ಗುರುವಾರ , ಡಿಸೆಂಬರ್ 8, 2022
18 °C
ನಗರದ ಸುತ್ತಮುತ್ತ ಸಂಚಾರ: ಕಾಡಿಗೆ ಕಳುಹಿಸಲು ಹರಸಾಹಸ

ರಾಮನಗರಕ್ಕೆ ಬಂದ ಒಂಟಿ ಸಲಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ನಗರದ ಹೊರವಲಯದಲ್ಲಿ ಬುಧವಾರ ಒಂಟಿ ಸಲಗ ಸಂಚಾರ ಕೈಗೊಂಡಿದ್ದು, ಸುತ್ತಮುತ್ತಲಿನ ಜನರು ಆತಂಕದಲ್ಲಿಯೇ ಕಾಲ ಕಳೆಯುವಂತಾಯಿತು.

ಚನ್ನಪಟ್ಟಣ ತಾಲ್ಲೂಕಿನ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿನ ಆನೆ ಹಿಂಡಿನಿಂದ ತಪ್ಪಿಸಿಕೊಂಡ ಈ ಸಲಗ ದೊಡ್ಡಮಣ್ಣುಗುಡ್ಡೆ ಪ್ರದೇಶ ದಾಟಿ ಮುಂಜಾನೆ ಬೋಳಪ್ಪನಹಳ್ಳಿ ಕೆರೆ ಅಂಗಳದಲ್ಲಿ ಕಾಣಿಸಿಕೊಂಡಿತು. ಅದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು. ಕೂಡಲೇ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿ, ಆನೆ ನಾಡಿನತ್ತ ನುಗ್ಗದಂತೆ ನೋಡಿಕೊಂಡರು. ಪಟಾಕಿ ಸಿಡಿಸಿ ಶಬ್ದ ಮಾಡಿ, ಆನೆಯನ್ನು ಮತ್ತೆ ಕಾಡಿನತ್ತ ಕಳುಹಿಸುವ ಪ್ರಯತ್ನ ಮಾಡಿದರೂ ಫಲ ಸಿಗಲಿಲ್ಲ. ಸುತ್ತಲಿನ ನೂರಾರು ಗ್ರಾಮಸ್ಥರು ಕುತೂಹಲದಿಂದ ನೆರೆದಿದ್ದರು.

ರಾಮನಗರದ ವಿವಿಧ ಗ್ರಾಮಗಳಲ್ಲಿ ದಿನವಿಡೀ ಸುತ್ತಾಟ ನಡೆಸಿದ ಸಲಗ ಸಂಜೆ ಬಿಳಗುಂಬ ಸಮೀಪ ಬೆಂಗಳೂರು–ಮೈಸೂರು ಹೆದ್ದಾರಿಯ ಮಾವಿನ ತೋಟವೊಂದರಲ್ಲಿ ಕೆಲ ಹೊತ್ತು ಬಿಡಾರ ಹೂಡಿತ್ತು. ರಾತ್ರಿ ಮತ್ತೆ ಬೋಳಪ್ಪನ ಕೆರೆ ಬಳಿ ಬಂದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಾವಲಿಗೆ ನಿಂತಿದ್ದರು.

ಮಳೆ ಅಡ್ಡಿ: ಸಲಗ ರಾತ್ರಿ ಹೊತ್ತು ಕಾಡಿನತ್ತ ತೆರಳಲಿದ್ದು, ಒಂದೊಮ್ಮೆ ಹೋಗದಿದ್ದರೆ ಕಾರ್ಯಾಚರಣೆ ಮೂಲಕ ಕಾಡಿಗಟ್ಟಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿತ್ತು. ಆದರೆ ರಾಮನಗರದಲ್ಲಿ ಸಂಜೆ ನಂತರ ಮಳೆ ಆರಂಭ ಆಗಿದ್ದು, ಕಾರ್ಯಾಚರಣೆಗೆ ಅಡ್ಡಿಯಾಯಿತು.

‘ಇದೇ ಆನೆಯು ಈ ಹಿಂದೆ ಮಾಗಡಿ ಸಾವನದುರ್ಗ ಮಾರ್ಗವಾಗಿ ಬಿಡದಿಯ ನಗರ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ನಂತರದಲ್ಲಿ ರಾಮನಗರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಸುರಕ್ಷಿತವಾಗಿ ಕಾಡಿಗೆ ಕಳುಹಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ನಗರಸಭೆ ಅಧ್ಯಕ್ಷೆ ಪತಿಗೆ ಗಾಯ

ಆನೆ ನೋಡಲು ಹೋಗಿದ್ದ ವೇಳೆ ಜಾರಿಬಿದ್ದು ನಗರಸಭೆ ಅಧ್ಯಕ್ಷೆ ಪವಿತ್ರಾ ಅವರ ಪತಿ ಲಕ್ಷ್ಮಿಕಾಂತ್‌ ಗಾಯಗೊಂಡಿದ್ದಾರೆ.

ಬೋಳಪ್ಪನ ಕೆರೆ ಬಳಿ ಆನೆ ಕಾಣಿಸಿಕೊಂಡಿದ್ದು, ಅದನ್ನು ಹಿಮ್ಮೆಟ್ಟಿಸುವ ಕೆಲಸದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿರತರಾಗಿದ್ದರು. ಈ ವೇಳೆ ಲಕ್ಷ್ಮಿಕಾಂತ್‌ ಸಹ ಇದ್ದು, ಆಯಾ ತಪ್ಪಿ ಬಿದ್ದಿದ್ದಾರೆ. ಇದರಿಂದಾಗಿ ಅವರ ಪಕ್ಕೆಲುಬಿನ ಮೂಳೆ ಮುರಿದಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು