‘ದೋಸ್ತಿ’ ರಾಜಕಾರಣ ಚುರುಕು, ಮೈತ್ರಿ ಅಭ್ಯರ್ಥಿ ಪರ ನಿಂತ ಕುಮಾರಸ್ವಾಮಿ

ಬುಧವಾರ, ಏಪ್ರಿಲ್ 24, 2019
32 °C
ಕಾರ್ಯಕರ್ತರ ಮನವೊಲಿಕೆ ಯತ್ನ

‘ದೋಸ್ತಿ’ ರಾಜಕಾರಣ ಚುರುಕು, ಮೈತ್ರಿ ಅಭ್ಯರ್ಥಿ ಪರ ನಿಂತ ಕುಮಾರಸ್ವಾಮಿ

Published:
Updated:
Prajavani

ರಾಮನಗರ: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಹತ್ತಿರವಾಗುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ‘ದೋಸ್ತಿ’ ರಾಜಕಾರಣ ಚುರುಕಾಗಿದೆ.

ಕಳೆದ ಕೆಲವು ದಶಕಗಳಲ್ಲಿನ ಪರಸ್ಪರ ಹೋರಾಟ–ಕಾದಾಟಗಳನ್ನು ಪಕ್ಕಕ್ಕೆ ಇಟ್ಟು ಜೊತೆಯಾಗಿ ಹೆಜ್ಜೆ ಇಡಲು ಜೆಡಿಎಸ್‌–ಕಾಂಗ್ರೆಸ್ ನಾಯಕರು ಮನಸ್ಸು ಮಾಡಿದ್ದಾರೆ. ಸಭೆ–ಸಮಾರಂಭಗಳನ್ನು ಆಯೋಜಿಸುವ ಮೂಲಕ ತಳಮಟ್ಟದ ಕಾರ್ಯಕರ್ತರನ್ನೂ ಅದಕ್ಕೆ ಸಿದ್ಧಗೊಳಿಸುತ್ತಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ದಾಖಲೆ ಅಂತರದ ಗೆಲುವು ಪಡೆದು ಎದುರಾಳಿಗಳಿಗೆ ಸ್ಪಷ್ಟ ಸಂದೇಶ ರವಾನಿಸಬೇಕು ಎಂಬುದು ಡಿ.ಕೆ. ಸಹೋದರರ ಅಭಿಲಾಷೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನೂ ಅವರು ಮಾಡಿಕೊಳ್ಳುತ್ತಿದ್ದಾರೆ.

ಭಾನುವಾರ ಸಂಜೆ ಬೆಂಗಳೂರಿನ ಹೋಟೆಲ್‌ ಒಂದರಲ್ಲಿ ಕಾಂಗ್ರೆಸ್‌–ಜೆಡಿಎಸ್ ಮುಖಂಡರ ಸಭೆ ನಡೆದಿದ್ದು, ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಪಾಲ್ಗೊಂಡರು. ಈ ಸಂದರ್ಭ ಮುಖ್ಯಮಂತ್ರಿ ಕುಮಾರಸ್ವಾಮಿ ಉಭಯ ಪಕ್ಷಗಳ ಕಾರ್ಯಕರ್ತರಿಗೆ ಹೊಂದಾಣಿಕೆ ರಾಜಕಾರಣದ ಪಾಠ ಮಾಡಿದ್ದಾರೆ.

ಕಳೆದ ರಾಮನಗರ ವಿಧಾನಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ದಾಖಲೆ ಅಂತರದ ಗೆಲುವು ದಾಖಲಿಸಿದ್ದರು. ಇದರಲ್ಲಿ ಕಾಂಗ್ರೆಸ್‌ನ ಋಣವೂ ಇತ್ತು. ಹೀಗಾಗಿ ಸಂಸತ್‌ ಚುನಾವಣೆಯಲ್ಲಿ ಅದೇ ರೀತಿಯ ಸಹಕಾರವನ್ನು ಜೆಡಿಎಸ್‌ ಕಾರ್ಯಕರ್ತರು ನೀಡಬೇಕು. ಹಿಂದಿನ ಎಲ್ಲ ಕಹಿ ಘಟನೆಗಳನ್ನೂ ಮರೆತು ಈ ಬಾರಿಯೂ ದಾಖಲೆ ಅಂತರದ ಗೆಲುವು ಬರೆಯಲು ಸಹಕರಿಸಬೇಕು ಎಂದು ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.

ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಮೈತ್ರಿಕೂಟದ ಅಭ್ಯರ್ಥಿ ಡಿ.ಕೆ.ಸುರೇಶ್‌, ಶಾಸಕರಾದ ಮುನಿರತ್ನ, ರಂಗನಾಥ್, ಎ.ಮಂಜುನಾಥ್‌, ಶಿವಣ್ಣ ಹಾಗೂ ಎಂಟು ಕ್ಷೇತ್ರಗಳ ಮುಖಂಡರು ಪಾಲ್ಗೊಂಡಿದ್ದರು. ಮಾಗಡಿಯ ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಸಹ ಸಭೆಯಲ್ಲಿ ಪಾಲ್ಗೊಂಡು ಕುಮಾರಸ್ವಾಮಿ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ.

ಸುರೇಶ್‌ಗೆ ಸಲೀಸು

ಕಳೆದ ರಾಮನಗರ ಉಪ ಚುನಾವಣೆಯ ಪ್ರಚಾರದ ನೇತೃತ್ವ ವಹಿಸಿಕೊಂಡಿದ್ದ ಡಿ.ಕೆ. ಸುರೇಶ್‌ ತಾವೇ ಅಭ್ಯರ್ಥಿ ಎನ್ನುವಂತೆ ಪ್ರಚಾರ ಮಾಡಿದ್ದರು. ಈಗ ಅದೇ ಅವರಿಗೆ ವರವಾಗಿದೆ. ಜೆಡಿಎಸ್ ಕಾರ್ಯಕರ್ತರ ಸಿಟ್ಟೂ ಕಡಿಮೆ ಆಗಿದ್ದು, ಸುರೇಶ್‌ ವಿಶ್ವಾಸ ಗಳಿಸುತ್ತಿದ್ದಾರೆ.

ಉಪ ಚುನಾವಣೆಯ ಋಣ ಸಂದಾಯದ ಭಾರ ಇದೀಗ ಜೆಡಿಎಸ್ ಹೆಗಲ ಮೇಲೆ ಇದೆ. ಆದರೆ ಅಡ್ಡ ಮತದಾನವಾದರೆ ಇದಕ್ಕೆ ಕಷ್ಟವಾಗುತ್ತದೆ ಎಂಬುದನ್ನು ಅರಿತಿರುವ ಕುಮಾರಸ್ವಾಮಿ ಕಾರ್ಯಕರ್ತರ ಮನವೊಲಿಕೆ ಮಾಡುತ್ತಿದ್ದಾರೆ.

ಡಿಕೆಶಿ ಕಟ್ಟಿಹಾಕುವ ತಂತ್ರ
ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್‌ ಕಣಕ್ಕೆ ಇಳಿಸುವ ಹಿಂದೆ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಕಟ್ಟಿಹಾಕುವ ತಂತ್ರವೂ ಅಡಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈಚಿನ ಕೆಲವು ಚುನಾವಣೆಗಳಲ್ಲಿ ಡಿಕೆಶಿ ತಂತ್ರಗಾರಿಕೆ ಹೆಚ್ಚು ಕೆಲಸ ಮಾಡುತ್ತಿರುವುದು ಬಿಜೆಪಿಗೆ ತಲೆನೋವಾಗಿದೆ. ನಂಜನಗೂಡು, ಗುಂಡ್ಲುಪೇಟೆ ವಿಧಾನಸಭಾ ಚುನಾವಣೆಗಳು, ಈಚೆಗೆ ನಡೆದ ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಶಿವಕುಮಾರ್ ಸಂಘಟನೆಯ ನೇತೃತ್ವ ವಹಿಸಿ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದರು. ಇದೀಗ ಶಿವಮೊಗ್ಗ ಕ್ಷೇತ್ರಕ್ಕೆ ಅವರನ್ನೇ ಕಳುಹಿಸುವಂತೆ ಸ್ವತಃ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಮನವಿ ಮಾಡಿದ್ದಾರೆ.

ಇದರಿಂದ ಶಿವಮೊಗ್ಗದಲ್ಲಿ ಮಗನ ಭವಿಷ್ಯಕ್ಕೆ ಮುಳ್ಳಾಗುವ ಸಾಧ್ಯತೆ ತಪ್ಪಿಸಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಯೋಗೇಶ್ವರ್‌ ಮೇಲೆ ಒತ್ತಡ ತಂದು ಸ್ಪರ್ಧಿಸಲು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಸುರೇಶ್‌ ಗೆ ಪ್ರಬಲ ಪೈಪೋಟಿ ನೀಡಿದಲ್ಲಿ ಡಿಕೆಶಿಯನ್ನು ಇಲ್ಲಿಯೇ ಹೆಚ್ಚು ಕಾಲ ಕಳೆಯುವಂತೆ ನೋಡಿಕೊಳ್ಳಬಹುದು ಎನ್ನುವುದು ಬಿಜೆಪಿಯ ಲೆಕ್ಕಾಚಾರವಾಗಿದೆ.

* ದೋಸ್ತಿ ವಿಚಾರದಲ್ಲಿ ಜೆಡಿಎಸ್ ಕಾರ್ಯಕರ್ತರು ಮೈತ್ರಿ ಧರ್ಮ ಪಾಲಿಸಬೇಕು. ಸುರೇಶ್‌ರನ್ನು ದಾಖಲೆ ಅಂತರದಿಂದ ಗೆಲ್ಲಿಸಬೇಕು

ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !