ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಕಾರ್ಡಿಗೆ ಬೆರಳಚ್ಚು: ಜನರ ಪರದಾಟ

ನೋಂದಣಿ ಕೌಂಟರ್‌ಗಳಲ್ಲಿ ಗ್ರಾಹಕರ ಸಾಲು: ದಿನವಿಡೀ ಕಾಯುವ ಪರಿಸ್ಥಿತಿ
Last Updated 11 ಜೂನ್ 2019, 14:23 IST
ಅಕ್ಷರ ಗಾತ್ರ

ರಾಮನಗರ: ಇಕೆವೈಸಿ ತಂತ್ರಾಂಶದ ಮೂಲಕ ಪಡಿತರ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಸದಸ್ಯರ ಬೆರಳಚ್ಚು ಮತ್ತು ಆಧಾರ್ ಕಾರ್ಡ್‌ಗಳ ಸಂಖ್ಯೆಯನ್ನು ಜೋಡಣೆ ಮಾಡಲಾಗುತ್ತಿದೆ. ಇದರಿಂದಾಗಿ ಕೌಂಟರ್‌ಗಳಲ್ಲಿ ಜನಸಂದಣಿ ಹೆಚ್ಚಿದ್ದು, ಸಾರ್ವಜನಿಕರು ಪರದಾಡುವಂತೆ ಆಗಿದೆ.

ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಸದಸ್ಯರು ಕೈ ಬೆರಳಚ್ಚು ನೀಡುವ ಮೂಲಕ (ಇಕೆವೈಸಿ) ತಪ್ಪದೇ ನವೀಕರಣ ಮಾಡಿಸಬೇಕು. ಇಲ್ಲವಾದಲ್ಲಿ ಆಗಸ್ಟ್‌ನಿಂದ ಪಡಿತರ ಧಾನ್ಯಗಳ ವಿತರಣೆ ರದ್ದಾಗಲಿದೆ ಎಂದು ಸರ್ಕಾರವು ಎಚ್ಚರಿಸಿದೆ. ಇದರ ಜತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬದ ಸದಸ್ಯರು ಜಾತಿ ಮತ್ತು ಅದಾಯದ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯನ್ನು ನ್ಯಾಯ ಬೆಲೆ ಅಂಗಡಿಯಲ್ಲಿ ಸಲ್ಲಿಸಬೇಕು.

ಇಕೆವೈಸಿ ತಂತ್ರಾಂಶದಿಂದ ಪಡಿತರದಾರರು ಸಮಸ್ಯೆ ಎದುರಿಸುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳಾಗಲಿ, ನ್ಯಾಯಬೆಲೆ ಅಂಗಡಿಯವರಾಗಲಿ ಪಡಿತರದಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವುದು ಜನರ ದೂರು.

‘ನ್ಯಾಯಬೆಲೆ ಅಂಗಡಿಗಳಲ್ಲಿ ನಿಮ್ಮ ಬೆರಳಚ್ಚು ಬರುತ್ತಿಲ್ಲ, ಆಹಾರ ಇಲಾಖೆಗೆ ಹೋಗಿ ಎನ್ನುತ್ತಾರೆ. ಆಹಾರ ಇಲಾಖೆಗೆ ಹೋದರೆ ನೀವು ಆಧಾರ್ ಕಾರ್ಡ್‌ ಕೇಂದ್ರಕ್ಕೆ ಹೋಗಿ ಅಲ್ಲಿ ಮತ್ತೊಮ್ಮೆ ನಿಮ್ಮ ಬೆರಳಚ್ಚನ್ನು ಕೊಡಿ ಎನ್ನುತ್ತಾರೆ. ಹೀಗೆ ಗ್ರಾಹಕರನ್ನು ಸತಾಯಿಸಲಾಗುತ್ತಿದೆ’ ಎಂದು ದೊಡ್ಡಗಂಗವಾಡಿಯ ರಾಜಶೇಖರಯ್ಯ ಅಸಮಾಧಾನ ವ್ಯಕ್ತಪಡಿಸಿದರು.

‘ರಾಮನಗರದಲ್ಲಿ ಮಿನಿವಿಧಾನ ಸೌಧ ಸೇರಿದಂತೆ ಮೂರು ಬ್ಯಾಂಕ್ ಗಳಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಮಾಡಲಾಗುತ್ತಿದೆ. ಆಧಾರ್ ಗೆ ಮತ್ತೊಮ್ಮೆ ಬೆರಳಚ್ಚು ಕೊಡಲು ಎರಡು ತಿಂಗಳ ಕಾಲ ಕಾಯಬೇಕಾಗಿದೆ. ಆಧಾರ್ ಕೇಂದ್ರಗಳಲ್ಲಿ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಜನರು ನಿಂತಿರುತ್ತಾರೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಹದಿನೈದು ದಿನಗಳಿಂದ ಕಳೆದ ತಿಂಗಳ ಅಕ್ಕಿ ಪಡೆಯಲು ಅಲೆದಾಡುತ್ತಿದ್ದೇನೆ. ನ್ಯಾಯಬೆಲೆ ಅಂಗಡಿಯವರು ಕಾರ್ಡ್‌ ನಲ್ಲಿರುವವರೆಲ್ಲರೂ ಬರಬೇಕು ಎನ್ನುತ್ತಾರೆ, ಜತೆಗೆ ಈಗ ಬನ್ನಿ, ನಾಳೆ ಬನ್ನಿ ಎಂದು ಸತಾಯಿಸುತ್ತಿದ್ದಾರೆ’ ಎಂದು ಪಡಿತರ ಗ್ರಾಹಕ ಹೆಬ್ಬಕೋಡಿಯ ಹನುಮಂತಯ್ಯ ಬೇಸರ ವ್ಯಕ್ತಪಡಿಸಿದರು.

‘ಹೊಸದಾಗಿ ಅರ್ಜಿ ಸಲ್ಲಿಸುವವರಿಗೂ ಪಡಿತರ ಚೀಟಿಯನ್ನು ಕೊಡುತ್ತಿಲ್ಲ, ಹಲವು ಮಂದಿ ಅರ್ಜಿ ಸಲ್ಲಿಸಿ ನಾಲ್ಕೈದು ತಿಂಗಲಾಗಿವೆ. ಪಡಿತರ ಚೀಟಿಗೆ ಹೆಸರು ಸೇರಿಸಲು ಆಗುತ್ತಿಲ್ಲ, ಹೆಸರುಗಳನ್ನು ತಿದ್ದುಪಡಿ ಮಾಡಿಸಲು ಆಗುತ್ತಿಲ್ಲ’ ಎಂದು ತಿಳಿಸಿದರು.

‘ಈ ಅವ್ಯವಸ್ಥೆಯನ್ನು ಸರಿಪಡಿಸಿ ಎಂದು ತಹಶೀಲ್ದಾರ್ ಗೆ ಮನವಿ ಮಾಡಲು ಹೋದರೆ, ತಹಶೀಲ್ದಾರ್ ಕಚೇರಿ ಯಾವಾಗಲೂ ಬಾಗಿಲು ಹಾಕಿರುತ್ತದೆ. ಆಹಾರ ಇಲಾಖೆಯ ಅಧಿಕಾರಿಗಳು ಪಡಿತರದಾರರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದೇ, ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಕೂಡಲೆ ಈ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ತಿಳಿಸಿದರು.

**
ಜುಲೈ ಅಂತ್ಯದವರೆಗೆ ಅವಕಾಶ
‘ಪಡಿತರ ಕಾರ್ಡ್‌ಗಳನ್ನು ಕೆಲವರು ಎರಡು ಕಡೆ ಹೊಂದಿದ್ದಾರೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಇರಬಹುದು. ಆ ನಿಟ್ಟಿನಲ್ಲಿ ಪಡಿತರ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಸದಸ್ಯರ ಬೆರಳಚ್ಚು ಮತ್ತು ಆಧಾರ್ ಕಾರ್ಡ್‌ಗಳ ಸಂಖ್ಯೆಯನ್ನು ಜೋಡಣೆ ಮಾಡಲಾಗುತ್ತಿದೆ. ಜುಲೈ ಅಂತ್ಯದವರೆಗೆ ಕಾಲಾವಕಾಶ ನೀಡಲಾಗಿದೆ. ಪ್ರತಿಯೊಬ್ಬ ಪಡಿತರದಾರರು ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಚ್ಚು ನೀಡಬೇಕು’ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

**

ನ್ಯಾಯಬೆಲೆ ಅಂಗಡಿ, ಆಹಾರ ಇಲಾಖೆ, ಆಧಾರ್‌ ಕೇಂದ್ರ ಎಲ್ಲೆಡೆಯೂ ಜನರನ್ನು ಸತಾಯಿಸಲಾಗುತ್ತಿದೆ. ಗಂಟೆಗಟ್ಟಲೆ ಕಾದರೂ ಪ್ರಯೋಜನ ಆಗುತ್ತಿಲ್ಲ
ಶಂಕರ್‌,ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT