ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಧಾರೆಗೆ ಇಂದು ಚಾಲನೆ: ಡಿಕೆಶಿ ತವರಿನಿಂದಲೇ ಕಾರ್ಯಕ್ರಮ ಆರಂಭ

ಕಾಂಗ್ರೆಸ್‌ಗೆ ಜೆಡಿಎಸ್ ಸಡ್ಡು
Last Updated 16 ಏಪ್ರಿಲ್ 2022, 4:39 IST
ಅಕ್ಷರ ಗಾತ್ರ

ರಾಮನಗರ: ಜೆಡಿಎಸ್ ಹಮ್ಮಿಕೊಂಡಿರುವ ಜನತಾ ಜಲಧಾರೆ ಯೋಜನೆಗೆ ಜಿಲ್ಲೆಯಲ್ಲಿ ಇದೇ 16ರಂದು ಕನಕಪುರ ತಾಲ್ಲೂಕಿನ ಮೇಕೆದಾಟು ವಿನಿಂದ ಚಾಲನೆ ದೊರೆಯಲಿದೆ.

ಜಿಲ್ಲೆಯಲ್ಲಿ ಮೇಕೆದಾಟುವಿನಿಂದ ಜಲಧಾರೆ ಕಾರ್ಯಕ್ರಮ ಆರಂಭ ಆಗಲಿರುವುದು ವಿಶೇಷ. ಕಳೆದ ಜನವರಿ–ಫೆಬ್ರುವರಿಯಲ್ಲಿ ಕಾಂಗ್ರೆಸ್ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಇಲ್ಲಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿತ್ತು. ಇದೀಗ ಡಿಕೆಶಿ ಕ್ಷೇತ್ರದಿಂದಲೇ ಜೆಡಿಎಸ್ ಸಹ ಜಲಧಾರೆಯ ರಣಕಹಳೆ ಊದುತ್ತಿದೆ. ಮೊದಲ ದಿನ ಡಿಕೆಶಿ ಹುಟ್ಟೂರಾದ ದೊಡ್ಡಾಲಹಳ್ಳಿ ಮೂಲಕವೇ ಜಲಧಾರೆ ವಾಹನ ಮುಂದೆ ಸಾಗಲಿದೆ. ಈ ಮೂಲಕ ಡಿ.ಕೆ. ಸಹೋದರರಿಗೆ ಟಾಂಗ್ ನೀಡಲು ಜೆಡಿಎಸ್ ಉದ್ದೇಶಿಸಿದೆ.

ಜಿಲ್ಲೆಯ ರಥಯಾತ್ರೆ ವ್ಯಾಪ್ತಿಯಲ್ಲಿ ಮೇಕೆದಾಟು, ಹಾರೋಬೆಲೆ, ಮುತ್ತತ್ತಿ, ಇಗ್ಗಲೂರು, ಕಣ್ವ, ಮಂಚನಬೆಲೆ, ವೈ.ಜಿ. ಗುಡ್ಡ ಹಾಗೂ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ಸಂಗ್ರಹಣೆಗೆ ಯೋಜಿಸಲಾಗಿದೆ. ಒಟ್ಟು ಎಂಟು ಕಡೆಗಳಲ್ಲಿ ಜಲ ಸಂಗ್ರಹಣೆ ನಡೆಯಲಿದೆ. ಮೇಕೆದಾಟಿನಿಂದ ಆರಂಭಗೊಂಡು ಬೆಂಗಳೂರುವರೆಗೆ ನೂರಾರು ಕಿ.ಮೀ ಉದ್ದಕ್ಕೆ ರಥ ಸಾಗಲಿದೆ. ಈ ಸಂದರ್ಭದಲ್ಲಿ ಮಹಿಳೆಯರಿಂದ ಕಲಶಗಳ ಮೆರವಣಿಗೆ, ಕಲಾ ತಂಡಗಳಿಂದ ಅದ್ದೂರಿ ಸ್ವಾಗತ, ಗ್ರಾಮಗಳಲ್ಲಿ ಕಾರ್ಯಕ್ರಮ ಆಯೋಜನೆಗೆ ಜೆಡಿಎಸ್ ಉದ್ದೇಶಿಸಿದೆ.

ಮೇಕೆದಾಟು ಯೋಜನೆಯ ಮಹತ್ವ, ಅದಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆ ರಥಯಾತ್ರೆ ಬೆಳಕು ಚೆಲ್ಲಲಿದೆ. ರಥಯಾತ್ರೆ ವಾಹನದಲ್ಲಿರುವ ಡಿಜಿಟಲ್ ಪರದೆಯಲ್ಲಿ ಇದರ ಚಿತ್ರಣ ಮೂಡಿಬರಲಿದೆ.

ಬೆಳಿಗ್ಗೆ 10.30ಕ್ಕೆ ಮೇಕೆದಾಟಿನಲ್ಲಿ ಶಾಸಕರಾದ ಅನಿತಾ ಕುಮಾರಸ್ವಾಮಿ ಹಾಗೂ ಎ. ಮಂಜುನಾಥ್‌ ಚಾಲನೆ ನೀಡಿದ್ದಾರೆ. ಅಲ್ಲಿಂದ ಸಂಗಮ ಮಾರ್ಗವಾಗಿ ಗುನ್ನೂರು, ಉಯ್ಯಂಬಳ್ಳಿ, ದೊಡ್ಡಾಲಹಳ್ಳಿ, ಸೋರೆಕಾಯಿದೊಡ್ಡಿ, ಸಾತನೂರು ಮೂಲಕ ರಥಯಾತ್ರೆ ಸಂಚರಿಸಲಿದ್ದು, ಮೊದಲ ದಿನ ಹೊನಗನಹಳ್ಳಿಯಲ್ಲಿ ರಥಯಾತ್ರೆ ತಂಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT