ಶುಕ್ರವಾರ, ನವೆಂಬರ್ 15, 2019
26 °C

ಬಿಎಸ್‌ವೈಗೆ ಜ್ಞಾನೋದಯ ಆಗುತ್ತೆ: ಡಿ.ಕೆ.ಶಿವಕುಮಾರ್‌

Published:
Updated:
Prajavani

ರಾಮನಗರ: ಮೆಡಿಕಲ್ ಕಾಲೇಜು ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಹುಶಃ ಜ್ಞಾನೋದಯ ಆಗಿರಬೇಕು. ಕನಕಪುರಕ್ಕೆ ಕಾಲೇಜು ವಾಪಸ್ ತೆಗೆದುಕೊಂಡು ಬರುವ ವಿಶ್ವಾಸ ನನಗೆ ಇದೆ ಎಂದು ಶಾಸಕ‌ ಡಿ.ಕೆ. ಶಿವಕುಮಾರ್ ಹೇಳಿದರು.

ತಾಲ್ಲೂಕಿನ ಮೆಳೇಹಳ್ಳಿ ಗ್ರಾಮದಲ್ಲಿ‌ ಶುಕ್ರವಾರ ರಾತ್ರಿ‌ ಜಿ.‌ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ನಿವಾಸಕ್ಕೆ ಭೇಟಿ ನೀಡಿ‌ ಕುಟುಂಬದವರಿಗೆ ಸಾಂತ್ವನ‌ ಹೇಳಿದ ಸಂದರ್ಭ ಪತ್ರಕರ್ತರ ಜೊತೆ ಅವರು‌ ಮಾತನಾಡಿದರು.

ಮೆಡಿಕಲ್ ಕಾಲೇಜು ವಿಚಾರವಾಗಿ ಡಿಕೆಶಿ ಜೊತೆ ಚರ್ಚಿಸುತ್ತೇನೆ ಎಂದು ವೀರಾಪುರದಲ್ಲಿ ಬಿಎಸ್ ವೈ ಹೇಳಿಕೆ ಕುರಿತು ಅವರು ಪ್ರತಿಕ್ರಿಯಿಸಿದರು.‌ ಒಂದು ಜಿಲ್ಲೆಗೆ ಒಂದು ಅವಕಾಶ ಇದೆ. ಅವರಿಗೂ ಕೊಡಲಿ. ನಮ್ಮ ಅವಕಾಶ ಕಿತ್ತುಕೊಂಡರಲ್ಲ ಎಂಬುದೇ ಬೇಜಾರು. ಯಡಿಯೂರಪ್ಪ ಅವರೇ ತಿದ್ದುಪಡಿ‌ ಮಾಡಿ ಆದೇಶ ಹೊರಡಿಸುತ್ತಾರೆ ಎಂಬ ವಿಶ್ವಾಸ ಇದೆ. ಇಲ್ಲ ಅಂದ್ರೆ ನನ್ನ ರಾಜಕಾರಣ ಗೊತ್ತಲ್ಲ ಎಂದು ಟಾಂಗ್ ನೀಡಿದರು.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಹಿತ ಹಲವರಿಗೆ ನೀಡಲಾದ ಎಸ್ ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದ‌ ಕುರಿತು ದಿಗ್ರ್ಬಮೆ ವ್ಯಕ್ತಪಡಿಸಿದ ಅವರು, ಇದೊಂದು ಗಂಭೀರ ವಿಚಾರ. ಈ ಬಗ್ಗೆ ನಾಳೆ ವಿವರವಾಗಿ‌ ಮಾತನಾಡುತ್ತೇನೆ ಎಂದರು.

ಒಳ್ಳೆ ಹುಡುಗ: ರಮೇಶ್ ಪತ್ನಿ ಸೌಮ್ಯಾ ಹಾಗು ತಾಯಿ ಸಾವಿತ್ರಮ್ಮ ಅವರು ಡಿಕೆಶಿ ಮುಂದೆ ಕಣ್ಣೀರಿಟ್ಟರು. ಅವರಿಗೆ ಸಾಂತ್ವನ ಹೇಳಿದ ಶಿವಕುಮಾರ್ ' ರಮೇಶ್‌ ಒಳ್ಳೆ ಹುಡುಗ. ಸುಮಾರು ವರ್ಷದಿಂದ ನಾನು ಬಲ್ಲೆ. ಐಟಿಯವರು ಅವನಿಗೆ ಏನು ಪ್ರಶ್ನೆ‌ ಕೇಳಿರಬಹುದು ಎಂದು ಗೊತ್ತಿದೆ. ಸೋನಿಯಾ ಗಾಂಧಿ‌ ಸಹ ಈ‌ ಬಗ್ಗೆ‌ ನನ್ನಲ್ಲಿ ವಿಚಾರಿಸಿದರು. ನಾವೆಲ್ಲ ಒಂದೇ ಕುಟುಂಬ. ಅವರ ಕುಟುಂಬಕ್ಕೆ ಯಾವ ರೀತಿ ಸಹಾಯ ಮಾಡಬಹುದು ಎಂದು ಯೋಚಿಸಿದ್ದೇನೆ. ಪಕ್ಷದ ಅಧ್ಯಕ್ಷರ ಜೊತೆ‌ ಮಾತನಾಡುತ್ತೇನೆ ಎಂದರು.
ರಮೇಶ್ ತಂದೆ ಸಂಪಂಗಯ್ಯ ಇದ್ದರು.

ಪ್ರತಿಕ್ರಿಯಿಸಿ (+)