ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿ ಅಗತ್ಯ

Last Updated 17 ಮಾರ್ಚ್ 2019, 14:32 IST
ಅಕ್ಷರ ಗಾತ್ರ

ರಾಮನಗರ : ಮಕ್ಕಳ ರಕ್ಷಣೆಯ ನಿಟ್ಟಿನಲ್ಲಿ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಎಂ.ಜಿ. ಉಮಾ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 (ಕರ್ನಾಟಕ ತಿದ್ದುಪಡಿ) ಅಧಿನಿಯಮ-2016, ಪೊಕ್ಸೋ ಕಾಯ್ದೆ-2012 ಮತ್ತು ಬಾಲನ್ಯಾಯ (ಮಕ್ಕಳ ಪೊಷಣೆ ಮತ್ತು ರಕ್ಷಣೆ) ಕಾಯ್ದೆ 2015 ರ ಅನುಷ್ಠಾನ ಕುರಿತು ಜಿಲ್ಲೆಯಲ್ಲಿನ ನ್ಯಾಯಾಧಿಶರುಗಳಿಗೆ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಂ.ಎಚ್. ಕಾನೂನು ಕಾಲೇಜಿನ ಪ್ರಾಚಾರ್ಯ ಬಾಣದ ರಂಗಯ್ಯ ಮಾತನಾಡಿ ಅನಕ್ಷರತೆ ಹಾಗೂ ಬಡತನ ಸೇರಿದಂತೆ ಹಲವು ಕಾರಣದಿಂದ ಬಾಲ್ಯ ವಿವಾಹದಂತಹ ಅನಿಷ್ಠ ಅಚರಣೆಗಳು ಹೆಚ್ಚಾಗುತ್ತಿವೆ. ಗುರು ವಿದ್ಯಾರ್ಥಿಗಳಿಗೆ ತಿದ್ದಿದರೆ, ಹೆಣ್ಣು ಇಡೀ ಕುಟುಂಬವನ್ನೇ ತಿದ್ದುತ್ತಾಳೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ತಿಳಿಸಿದರು.

ಕಾನೂನಿನ ಪ್ರಕಾರ ಹೆಣ್ಣಿಗೆ 18 ಹಾಗೂ ಗಂಡಿಗೆ 21 ವರ್ಷ ತುಂಬಿರಬೇಕಾಗುತ್ತದೆ. ಈ ನಿಯಮದ ಉಲ್ಲಂಘನೆ ಬಾಲ್ಯ ವಿವಾಹವಾಗುತ್ತದೆ. ರಾಜಸ್ಥಾನದಲ್ಲಿ ಜಾತ್ರೆಯಲ್ಲಿ ಇಂದಿಗೂ ಕೂಡ ಬಾಲ್ಯವಸ್ಥೆಯ ಹೆಣ್ಣು ಮಕ್ಕಳನ್ನು ವಿವಾಹ ಮಾಡಲಾಗುತ್ತದೆ ಎಂದು ತಿಳಿಸಿದರು.

ಬಾಲ್ಯವಿವಾಹದಂತಹ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಕಷ್ಟು ಪ್ರಯತ್ನ ಪಡಲಾಗುತ್ತಿದೆ. ಆದರೆ, ಇನ್ನೂ ಕೂಡ ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ. ಕರ್ನಾಟಕ ಈ ವಿಷಯದಲ್ಲಿ ಶೇ 47 ರಷ್ಟು ಪ್ರಮಾಣ ಹೊಂದಿದೆ ಎಂದು ಮಾಹಿತಿ ನೀಡಿದರು.

ಸ್ಥಳೀಯ ಮಟ್ಟದ ಅಧಿಕಾರಿಯಿಂದ ಹಿಡಿದು ಶಾಲೆಯ ಮುಖ್ಯಶಿಕ್ಷಕರು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ಹಲವು ಅಧಿಕಾರಿಗಳು ಬಾಲ್ಯ ವಿವಾಹರನ್ನು ತಡೆಗಟ್ಟುವ ಅಧಿಕಾರ ಹೊಂದಿರುತ್ತಾರೆ. ಇವರು ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಸಂಪೂರ್ಣವಾಗಿ ಬಾಲ್ಯ ವಿವಾಹವನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ಬಾಲ್ಯದಲ್ಲೇ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದರಿಂದ ಅನೇಕ ಮಾರಕ ಕಾಯಿಲೆಗೆ ತುತ್ತಾಗುವ ಸಂಭವ ಇರುತ್ತದೆ. ಗರ್ಭಕೋಶಕ್ಕೆ ಹಾನಿ ಸೇರಿದಂತೆ ಬಂಜೆತನ ಕಾಡಬಹುದು. ಅದಕ್ಕಾಗಿ ಸರ್ಕಾರ ನಿಗಧಿ ಮಾಡಿರುವ ನಿಯಮದಂತೆ ಹೆಣ್ಣು ಹಾಗೂ ಗಂಡುಗೆ ವಿವಾಹ ಮಾಡಬೇಕು ಎಂದು ಸಲಹೆ ನೀಡಿದರು.

ನಿವೃತ್ತ ನ್ಯಾಯಾಧೀಶ ಎಸ್.ಆರ್.ಸೋಮಶೇಖರ್ ಪೊಕ್ಸೋ ಕಾಯ್ದೆ ಕುರಿತು ಮಾಹಿತಿ ನೀಡಿದರು. ನ್ಯಾಯಾಧೀಶರಾದ ಉಮೇಶ್ ಮೂಲಿಮನಿ, ಶಂಕರಪ್ಪ ನಿಂಬಣ್ಣ ಕಲ್ಕಣಿ, ಗೋಪಾಲ ಕೃಷ್ಣ ರೈ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮುಲ್ಲೈಮುಹಿಲನ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ದಿಲೀಪ್, ಅಂಗವಿಕಲರ ಕಲ್ಯಾಣಾಧಿಕಾರಿ ಹೇಮಾವತಿ ಇದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿಈ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT