ಬುಧವಾರ, ಜೂನ್ 23, 2021
29 °C

ಕೋವಿಡ್‌ ಭಯಬಿಟ್ಟರೆ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಕೋವಿಡ್‌ ಸೋಂಕು ದೃಢಪಟ್ಟಿದೆ ಎಂದು ಭಯಪಟ್ಟರೆ ಸಾವು ಖಚಿತ. ಪಾಸಿಟಿವ್‌ ಬಂದಿದೆ ಎಂದು ಹೆದರದೆ ಭಯಬಿಟ್ಟರೆ ಕೋವಿಡ್‌ ಗೆದ್ದು ಬದುಕಬಹುದು ಎಂದು ಕೋವಿಡ್‌ ದೃಢಪಟ್ಟು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ 10 ದಿನ ಚಿಕಿತ್ಸೆ ಪಡೆದು ಬಂದಿರುವ ಹೊಸಪೇಟೆ ಗೋಪಾಲ್‌ ಅವರ ಖಚಿತ ಮಾತು.

ನಮ್ಮ ಸಂಬಂಧಿಕರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿ ಮನೆಗೆ ಬಂದರು. ಅವರ ಮಾವನವರಿಗೆ ಕೋವಿಡ್‌ ದೃಢಪಟ್ಟು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಂಕಿಗೆ ಬಲಿಯಾದರು. ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದೆ, ಜ್ವರ ಕಾಣಿಸಿಕೊಂಡಿತು. ಕೋವಿಡ್‌ ಪರೀಕ್ಷೆ ಮಾಡಿದಾಗ ಸೋಂಕು ಇರುವುದು ದೃಢಪಟ್ಟಿತು. ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯರು ಕೋವಿಡ್‌ ವಾರ್ಡ್‌ಗೆ ಸೇರಿಸಿ, ತಕ್ಷಣದಿಂದಲೇ ಚಿಕಿತ್ಸೆ ಆರಂಭಿಸಿದರು. 3 ದಿನಗಳು ಕಳೆದ ಮೇಲೆ ನಮ್ಮೂರಿನಲ್ಲಿ ಮೂವರು ಕೋವಿಡ್‌ಗೆ ಬಲಿಯಾದರು. ಸಕಾಲದಲ್ಲಿ ಕೋವಿಡ್‌ ವಾರ್ಡ್‌ಗೆ ದಾಖಲಾಗಿ ಚಿಕಿತ್ಸೆ ಪಡೆಯದಿದ್ದರೆ, ನಾನು ಇಂದು ಇರುತ್ತಿದ್ದೆನೊ ಇಲ್ಲವೋ ಎಂದು ಮೌನಕ್ಕೆ ಶರಣಾದರು.

ಕೊರೊನಾ ಸೋಂಕು ತಗುಲಿದ ಕೂಡಲೆ ನಮ್ಮ ದೇಹ ಎಚ್ಚರಿಸುತ್ತದೆ. ಪರೀಕ್ಷೆ ಮಾಡಿಸಲು ಹೆದರಿಕೊಂಡರೆ, ರೋಗ ಉಲ್ಬಣಗೊಂಡು ಸಾವಿನತ್ತ ಪ್ರಯಾಣಿಸಬೇಕಾಗುತ್ತದೆ. ಕೊರೊನಾ ಸೋಂಕಿತರಲ್ಲಿ ಟಿ.ವಿಗಳಲ್ಲಿ ಬರುವ ದೃಶ್ಯಾವಳಿಗಳನ್ನು ನೋಡಿ ಹೆದರಿಕೊಳ್ಳುವವರೆ ಜಾಸ್ತಿಯಾಗಿ ಸಾವನ್ನಪ್ಪುತ್ತಿದ್ದಾರೆ. ಇದು ಒಂದು ಕಾಯಿಲೆ ಎಂದು ಭಯಪಡದೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ಕೋವಿಡ್‌ ಸೋಂಕಿನಿಂದ ಗುಣಮುಖರಾಗಬಹುದು ಎಂದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ 2 ವಾರ್ಡ್‌ಗಳಲ್ಲಿ 25 ಜನ ಸೋಂಕಿತರು ಇದ್ದೆವು. ನಿತ್ಯ ವೈದ್ಯರು ನಿಗಾವಹಿಸಿ ನಮಗೆ ಸೂಕ್ತ ಚಿಕಿತ್ಸೆ ನೀಡಿದರು. ಊಟ, ತಿಂಡಿ, ಚಿಕಿತ್ಸೆ ನಮಗೆ ಅನುಕೂಲವಾಗಿತ್ತು. ವೈದ್ಯರು ಮತ್ತು ಶುಶ್ರೂಷಕಿಯರ ಸೇವೆಯನ್ನು ಜೀವನದಲ್ಲಿ ಮರೆಯುವುದಿಲ್ಲ. ಸೋಂಕು ದೃಢಪಟ್ಟವರು ಎಲ್ಲಾ ಮುಗಿದೇ ಹೋಯಿತು ಎಂಬ ಹತಾಶೆ ಮತ್ತು ಭಯವನ್ನು ಕಡೆಗಣಿಸಿ, ಹುಟ್ಟಿದವರು ಸಾಯಲೇಬೇಕು. ಸೋಂಕಿನ ವಿರುದ್ಧ ಹೋರಾಟ ಮಾಡೋಣ. ದೇವರ ಇಚ್ಛೆ ಇದ್ದಂತಾಗಲಿ ಎಂದು ಧೈರ್ಯತಂದುಕೊಳ್ಳಬೇಕು. ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಲೇಬೇಕು. ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದು ಮನೆಯಲ್ಲಿ 6 ದಿನ ಚಿಕಿತ್ಸೆ ಪಡೆದಿದ್ದೇನೆ. ಇನ್ನು ಒಂದು ತಿಂಗಳ ಕಾಲ ತುಂಬಾ ಎಚ್ಚರಿಕೆಯಿಂದ ಇರುವಂತೆ ವೈದ್ಯರು ತಿಳಿಸಿದ್ದಾರೆ. ಅದರಂತೆ ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ಮನೆ ಬಿಟ್ಟು ಹೊರಗೆ ಹೋಗುವುದಿಲ್ಲ ಎಂದು ಅನುಭವ ಹಂಚಿಕೊಂಡರು.

ಸೋಂಕಿತರುಅಡ್ಡಾಡಬಾರದು, ಸೋಂಕು ದೃಢಪಟ್ಟವರ ಬಂಧುಗಳನ್ನು ಪರೀಕ್ಷೆ ಮಾಡಿಸಬೇಕು. ಸಾರ್ವಜನಿಕರು ಎಲ್ಲರೂ ಕೋವಿಡ್‌ ಪರೀಕ್ಷೆ ಮಾಡಿಸುವುದು ಸೂಕ್ತ. ಲಾಕ್‌ಡೌನ್‌ ನಿಯಮ ಮಾಡಿರುವುದು ನಮಗಾಗಿ ಎಂಬ ತಿಳುವಳಿಕೆ ಎಲ್ಲರಲ್ಲೂ ಬೆಳೆಸಿಕೊಳ್ಳಬೇಕು ಎಂದರು ಕಿವಿ ಮಾತು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.