ಗುರುವಾರ , ಡಿಸೆಂಬರ್ 2, 2021
19 °C
ಇಂದಿನಿಂದ ಪೂರ್ವ ಪ್ರಾಥಮಿಕ ಹಂತದ ಕಲಿಕೆಗೆ ಮತ್ತೆ ಚಾಲನೆ: ಮಕ್ಕಳ ಸುರಕ್ಷತೆಗೆ ಒತ್ತು

dnp ಅಂಗನವಾಡಿ ಅಂಗಳಕ್ಕೆ ಚಿಣ್ಣರ ಪ್ರವೇಶ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಎರಡು ವರ್ಷದ ಬಳಿಕ ಜಿಲ್ಲೆಯಲ್ಲಿನ ಅಂಗನವಾಡಿಗಳ ಬಾಗಿಲು ಸೋಮವಾರ ಮತ್ತೆ ತೆರೆಯಲಿದ್ದು, ಚಿಣ್ಣರನ್ನು ಸ್ವಾಗತಿಸಲು ಸಿದ್ಧತೆ ನಡೆದಿದೆ.

ಜಿಲ್ಲೆಯಲ್ಲಿ 1,543 ಅಂಗನವಾಡಿಗಳು ಇದ್ದು, ಈ ವರ್ಷ 24 ಸಾವಿರದಷ್ಟು ಮಕ್ಕಳು ಇವುಗಳಿಗೆ ಪ್ರವೇಶ ಪಡೆದಿದ್ದಾರೆ. ರಾಜ್ಯದಾದ್ಯಂತ ಕೋವಿಡ್‌ ಪ್ರಕರಣಗಳ ಸಂಖ್ಯೆ ಕ್ಷೀಣಿಸಿದ ಹಿನ್ನೆಲೆಯಲ್ಲಿ ಸರ್ಕಾರ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಅನುಮತಿ ನೀಡಿದೆ. ಅದರಂತೆ ಅಂಗನವಾಡಿಗಳ ಬಾಗಿಲುಗಳು ತೆರೆಯಲಿದ್ದು, 3ರಿಂದ 6 ವರ್ಷ ವಯಸ್ಸಿನ ಒಳಗಿನ ಚಿಣ್ಣರು ಈ ಕೇಂದ್ರಗಳಿಗೆ ಹೆಜ್ಜೆ ಇಡಲಿದ್ದಾರೆ.

ಹೇಗಿದೆ ಸಿದ್ಧತೆ: ಅಂಗನವಾಡಿಗಳ ಆರಂಭದ ಕುರಿತು ಜಿ.ಪಂ. ಸಿಇಒ ಸೇರಿದಂತೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ಹಲವು ಪೂರ್ವ ಸಿದ್ಧತಾ ಸಭೆಗಳು ನಡೆದಿದ್ದು, ಅನುಸರಿಸಬೇಕಾದ ಕ್ರಮಗಳ ಕುರಿತು ಚರ್ಚೆಗಳು ನಡೆದಿವೆ.

ಕೋವಿಡ್ ಕಾರಣಕ್ಕೆ ವರ್ಷದ ಕಾಲ ಅಂಗನವಾಡಿಗಳ ಬಾಗಿಲು ಮುಚ್ಚಿತ್ತು. ಈಚೆಗೆ ಅಂಗನವಾಡಿ ಕಾರ್ಯಕರ್ತೆಯರು ಇವುಗಳ ಬಾಗಿಲು ತೆರೆದು ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿಗಳು ಹಾಗೂ ಪಟ್ಟಣ ಪ್ರದೇಶದಲ್ಲಿ ನಗರಸಭೆ ಇಲ್ಲವೇ ಪಟ್ಟಣ ಪಂಚಾಯಿತಿಗಳ ವತಿಯಿಂದ ಈಗಾಗಲೇ ಸ್ಯಾನಿಟೈಜ್‌ ಕಾರ್ಯ ನಡೆದಿದೆ. ನಂತರ ಅಂಗನವಾಡಿಗಳನ್ನು ಮತ್ತೊಮ್ಮೆ ಸ್ವಚ್ಛಗೊಳಿಸಲಾಗಿದೆ. ಅಂಗನವಾಡಿಗಳ ಅಂಗಳ, ಅಡುಗೆ ಪರಿಕರಗಳು ಎಲ್ಲವನ್ನೂ ಸ್ವಚ್ಛವಾಗಿ ಇಡಲಾಗಿದೆ.

ದಿನಕ್ಕೆ ಎರಡೇ ಗಂಟೆ: ಸದ್ಯ ಅಂಗನವಾಡಿಗಳು ದಿನಕ್ಕೆ ಎರಡು ಗಂಟೆ ಕಾಲ ಮಾತ್ರ ಕಾರ್ಯ ನಿರ್ವಹಿಸಲಿವೆ. ಬೆಳಿಗ್ಗೆ 10ಕ್ಕೆ ತರಗತಿಗಳು ಆರಂಭ ಆಗಲಿದ್ದು, ಮಧ್ಯಾಹ್ನ 12ಕ್ಕೆಲ್ಲ ಬಾಗಿಲು ಮುಚ್ಚಲಿವೆ. ಈ ಅವಧಿಯಲ್ಲಿ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಕೆಲಸವನ್ನು ಅಂಗನವಾಡಿ ಶಿಕ್ಷಕರು ಮಾಡಲಿದ್ದಾರೆ.

ಬಿಸಿಯೂಟ ಇಲ್ಲ: ಸದ್ಯ 10 ದಿನಗಳ ಕಾಲ ಈ ಕಲಿಕಾ ಕೇಂದ್ರಗಳಲ್ಲಿ ಮಕ್ಕಳಿಗೆ ಬಿಸಿಯೂಟ ಸಿಗದು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸದ್ಯ ಮಕ್ಕಳ ಮನೆಗೇ ಆಹಾರ ಧಾನ್ಯ ಪೂರೈಕೆ ಮುಂದುವರಿಯಲಿದೆ. ಮೊದಲ ದಿನದಂದು ಸಿಹಿ ತಯಾರಿ ಮಾತ್ರ ನಡೆಯಲಿದೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸಿ.ವಿ. ರಾಮನ್‌.

ಜಿಲ್ಲೆಯಲ್ಲಿ 1,543 ಅಂಗನವಾಡಿಗಳಿವೆ. ಪ್ರತಿ ಕೇಂದ್ರಕ್ಕೂ ಎರಡು ಬಾಳೆ ಕಂದು ಎಂದರೂ 3 ಸಾವಿರ ಗಿಡಗಳು ಬೇಕು. ಇದರ ಬದಲಿಗೆ ಈ ಗಿಡಗಳು ಹಣ್ಣು ಬಿಟ್ಟಲ್ಲಿ ಮಕ್ಕಳಿಗೆ ಬಾಳೆ ಹಣ್ಣಿನ ರೂಪದಲ್ಲಿ ಪೌಷ್ಟಿಕತೆ
ಸಿಗಲಿದೆ.

ಹೀಗಾಗಿ ಈ ಬಾರಿ ಕೇಂದ್ರಗಳಲ್ಲಿ ಬಾಳೆ ಕಂದು ಕಟ್ಟದೇ ಇರಲು ನಿರ್ಧರಿಸಲಾಗಿದೆ. ಬದಲಿಗೆ ತೆಂಗಿನ ಗರಿಗಳು, ಮಾವಿನ ತೋರಣ ಬಳಸಿಕೊಂಡು ಅಂಗನವಾಡಿಗಳನ್ನು ಸಿಂಗರಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.