ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಇ-ಲೋಕ್‌ ಅದಾಲತ್‌ 19ರಂದು

ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಸಿದ್ಧತೆ: ಇದೇ 18ರವರೆಗೆ ನೋಂದಣಿಗೆ ಅವಕಾಶ
Last Updated 7 ಸೆಪ್ಟೆಂಬರ್ 2020, 15:07 IST
ಅಕ್ಷರ ಗಾತ್ರ

ರಾಮನಗರ: ಕೋವಿಡ್-19 ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇತ್ಯರ್ಥವಾಗದ ಲೋಕ ಅದಾಲತ್ ಪ್ರಕರಣಗಳನ್ನು ಇದೇ 19 ರಂದು ನಡೆಯುವ ಮೆಗಾ ಇ-ಲೋಕ್‌ ಅದಾಲತ್ ನಲ್ಲಿ ಇತ್ಯರ್ಥಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಬಿ. ಜಿ. ರಮಾ ತಿಳಿಸಿದರು.

ಜಿಲ್ಲೆಯಲ್ಲಿ ಇ-ಲೋಕ ಅದಾಲತ್ ಅನುಷ್ಠಾನ ಕುರಿತು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು. "ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ಹೈಕೋರ್ಟ್‌ ಲೀಗಲ್ ಸರ್ವಿಸಸ್ ಕಮಿಟಿಯ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲೂ ಇ-ಲೋಕ ಅದಾಲತ್ ಅನ್ನು ಆಯೋಜಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ 6 ತಿಂಗಳ ಕಾಲ ನ್ಯಾಯಾಲಯದಲ್ಲಿ ಲೋಕ ಅದಾಲತ್ ಮೂಲಕ ಯಾವುದೇ ರೀತಿಯ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಕಕ್ಷಿದಾರರು ನ್ಯಾಯಾಲಯಕ್ಕೆ ಬರದೇ ಮನೆಯಲ್ಲಿಯೇ ಕುಳಿತು ಇಲ್ಲವೇ ವಕೀಲರ ಕಚೇರಿಯಲ್ಲಿ ಕುಳಿತು ರಾಜಿ ಸಂದಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು’ ಎಂದರು.

"ಇದೇ 19ರಂದು ದೇಶದಲ್ಲಿಯೇ ಪ್ರಥಮ ಬಾರಿಗೆ ಇ-ಲೋಕ್‌ ಅದಾಲತ್ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಚಾಲನೆ ನೀಡಲಾಗುತ್ತಿದೆ. ಸರ್ವರಿಗೂ ನ್ಯಾಯ ದೊರಕಿಸಿಕೊಡುವುದೇ ಇದರ ಉದ್ದೇಶ ಮತ್ತು ಧ್ಯೇಯವಾಗಿದೆ. ವಿಮಾ ಕಂಪನಿಗಳಿಂದ ಬರಬೇಕಾದ ಪರಿಹಾರ, ಅಪಘಾತ, ಕಂತು ಕಟ್ಟದಿರುವುದು ಸೇರಿದಂತೆ ಇನ್ನಿತರ ಸಣ್ಣಪುಟ್ಟ ಪ್ರಕರಣಗಳನ್ನು ರಾಜಿ ಇಲ್ಲವೆ ಸಂಧಾನದ ಮೂಲಕ ಬಗೆಹರಿಸಲು ಒತ್ತು ನೀಡಲಾಗುತ್ತಿದೆ. ಹೀಗಾಗಿ ಕಕ್ಷಿದಾರರು ಇದರ ಪ್ರಯೋಜನ ಪಡೆಯಬೇಕು’ ಎಂದು ಸಲಹೆ ನೀಡಿದರು.

ಅಲೆದಾಟ ತಪ್ಪಿಸಿ: "ಸಣ್ಣಪುಟ್ಟ ಪ್ರಕರಣಗಳಿದ್ದಲ್ಲಿ ಇನ್ನು ಮುಂದೇ ನ್ಯಾಯಾಲಯಗಳಿಗೆ ಅಲೆದಾಡುವ ಅಗತ್ಯವಿಲ್ಲ. ವಕೀಲರ ಕಚೇರಿ ಇಲ್ಲವೇ ಮನೆಯಲ್ಲಿಯೇ ಇದ್ದು, ಮೊಬೈಲ್ ಆಪ್ ಇಲ್ಲವೆ ಆನ್‌ಲೈನ್ ಮೂಲಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿದರೆ ಅವರಿಗೆ ನ್ಯಾಯವನ್ನು ದೊರಕಿಸುವ ಕೆಲಸ ಮಾಡಲಾಗುತ್ತಿದೆ. ಜಿಲ್ಲಾ ಮತ್ತು ತಾಲ್ಲೂಕುಗಳಲ್ಲಿ ಇ-ಅದಾಲತ್ ಆಯೋಜಿಸಲಾಗುತ್ತಿದೆ. ತಾಲೂಕವಾರು ಈ ಕಾರ್ಯಕ್ರಮ ಮಾಡಲಾಗುತ್ತಿದೆ . ಅಲ್ಲದೇ ವಕೀಲರು ಹಾಗೂ ಬಾರ್ ಕೌನ್ಸೆಲಿಂಗ್ ಜೊತೆ ಸಮಾಲೋಚನೆ ಮಾಡಲಾಗಿದೆ’ ಎಂದು ತಿಳಿಸಿದರು.

18ರವರೆಗೆ ನೋಂದಣಿ: "ಅದಾಲತ್ ಗೆ ಇದೇ 18ವರೆಗೆ ನೊಂದಣಿ ಮಾಡಿಕೊಳ್ಳಲಾಗುತ್ತದೆ. 19 ರಂದು ಏಕಕಾಲಕ್ಕೆ ಇ-ಅದಾಲತ್ ನಡೆಸಲಾಗುವುದು. ರಾಮನಗರ ಜಿಲ್ಲೆ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕಕ್ಷಿದಾರರನ್ನು ಹೊರತು ಪಡಿಸಿದರೆ, ವಕೀಲರು ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಬಹುದು ಇಲ್ಲವೆ ಆನ್‌ಲೈನ್ ಮೂಲಕವೂ ಭಾಗವಹಿಸಬಹುದು. ಅವಶ್ಯಕತೆ ಕಂಡು ಬಂದಲ್ಲಿ ಕಕ್ಷಿದಾರರನ್ನು ಆನ್‌ಲೈನ್ ಮೂಲಕ ಸಂಪರ್ಕಿಸಲಾಗುವುದು’ ಎಂದು ತಿಳಿಸಿದರು.

4624 ಪ್ರಕರಣ ಇತ್ಯರ್ಥ

"ಜಿಲ್ಲೆಯಲ್ಲಿ ಒಟ್ಟು 39,680 ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ 4,624 ಪ್ರಕರಣಗಳನ್ನು ಮೆಗಾ ಲೋಕ ಅದಾಲತ್ ನಲ್ಲಿ ರಾಜಿ ಪ್ರಕರಣಗಳನ್ನಾಗಿ ಪರಿಗಣಿಸಿ ಇತ್ಯರ್ಥ ಪಡಿಸಲಾಗುತ್ತಿದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ವೆಂಕಟಪ್ಪ ತಿಳಿಸಿದರು.

ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ರಾಜಿ ಆಗಬಹುದಾದ ಪ್ರಕರಣಗಳಾದ ಅಪಘಾತ, ಪರಿಹಾರ ವ್ಯಾಜ್ಯ, ಆಸ್ತಿ ಸಂಬಂಧಿತ, ಕೌಟುಂಬಿಕ ಪ್ರಕರಣ, ವಿಮೆ, ಹಣಕಾಸು ವ್ಯಾಜ್ಯ, ಸಣ್ಣ ಪುಟ್ಟ ಸಿವಿಲ್ ವ್ಯಾಜ್ಯ, ಲೇವಾದೇವಿ, ಬಾಡಿಗೆ, ಅಪಘಾತ ಪರಿಹಾರ, ವಾಹನ ವಿಮಾ ಕಂತು ಬಾಕಿ, ಭೂಮಿ ಖರೀದಿ ಸಂಬಂಧಿತ ಪ್ರಕರಣಗಳನ್ನು ರಾಜಿಗಾಗಿ ನಿಗದಿಪಡಿಸಲಾಗಿದೆ. ನ್ಯಾಯಾಲಯಕ್ಕೆ ಬರದೇ ಒಂದೇ ಒಂದು ಬಾರಿಗೆ ನ್ಯಾಯಸಮ್ಮತವಾಗಿ ರಾಜಿ ಇಲ್ಲವೆ ಸಂಧಾನದ ಮೂಲಕ ಇವುಗಳನ್ನು ಹೆಚ್ಚಿನ ಶುಲ್ಕವಿಲ್ಲದೆ ಎರಡೂ ಕಡೆಯವರು ಪರಿಹರಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT