ಅನುದಾನ ಬಿಡುಗಡೆ ವಿಳಂಬ: ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಗ್ರಹಣ

ಬುಧವಾರ, ಜೂನ್ 26, 2019
24 °C
ಎರಡೂವರೆ ವರ್ಷವಾದರೂ ಮುಗಿಯದ ಕಾಮಗಾರಿ

ಅನುದಾನ ಬಿಡುಗಡೆ ವಿಳಂಬ: ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಗ್ರಹಣ

Published:
Updated:
Prajavani

ರಾಮನಗರ: ನಗರದ ಎಪಿಎಂಸಿ ಎದುರು ಇರುವ ಸ್ಮಶಾನದಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಾಣ ಕಾಮಗಾರಿಯು ನನೆಗುದಿಗೆ ಬಿದ್ದಿದೆ.
ಕಳೆದ ಎರಡೂವರೆ ವರ್ಷದ ಹಿಂದೆ ಕಾಮಗಾರಿ ಆರಂಭಗೊಂಡಿದ್ದು, ಈವರೆಗೆ ಕೇವಲ ಕಟ್ಟಡ ನಿರ್ಮಾಣ ಕಾರ್ಯ ಮಾತ್ರವೇ ನಡೆಯುತ್ತಿದೆ. ಈ ಕಾಮಗಾರಿಯೂ ಇನ್ನೂ ಪೂರ್ಣಗೊಂಡಿಲ್ಲ. ಚಿತಾಗಾರಕ್ಕೆ ಬೇಕಾದ ಯಂತ್ರೋಪರಣಗಳು ಇನ್ನಷ್ಟೇ ಬರಬೇಕಿದೆ.

ಹಣಕಾಸಿನ ಕೊರತೆಯಿಂದಾಗಿ ಕಾಮಗಾರಿ ಅರ್ಧಕ್ಕೆ ನಿಂತಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಚಿತಾಗಾರ ನಿರ್ಮಾಣಕ್ಕೆ ₨4.5 ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ನಿರ್ಮಿತಿ ಕೇಂದ್ರವು ನಿರ್ಮಾಣದ ಹೊಣೆ ಹೊತ್ತಿದೆ. ಬೆಸ್ಕಾಂನಿಂದ ₨2.5 ಕೋಟಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಸಂಗ್ರಹಿಸುವ ಖನಿಜ ನಿಧಿಯಲ್ಲಿ ₨1 ಕೋಟಿ ಅನುದಾನವನ್ನು ಇದಕ್ಕಾಗಿ ನೀಡಲಿದೆ. ಉಳಿದ ₨1 ಕೋಟಿ ವೆಚ್ಚವನ್ನು ನಗರಸಭೆಯು ಭರಿಸಬೇಕಿದೆ. ಆದರೆ ಬೆಸ್ಕಾಂ ಇನ್ನೂ ಪೂರ್ತಿ ಹಣ ನೀಡಿಲ್ಲ ಎಂದು ಹೇಳಲಾಗಿದೆ. ನಗರಸಭೆ ಅಧಿಕಾರಿಗಳ ಬಳಿ ಇದರ ಮಾಹಿತಿಯೇ ಇಲ್ಲದಾಗಿದೆ.

‘ಹಣಕಾಸಿನ ಕೊರತೆಯಿಂದ ಚಿತಾಗಾರದ ಕಾಮಗಾರಿಯು ನಿಂತಿರುವುದು ನಿಜ. ಯಾವುದಕ್ಕೆ ಎಷ್ಟು ಹಣ ಬಿಡುಗಡೆಯಾಗಿದೆ ಎಂಬುದನ್ನು ನಿರ್ಮಿತಿ ಕೇಂದ್ರದ ಅಧಿಕಾರಿಗಳಲ್ಲೇ ಕೇಳಬೇಕು’ ಎನ್ನುತ್ತಾರೆ ರಾಮನಗರ ನಗರಸಭೆಯ ಸಹಾಯಕ ಎಂಜಿನಿಯರ್ ಬಿ. ರಾಜೇಗೌಡ. ಇನ್ನು ನಿರ್ಮಿತಿ ಕೇಂದ್ರದ ಅಧಿಕಾರಿಗಳಂತೂ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗುವುದಿಲ್ಲ.

ಆಧುನಿಕ ಸೌಲಭ್ಯ: ಶವ ಸಂಸ್ಕಾರಕ್ಕೆ ಅಗತ್ಯವಾದ ಆಧುನಿಕ ತಂತ್ರಜ್ಞಾನವನ್ನು ಒಳಗೊಳ್ಳಲಿರುವ ಈ ಚಿತಾಗಾರದಲ್ಲಿ ಹಿಂದೂ ಸಂಪ್ರದಾಯಕ್ಕೆ ಅನುಗುಣವಾಗಿ ಅವಶ್ಯವಾದ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ವಿದ್ಯುತ್ ಹಾಗೂ ಗ್ಯಾಸ್ ಮೂಲಕ ಶವವನ್ನು ಸುಡುವ ವ್ಯವಸ್ಥೆ ಬರಲಿದೆ. ಎರಡೂ ವ್ಯವಸ್ಥೆಗಳು ಪ್ರತ್ಯೇಕವಾಗಿ ಇರಲಿವೆ. ಇದಲ್ಲದೆ ಶ್ರಾದ್ಧ ಭವನ, ಸ್ನಾನಗೃಹ, ಶೌಚಾಲಯಗಳು, ಪುಟ್ಟದೊಂದು ಉದ್ಯಾನವನ್ನು ಇಲ್ಲಿನ ಸ್ಮಶಾನವು ಒಳಗೊಳ್ಳಲಿದೆ.

ಚಿತಾಗಾರ, ಶ್ರಾದ್ಧ ಭವನ ಸೇರಿದಂತೆ ವಿವಿಧ ಕಟ್ಟಡ ಕಾಮಗಾರಿಗಳು ಮುಕ್ತಾಯದ ಹಂತ ತಲುಪಿವೆ. ಇದಕ್ಕೆ ಅವಶ್ಯವಾದ ಯಂತ್ರೋಪಕರಣಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಗುತ್ತಿಗೆದಾರರಿಗೆ ಮಾಹಿತಿ ನೀಡಲಾಗಿದೆ. ಶೌಚಾಲಯ, ಸ್ನಾನ ಗೃಹ, ಕಾಂಪೌಂಡ್ ಸೇರಿದಂತೆ ಅವಶ್ಯವಾದ ಮೂಲ ಸೌಕರ್ಯಗಳು ಹಂತಹಂತವಾಗಿ ನಿರ್ಮಾಣ ಆಗಬೇಕಿದೆ.

ಮೈಸೂರು, ಮೆಟ್ಟುಪಾಳ್ಯಂ ಮಾದರಿ

ಕನಕಪುರ ಹಾಗೂ ರಾಮನಗರದಲ್ಲಿ ಮಾದರಿ ವಿದ್ಯುತ್‌ ಚಿತಾಗಾರದ ನಿರ್ಮಾಣ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದರು. ಅದರಂತೆ ಈ ಎರಡೂ ನಗರಸಭೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೈಸೂರು ಹಾಗೂ ತಮಿಳುನಾಡಿನ ಮೆಟ್ಟುಪಾಳ್ಯಂಗೆ ಭೇಟಿ ಕೊಟ್ಟು ಅಲ್ಲಿನ ತಾಂತ್ರಿಕತೆ ಮತ್ತು ಮೂಲ ಸೌಕರ್ಯದ ಅಧ್ಯಯನ ಮಾಡಿದ್ದರು. ಅವುಗಳನ್ನು ಮಾದರಿಯಾಗಿ ಇರಿಸಿಕೊಂಡು ಇಲ್ಲಿ ಚಿತಾಗಾರ ನಿರ್ಮಾಣಕ್ಕೆ ಯೋಜಿಸಲಾಯಿತು.

ಅದರಂತೆ ಎರಡೂವರೆ ವರ್ಷದ ಹಿಂದೆ ರಾಮನಗರದಲ್ಲಿ ₨4.5 ಕೋಟಿ ಹಾಗೂ ಕನಕಪುರದಲ್ಲಿ ₨ 3.5 ಕೋಟಿ ವೆಚ್ಚದಲ್ಲಿ ಚಿತಾಗಾರಗಳ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

* ಅನುದಾನದ ಕೊರತೆಯಿಂದ ಕಾಮಗಾರಿಗೆ ಹಿನ್ನಡೆಯಾಗಿದೆ. ಯಾರಿಂದ ಎಷ್ಟು ಹಣ ಬರಬೇಕು ಎಂಬುದು ನಿರ್ಮಿತಿ ಕೇಂದ್ರದವರಿಗೇ ಗೊತ್ತು
–ಬಿ. ರಾಜೇಗೌಡ, ಸಹಾಯಕ ಎಂಜಿನಿಯರ್‌, ರಾಮನಗರ ನಗರಸಭೆ

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !