ಶನಿವಾರ, ಆಗಸ್ಟ್ 24, 2019
23 °C

‘ಧಾರ್ಮಿಕ ಭಾವನೆಗೆ ಧಕ್ಕೆ ಸಲ್ಲ’

Published:
Updated:
Prajavani

ಚನ್ನಪಟ್ಟಣ: ‘ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ, ಯಾರಿಂದಲೂ ಧಕ್ಕೆಯುಂಟಾಗಬಾರದು’ ಎಂದು ಪುರ ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಗೋವಿಂದರಾಜು ಅಭಿಪ್ರಾಯಪಟ್ಟರು.

ಇಲ್ಲಿನ ಪುರ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ಶನಿವಾರ ನಡೆದ ಬಕ್ರೀದ್ ಹಬ್ಬದ ಪ್ರಯುಕ್ತ, ವಿವಿಧ ಸಮುದಾಯದವರ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

‘ಬಕ್ರೀದ್ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಬಾರದು. ಸಮುದಾಯದವರು ಹಬ್ಬ ಆಚರಣೆ ವೇಳೆ, ಪ್ರಾರ್ಥನೆ ಸಲ್ಲಿಸಲು ಬರುವಾಗ ಸಂಚಾರಕ್ಕೆ ತೊಂದರೆಯಾಗದಂತೆ ತೆರಳಬೇಕು. ಇತರ ಸಮುದಾಯದವರೂ ಮುಸ್ಲಿಮರಿಗೆ ತೊಂದರೆಯಾಗದಂತೆ ಸಹಕರಿಸಬೇಕು’ ಎಂದು ಸೂಚಿಸಿದರು.

ಸಂಚಾರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಶಿವಕುಮಾರ್ ಮಾತನಾಡಿ, ‘ಪ್ರತಿಯೊಂದು ಸಮುದಾಯದ ಹಬ್ಬಗಳು ಭಾವೈಕ್ಯತೆಯ ಸಂಕೇತ. ಇಂತಹ ಸಂದರ್ಭದಲ್ಲಿ ಯಾವುದೇ ರೀತಿಯ ಕಲಹಕ್ಕೆ ಅವಕಾಶವಿಲ್ಲದಂತೆ ತಮ್ಮ ಸಮುದಾಯದ ಹಬ್ಬಗಳನ್ನು ಆಚರಣೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಪೂರ್ವ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಹೇಮಂತ್ ಕುಮಾರ್ ಮಾತನಾಡಿ, ‘ಹಬ್ಬ ಆಚರಣೆ ಮಾಡುವುದು ಸಂತಸದ ಜೊತೆಗೆ ಸಹಬಾಳ್ವೆ ನಡೆಸಲು. ಇಂತಹ ಸಂದರ್ಭದಲ್ಲಿ ಸಾಮರಸ್ಯಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು’ ಎಂದರು.

ಪುರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಚೈತನ್ಯ ಕುಮಾರ್ ಹಾಗೂ ವಿವಿಧ ಸಮುದಾಯಗಳ ಮುಖಂಡರು ಇದ್ದರು.

Post Comments (+)