ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮಾಂತರ: ಮತದಾನ ಪ್ರಕ್ರಿಯೆಗೆ ಸಿದ್ಧತೆ, 15 ಅಭ್ಯರ್ಥಿಗಳು ಕಣದಲ್ಲಿ

Last Updated 3 ಮೇ 2019, 15:46 IST
ಅಕ್ಷರ ಗಾತ್ರ

ರಾಮನಗರ: ಇದೇ 18ರಂದು ನಡೆಯಲಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಗೆ ಜಿಲ್ಲಾಡಳಿತವು ಸಜ್ಜುಗೊಂಡಿದೆ.

ಚುನಾವಣೆಗೆ ಅಗತ್ಯವಾದ ಸಿದ್ಧತೆಗಳ ಕುರಿತು ಕ್ಷೇತ್ರದ ಚುನಾವಣಾಧಿಕಾರಿ ಕೆ. ರಾಜೇಂದ್ರ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ಕ್ಷೇತ್ರದಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿನ 2672 ಮತಗಟ್ಟೆಗಳಲ್ಲಿ ಗುರುವಾರ ಬೆಳಿಗ್ಗೆ 7ರಿಂದ ಸಂಜೆ 6ವರೆಗೆ ಮತದಾನ ನಡೆಯಲಿದೆ. ಪ್ರತಿ ಮತಗಟ್ಟೆಯಲ್ಲಿ ಒಬ್ಬ ಅಧ್ಯಕ್ಷಾಧಿಕಾರಿ, ಮೂವರು ಮತದಾನಾಧಿಕಾರಿ ಹಾಗೂ ಒಬ್ಬ ಡಿ ದರ್ಜೆ ನೌಕರರನ್ನು ನೇಮಿಸಲಾಗಿದೆ. ಒಟ್ಟಾರೆಯಾಗಿ 3,123 ಚುನಾವಣಾಕಾರಿ, 3107 ಸಹಾಯಕ ಚುನಾವಣಾಧಿಕಾರಿ ಹಾಗೂ 6169 ಮತದಾನಾಧಿಕಾರಿಗಳು ಸೇರಿ ಒಟ್ಟು 12,399 ಮಂದಿ ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ತಿಳಿಸಿದರು.

‘3111 ಬ್ಯಾಲೆಟ್ ಯುನಿಟ್, 3111 ಸಿಯು, 3150 ವಿವಿ ಪ್ಯಾಟ್ ಸೇರಿ ಒಟ್ಟು 9372 ಮತಯಂತ್ರಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮತದಾರರು ಅಭ್ಯರ್ಥಿಗಳನ್ನು ಗುರುತಿಸಲು ಅನುಕೂಲ ಆಗುವಂತೆ ಮತಯಂತ್ರಗಳಲ್ಲಿನ ಮತಪತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರವನ್ನು ಮುದ್ರಿಸಲಾಗಿದೆ’ ಎಂದರು.

ವಾಹನಗಳ ಬಳಕೆ: ಮತಗಟ್ಟೆಗಳಿಗೆ ಸಿಬ್ಬಂದಿ ಮತ್ತು ಮತಗಟ್ಟೆ ಸಾಮಗ್ರಿಗಳನ್ನು ಸಾಗಿಸಲು 374 ಬಸ್, 166 ಮ್ಯಾಕ್ಸಿ ಕ್ಯಾಬ್, ಮಿನಿಬಸ್ ಹಾಗೂ 83 ಜೀಪ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮತಗಟ್ಟೆಗೆ ತುರ್ತು ಚಿಕಿತ್ಸೆ ಸಾಮಗ್ರಿ ಒದಗಿಸಲಾಗಿದೆ. ಮತದಾರರಿಗೆ ಅವರ ಮತಗಟ್ಟೆ ಹಾಗೂ ಕ್ರಮ ಸಂಖ್ಯೆ ತಿಳಿಸುವ ಭಾವಚಿತ್ರ ಇರುವ ಮತದಾರರ ಚೀಟಿಯನ್ನು ವಿತರಿಸಲಾಗುತ್ತಿದೆ’ ಎಂದರು.

ಸಖಿ, ಅಂಗವಿಕಲರ ಮತಗಟ್ಟೆ: ಸಂಪೂರ್ಣ ಮಹಿಳಾ ಸಿಬ್ಬಂದಿಯೇ ಇರುವಂತಹ ಸಖಿ ಮತಗಟ್ಟೆಗಳನ್ನು ಈ ಚುನಾವಣೆಯಲ್ಲಿ ಸ್ಥಾಪಿಸಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಎರಡಂತೆ ಈ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಅಂಗವಿಕಲ ಸಿಬ್ಬಂದಿಯೇ ಇರುವ ಮತಗಟ್ಟೆ ಹಾಗೂ ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

ಪ್ರತಿ ಮತಗಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ, ಅಂಗವಿಕಲರಿಗಾಗಿ ರ್‍ಯಾಂಪ್ ವ್ಯವಸ್ಥೆ ಇರಲಿದೆ. ಮತಗಟ್ಟೆಯ 100 ಮೀಟರ್ ಅಂತರದಲ್ಲಿ ಸಹಾಯ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ ಎಂದರು.

ಅಂಗವಿಕಲರಿಗೆ ವಿವಿಧ ಸೌಲಭ್ಯ: ಜಿ.ಪಂ. ಸಿಇಒ ಮುಲ್ಲೈ ಮುಹಿಲನ್‌ ಮಾತನಾಡಿ ‘ಕ್ಷೇತ್ರದ ವ್ಯಾಪ್ತಿಯಲ್ಲಿ 13,109 ಅಂಗವಿಕಲರು ಇದ್ದಾರೆ. ಇವರು ಇರುವಲ್ಲಿಗೇ ತೆರಳಿ ಮತಗಟ್ಟೆಗೆ ಕರೆತರಲು 415 ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟು 1227 ವೀಲ್‌ಚೇರ್‌ಗಳನ್ನು ಒದಗಿಸಲಾಗುತ್ತಿದೆ. ಅಂಧರಿಗೆ ಮತ ಚಲಾಯಿಸಲು ಅನುಕೂಲ ಆಗುವಂತೆ ಬ್ರೈಲ್‌ ಲಿಪಿ ಇರುವ ಫಾರ್ಮ್‌ 7 ಅನ್ನು ಒದಗಿಸಲಾಗುವುದು’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ರಮೇಶ್ ಮಾತನಾಡಿ ಜಿಲ್ಲಾ ಪೊಲೀಸ್ ವ್ಯಾಪ್ತಿಗೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಒಟ್ಟು 1481 ಮತಗಟ್ಟೆಗಳು ಒಳಪಡಲಿವೆ. ಈ ಪೈಕಿ ಸೂಕ್ಷ್ಮ ಮತಗಟ್ಟೆಗಳಿಗೆ ಒಬ್ಬ ಹೆಡ್‌ ಕಾನ್‌ಸ್ಟೆಬಲ್, ಒಬ್ಬ ಹೋಮ್‌ ಗಾರ್ಡ್‌ ಭದ್ರತೆ ಒದಗಿಸಲಾಗುವುದು. ಉಳಿದ ಮತಗಟ್ಟೆಗೆ ತಲಾ ಒಬ್ಬರು ಸಿಬ್ಬಂದಿ ನೀಡಲಾಗುವುದು. ಒಟ್ಟು 4 ಸಿಪಿಎಂಎಸ್‌ ತುಕಡಿಗಳು, 400 ಹೋಮ್‌ಗಾರ್ಡ್ಸ್‌, 5 ಕೆಎಸ್‌ಆರ್‌ಪಿ ಹಾಗೂ 4 ಪ್ಲಟೂನ್‌ ಡಿಎಆರ್ ತುಕಡಿಗಳ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ. ಮೊಬೈಲ್ ಪೊಲೀಸ್ ಸ್ಕ್ವಾಡ್‌ಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

112 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ಅಳವಡಿಸಲು ಕ್ರಮವಹಿಸಲಾಗುತ್ತಿದೆ. ಉಳಿದ ಮತಗಟ್ಟೆಗಳಿಗೆ ಸೂಕ್ಷ್ಮ ವೀಕ್ಷಕರು, ವಿಡಿಯೋಗ್ರಾಫರ್‌ಗಳನ್ನು ನಿಯೋಜಿಸಲಾಗುವುದು ಎಂದರು.

ಮೊಬೈಲ್‌ ನಿಷೇಧ: ನಿಷೇಧಾಜ್ಞೆ ಜಾರಿ
ಮತಗಟ್ಟೆಗಳ ಒಳಗೆ ಮತದಾರರು ಮೊಬೈಲ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಏಜೆಂಟರೂ ತೆಗೆದುಕೊಂಡು ಹೋಗುವಂತೆ ಇಲ್ಲ. ಮತದಾನದ ದಿನದಂದು ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. 18ರಂದು ಕ್ಷೇತ್ರದಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿ ಇದ್ದು, ಮದ್ಯ ಮಾರಾಟ ಮತ್ತು ಸಾಗಣೆಗೆ ನಿಷೇಧ ಹೇರಲಾಗಿದೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದರು.

ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರ
ಕುಣಿಗಲ್ ಕ್ಷೇತ್ರ– -ಮಹಾತ್ಮ ಗಾಂಧಿ ಪದವಿ ಪೂರ್ವ ಕಾಲೇಜು, ರಾಜರಾಜೇಶ್ವರಿ ನಗರ ಕ್ಷೇತ್ರ -–ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ , ಬೆಂಗಳೂರು ದಕ್ಷಿಣ ಕ್ಷೇತ್ರ– -ಜಯನಗರ ನ್ಯಾಷನಲ್ ಕಾಲೇಜು, ಆನೇಕಲ್ – ಚಂದಾಪುರ ಸ್ವಾಮಿ ವಿವೇಕಾನಂದ ಗ್ರಾಮಾಂತರ ಶಾಲೆ , ಮಾಗಡಿ–ಎನ್ ಇಎಸ್ ಬಡಾವಣೆಯಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ರಾಮನಗರ–ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕನಕಪುರ–ರೂರಲ್ ಪದವಿ ಪೂರ್ವ ಕಾಲೇಜು ಹಾಗೂ ಚನ್ನಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಬೆಳಗ್ಗೆ ಮಸ್ಟರಿಂಗ್ ಕಾರ್ಯವು ನಡೆಯಲಿದೆ. ಗುರುವಾರ ಮತದಾನದ ಮುಕ್ತಾಯದ ಬಳಿಕ ಇಲ್ಲಿಯೇ ಡಿಮಸ್ಟರಿಂಗ್ ನಡೆಯಲಿದೆ.

ಮತದಾನದ ಬಳಿಕ ರಾಮನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮತಯಂತ್ರಗಳನ್ನು ಇಡಲು ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲಿಯೇ ಮೇ 23ರಂದು ಮತ ಎಣಿಕೆ ಕಾರ್ಯವು ನಡೆಯಲಿದೆ.

ಮತದಾರರ ವಿವರ
24,97,458–ಕ್ಷೇತ್ರದಲ್ಲಿನ ಒಟ್ಟು ಮತದಾರರು
12,87,524–ಪುರುಷರು
12,09,276–ಮಹಿಳೆಯರು
341–ಇತರೆ ಮತದಾರರು

ಅಂಕಿ–ಅಂಶ
15–ಚುನಾವಣಾ ಕಣದಲ್ಲಿ ಇರುವ ಒಟ್ಟು ಅಭ್ಯರ್ಥಿಗಳು
2672–ಕ್ಷೇತ್ರದಲ್ಲಿನ ಒಟ್ಟು ಮತಗಟ್ಟೆಗಳ ಸಂಖ್ಯೆ
609–ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳು
3111–ಮತಯಂತ್ರಗಳ ಬಳಕೆ
3150–ಚುನಾವಣೆಗೆ ಬಳಸುತ್ತಿರುವ ವಿವಿಪ್ಯಾಟ್‌ಗಳು
12,399–ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿ
623–ಬಳಸಲಾಗುತ್ತಿರುವ ವಾಹನಗಳು
16–ಸಖಿ ಮತಗಟ್ಟೆಗಳ ಸ್ಥಾಪನೆ
4–ಅಂಗವಿಕಲ ಸಿಬ್ಬಂದಿ ಮತಗಟ್ಟೆಗಳ ಸ್ಥಾಪನೆ
8–ಮಾದರಿ ಮತಗಟ್ಟೆಗಳ ಸ್ಥಾಪನೆ
13,109–ಕ್ಷೇತ್ರದ ವ್ಯಾಪ್ತಿಯಲ್ಲಿನ ಅಂಗವಿಕಲರು
415–ಅಂಗವಿಕಲರನ್ನು ಕರೆತರಲು ಸ್ಥಾಪಿಸಲಾದ ಮತಗಟ್ಟೆಗಳು

ಮುಖ್ಯಾಂಶಗಳು
* ಮತದಾರರ ಎಡಗೈ ತೋರುಬೆರಳಿಗೆ ಶಾಹಿ ಗುರುತು
* ಮತಗಟ್ಟೆ ಒಳಗೆ ಮೊಬೈಲ್‌ ಬಳಕೆ ನಿಷೇಧ
* ಗುರುವಾರ ಸಾರ್ವತ್ರಿಕ ರಜೆ ಘೋಷಣೆ
* ಮದ್ಯ ಮಾರಾಟ, ಸಾಗಣೆ ನಿಷೇಧ
* ಮತದಾನದ ಸಮಯ: ಬೆಳಿಗ್ಗೆ 7ರಿಂದ ಸಂಜೆ 6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT