ಭಾನುವಾರ, ಆಗಸ್ಟ್ 18, 2019
23 °C
ರಾಗಿ ಬಿತ್ತನೆಗೆ ಮಳೆಯ ಕೊರತೆ: ಸಂಕಷ್ಟದಲ್ಲಿ ರೈತ ಸಮೂಹ

ಚನ್ನಪಟ್ಟಣ, ಕನಕಪುರದಲ್ಲಿ ಬರದ ಛಾಯೆ

Published:
Updated:
Prajavani

ರಾಮನಗರ: ಜಿಲ್ಲೆಯಲ್ಲಿ ಈ ವರ್ಷ ಬರ ಆವರಿಸುವ ಲಕ್ಷಣಗಳು ದಟ್ಟವಾಗಿವೆ. ಅದರಲ್ಲೂ ಚನ್ನಪಟ್ಟಣ ಹಾಗೂ ಕನಕಪುರ ತಾಲ್ಲೂಕಿನಲ್ಲಿ ಮಳೆಯ ಕೊರತೆಯಿಂದಾಗಿ ಕೃಷಿ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ.

ಈ ವರ್ಷ ಜೂನ್‌ ಹಾಗೂ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾದ ಪರಿಣಾಮ ಈಗಾಗಲೇ ಕೃಷಿ ಕಾರ್ಯಕ್ಕೆ ತೊಂದರೆಯಾಗಿದೆ. ಜೂನ್‌ನ ಆರಂಭದಲ್ಲಿ ಜೋರು ಮಳೆಯಾಗಿದ್ದು, ಉತ್ತಮ ನಿರೀಕ್ಷೆ ಹುಟ್ಟಿಸಿತ್ತು. ಆದರೆ ನಂತರದಲ್ಲಿ ವರುಣ ಕೈ ಹಿಡಿಯಲಿಲ್ಲ. ಜುಲೈನಲ್ಲಿ ವಾಡಿಕೆಗಿಂತ ಶೇ 33ರಷ್ಟು ಮಳೆಯ ಕೊರತೆಯಾಗಿದ್ದು, ಬಹುತೇಕ ಜಮೀನು ಬಿತ್ತನೆಯಾಗದೇ ಉಳಿದಿದೆ.

ಜುಲೈನ ಕಡೆಯ ವಾರ ಹಾಗೂ ಆಗಸ್ಟ್‌ನ ಮೊದಲೆರಡು ವಾರಗಳು ಜಿಲ್ಲೆಯ ಕೃಷಿ ಚಟುವಟಿಕೆಗೆ ನಿರ್ಣಾಯಕವಾಗಿವೆ. ಇದೇ ಅವಧಿಯಲ್ಲಿ ಬಹುತೇಕ ರಾಗಿ ಬಿತ್ತನೆ ಕಾರ್ಯ ನಡೆಯಲಿದೆ. ರೈತರು ಹೊಲ ಹದ ಮಾಡಿಕೊಂಡಿದ್ದು, ಮಳೆಗಾಗಿ ಎದುರು ನೋಡುತ್ತಿದ್ದಾರೆ. ಜಿಲ್ಲೆಯಲ್ಲಿ ರಾಗಿ ಪ್ರಮುಖ ಬೆಳೆಯಾಗಿದೆ. ಶೇ 70ರಷ್ಟು ಜಮೀನಿನಲ್ಲಿ ಈ ಬೆಳೆಯನ್ನು ಬಿತ್ತನೆ ಮಾಡಲಾಗುತ್ತದೆ. ಆದರೆ ಸದ್ಯ ಬಿತ್ತನೆಗೆ ಯೋಗ್ಯವಾದಷ್ಟು ಮಳೆ ಬಿದ್ದಿಲ್ಲ. ಮುಂದಿನ ಎರಡು ವಾರಗಳು ನಿರ್ಣಾಯಕವಾಗಿವೆ.

‘ಆಗಸ್ಟ್‌ ಮಧ್ಯದವರೆಗೂ ಜಿಲ್ಲೆಯಲ್ಲಿ ರಾಗಿ ಬಿತ್ತನೆಗೆ ಅವಕಾಶ ಇದೆ. ರೈತರು 110–120 ದಿನಗಳ ಅವಧಿಯ ಮಧ್ಯಮಾವಧಿ ತಳಿಗಳನ್ನು ಬಳಕೆ ಮಾಡಬಹುದಾಗಿದೆ. ಮುಂದಿನ ಎರಡು ವಾರ ಕಾಲ ಮಳೆಯಾಗದೇ ಇದ್ದಲ್ಲಿ ಅಲ್ಪಾವಧಿ ತಳಿಯ ಬಿತ್ತನೆ ಬೀಜಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರವಿ.

‘ಕಳೆದ ಐದು ವರ್ಷದ ವಾಡಿಕೆ ಬಿತ್ತನೆಯನ್ನು ಲೆಕ್ಕಹಾಕಿ ಹೇಳುವುದಾದರೆ ಆಗಸ್ಟ್‌ 1ರವರೆಗೆ 19 ಸಾವಿರ ಹೆಕ್ಟೇರ್‌ನಷ್ಟು ಬಿತ್ತನೆ ಆಗಿರುತ್ತದೆ. ಈ ವರ್ಷ ಅದಕ್ಕಿಂತ ಕೊಂಚ ಹೆಚ್ಚೇ ಆಗಿದೆ. ಹೀಗಾಗಿ ರೈತರು ಆತಂಕ ಪಡಬೇಕಿಲ್ಲ. ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯೂ ಇದೆ’ ಎನ್ನುತ್ತಾರೆ ಅವರು.

ರಾಗಿ ಹೊರತುಪಡಿಸಿ ಜಿಲ್ಲೆಯಲ್ಲಿ 1082 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 1109 ಹೆಕ್ಟೇರಿನಲ್ಲಿ ಅವರೆ, 1728 ಹೆಕ್ಟೇರಿನಲ್ಲಿ ಅಲಸಂದೆ ಹಾಗೂ 755 ಹೆಕ್ಟೇರ್‌ನಲ್ಲಿ ಎಳ್ಳು ಬಿತ್ತನೆಯಾಗಿದೆ. ಈ ಪೈಕಿ ಎಳ್ಳು ಕಟಾವು ಮುಗಿದಿದ್ದು, ಉಳಿದ ಬೆಳೆಗಳು ಹಂತಹಂತವಾಗಿ ಕಟಾವಿಗೆ ಬರುತ್ತಿವೆ.

ಎಲ್ಲೆಲ್ಲಿ ಹಿನ್ನಡೆ: ಕನಕಪುರ ಹಾಗೂ ಚನ್ನಪಟ್ಟಣ ತಾಲ್ಲೂಕುಗಳು ಮಳೆಯ ತೀವ್ರ ಕೊರತೆ ಎದುರಿಸುತ್ತಿವೆ. ಕನಕಪುರದಲ್ಲಿ ಜುಲೈನಲ್ಲಿ 68 ಮಿ.ಮೀ. ಮಳೆಗೆ ಪ್ರತಿಯಾಗಿ 45.ಮಿ.ಮೀ. ಮಳೆಯಾಗಿದೆ. ಇಲ್ಲಿ ಒಟ್ಟಾರೆ ಶೇ 6ರಷ್ಟು ಜಮೀನು ಮಾತ್ರ ಬಿತ್ತನೆಗೆ ಒಳಪಟ್ಟಿದೆ. ಚನ್ನಪಟ್ಟಣದಲ್ಲಿ ಜುಲೈನಲ್ಲಿ ಜುಲೈನಲ್ಲಿ 76 ಮಿ.ಮೀ.ಗೆ ಪ್ರತಿಯಾಗಿ 57 ಮಿ.ಮೀ. ಮಳೆಯಾಗಿದ್ದು, ಶೇ 4ರಷ್ಟು ಕೃಷಿ ಪ್ರದೇಶ ಮಾತ್ರ ಬಿತ್ತನೆಗೆ ಒಳಪಟ್ಟಿದೆ.

ಉಳಿದ ಎರಡು ತಾಲ್ಲೂಕಿನಲ್ಲಿ ಮಳೆ ಕೊರತೆ ಇದೆ. ಮಾಗಡಿ ತಾಲ್ಲೂಕಿನಲ್ಲಿ ಪರಿಸ್ಥಿತಿ ಕೊಂಚ ಸುಧಾರಿಸಿದ್ದು, ಶೇ 41ರಷ್ಟು ಭೂಮಿಯಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ರಾಮನಗರ ತಾಲ್ಲೂಕಿನಲ್ಲಿ ಶೇ 22ರಷ್ಟು ಪ್ರದೇಶದಲ್ಲಿ ಕೃಷಿ ಕಾರ್ಯ ನಡೆದಿದೆ.

Post Comments (+)