್ಯಾರ್ಥಿಗಳ ದಾಖಲೆ ಪರಿಶೀಲನೆ ನಡೆಯಿತು. ಅಂತೆಯೇ ವಿದ್ಯಾರ್ಥಿಗಳ ರ್‍ಯಾಂಕ್‌ಗೆ ಅನುಗುಣವಾಗಿ ವೇಳಾಪಟ್ಟಿ ಪ್ರಕಟಿಸಲಾಗಿದೆ. ಅದರಂತೆ ಇದೇ 19ರವರೆಗೂ ದಾಖಲೆಗಳನ್ನು ಪರಿಶೀಲಿಸಲಾಗುವುದು. ಜಿಲ್ಲೆಯ 1500 ಹಾಗೂ ಹೊರಜಿಲ್ಲೆಯಲ್ಲಿ ಓದಿದ 1 ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದರು.

ಮೊದಲ ದಿನದಂದು ಹಲವು ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಪರಿಶೀಲನಾ ಕೇಂದ್ರಕ್ಕೆ ಬಂದಿದ್ದರು. ಕನಕಪುರ ತಾಲ್ಲೂಕಿನ ಗೋದೂರು ಗ್ರಾಮದ ಜಿ.ಎಸ್. ರಾಜಶೇಖರ ಮೂರ್ತಿ ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾ ಶಿಕ್ಷಣ ಸಂಸ್ಥೆಯಲ್ಲಿ ಓದಿ ಸಿಇಟಿಯಲ್ಲಿ 108ನೇ ರ್‍ಯಾಂಕ್‌ ಪಡೆದಿದ್ದು, ಇದೇ ವಿದ್ಯಾರ್ಥಿಯಿಂದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಸವಿತಾ, ಕೇಂದ್ರದ ಸಹಾಯಕ ನೋಡಲ್‌ ಅಧಿಕಾರಿ ಶಂಕರಪ್ಪ ಇದ್ದರು.

*
ಇದೇ 19ರವರೆಗೂ ದಾಖಲಾತಿ ಪರಿಶೀಲನೆ ಕಾರ್ಯವು ನಡೆಯಲಿದೆ. ವಿದ್ಯಾರ್ಥಿಗಳು ತಮ್ಮ ರ್‍ಯಾಂಕ್‌ ಪಟ್ಟಿಗೆ ಅನುಗುಣವಾಗಿ ಹಾಜರಾಗಬೇಕು.
-ನಾರಾಯಣಪ್ಪ, ನೋಡಲ್‌ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT