ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ಮನೆ ಬಾಗಿಲಿಗೆ ಅಗತ್ಯ ವಸ್ತುಗಳು

ಮಾಗಡಿ: ಶಾಸಕ ಎ.ಮಂಜುನಾಥ ಮಾಹಿತಿ ಲಾಕ್‌ಡೌನ್‌ ಬಿಗಿಗೊಳಿಸಲು ಸೂಚನೆ
Last Updated 30 ಮಾರ್ಚ್ 2020, 13:59 IST
ಅಕ್ಷರ ಗಾತ್ರ

ಮಾಗಡಿ: ಕೊರೊನಾ ವೈರಸ್‌ ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರ ಮನೆ ಬಾಗಿಲಿಗೆ ತರಕಾರಿ, ಪಡಿತರ ಮತ್ತು ವೃದ್ದರಿಗೆ ಅಗತ್ಯ ಔಷಧಗಳನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.

ಪುರಸಭೆ ಆವರಣದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಪುರಸಭೆ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಲಾಕ್‌ಡೌನ್‌ ಬಿಗಿಗೊಳಿಸಬೇಕು. ಕೊರೊನಾ ಹರಡುವಿಕೆ ತಡೆಗಟ್ಟಲು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲುವಾರಕ್ಕೊಮ್ಮೆ ಸಭೆ ನಡೆಸಲಾಗುವುದು. ಮಾರ್ಚ್ 31ರಂದು ಬೆಳಿಗ್ಗೆ 11 ಗಂಟೆಗೆ ರಾಮನಗರದಲ್ಲಿ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸ್ಯಾನಿಟೈಸರ್‌ ಮತ್ತು ಮಾಸ್ಕ್‌ಗಳನ್ನು ವಿತರಿಸಲಾಗುವುದು. ಇದರ ಖರ್ಚು ವೆಚ್ಚವನ್ನು ವೈಯಕ್ತಿಕ ಹಾಗೂ ಪಕ್ಷದಿಂದ ಭರಿಸಲಾಗುತ್ತದೆ ಎಂದು ವಿವರಿಸಿದರು.

ಜಿಲ್ಲೆಯ ಮತ್ತು ಮಾಗಡಿ ಕ್ಷೇತ್ರದ ಜನರು ಕೊರೊನಾ ವೈರಸ್‌ ಹರಡುವಿಕೆಯ ತಡೆಗಟ್ಟಲು ಸಹಕರಿಸಬೇಕು. ಸರ್ಕಾರ ಮತ್ತು ಜಿಲ್ಲಾಡಳಿತ ಹೊರಡಿಸಿರುವ ನಿಯಮಾವಳಿಗಳನ್ನು ಪಾಲಿಸಬೇಕು. ಮನೆಯಲ್ಲಿಯೇ ಇರುವ ಮೂಲಕ ಇಡೀ ಸಮಾಜವನ್ನು ರಕ್ಷಿಸಬೇಕು. ಈ ಕುರಿತು ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ಮನೆ ಬಾಗಿಲಿಗೆ ಸೇವೆ: ಪಟ್ಟಣ ಮತ್ತು ತಾಲ್ಲೂಕಿನಲ್ಲಿ ಇರುವ ನಿರ್ಗತಿಕರು, ಬಡವರು, ದಿನಗೂಲಿ ಕಾರ್ಮಿಕರನ್ನು ಗುರುತಿಸಿ ಅವರಿಗೆ ಅಗತ್ಯ ಆಹಾರ ಪೂರೈಕೆ ಮಾಡಲಾಗುವುದು. ಪುರಸಭೆ ವ್ಯಾಪ್ತಿಯ ಪ್ರತಿಯೊಂದು ವಾರ್ಡ್‌ಗಳಲ್ಲಿ ಹಂತ ಹಂತವಾಗಿ 1 ಸಾವಿರ ಮಾಸ್ಕ್‌ ವಿತರಿಸಲಾಗುವುದು. ನಂತರ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಮಾಸ್ಕ್‌ ವಿತರಣೆ ಮಾಡಲಾಗುತ್ತದೆ. ಸೋಂಕು ತಾಲ್ಲೂಕಿನ ಜನತೆಗೆ ಬರದಂತೆ ತಡೆಗಟ್ಟಲು ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಸಹಕರಿಸಲಿದ್ದಾರೆ ಎಂದು ಹೇಳಿದರು.

ರೈತರ ಮೇಲೆ ದೌರ್ಜನ್ಯ ನಡೆಸಿ, ಅವರು ಬೆಳೆದ ತರಕಾರಿಯನ್ನು ಕಡಿಮೆ ಬೆಲೆಗೆ ಖರೀದಿಸಿ, ಗ್ರಾಹಕರಿಗೆ ದುಪ್ಪಟ್ಟು ಬೆಲೆಗೆ ಮಾರುವ ಮಧ್ಯವರ್ತಿಗಳನ್ನು ಗುರುತಿಸಿ ಕ್ರಮಕೈಗೊಳ್ಳುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಬಹಿಷ್ಕಾರ ಬೇಡ: ಕ್ವಾರಂಟೈನ್‌ನಲ್ಲಿ ಇರುವವರನ್ನು ಕೀಳರಿಮೆಯಿಂದ ನೋಡುವುದು. ಗ್ರಾಮದಿಂದ ಬಹಿಷ್ಕರಿಸುವುದು ಸರಿಯಲ್ಲ. ತಪ್ಪು ಸಂದೇಶ ಹರಡುವವರ ವಿರುದ್ದ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ವಿದೇಶಗಳಿಗೆ ಹೋಗಿ ಬಂದವರನ್ನು ಗುರಿಯಾಗಿಸಿಕೊಂಡು, ಅವು ಇರುವ ಗ್ರಾಮಗಳ ಸಂಪರ್ಕ ರಸ್ತೆಯನ್ನು ಮುಚ್ಚಿರುವುದು ಸರಿಯಲ್ಲ. ಬಿಡದಿ ಹೋಬಳಿಯ ಬುಡ್ಗ ಜಂಗಮರ ಬೈರಾಗಿ ಪಾಳ್ಯ ಮತ್ತು ಕುದೂರು ಹೋಬಳಿಯ ಎಸ್‌.ಎಸ್‌.ಪಾಳ್ಯ ಗ್ರಾಮಗಳ ರಸ್ತೆ ಸಂಪರ್ಕವನ್ನು ಕಡಿತಗೊಳಿಸಿರುವುದು ಸರಿಯಲ್ಲ ಎಂದು ಹೇಳಿದರು.

ಟ್ಯಾಂಕರ್‌ ಮೂಲಕ ನೀರು: ತಾಲ್ಲೂಕಿನ 32 ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜನತೆಗೆ ಕುಡಿಯವ ನೀರಿಗೆ ತೊಂದರೆಯಾಗದಂತೆ ನಿತ್ಯ ಗಮನಿಸಬೇಕು. ಅಗತ್ಯ ಬಿದ್ದರೆ ಟ್ಯಾಂಕರ್‌ಗಳ ಮೂಲಕ ಕೊಳವೆಬಾವಿಗಳಿಂದ ನೀರು ಸಂಗ್ರಹಿಸಿ ಮನೆಗಳಿಗೆ ನೀರು ಸರಬರಾಜು ಮಾಡಲೇಬೇಕು ಎಂದು ತಾಲ್ಲೂಕು ಪಂಚಾಯಯಿತಿ ಇಒ ಟಿ.ಪ್ರದೀಪ್‌ ಅವರಿಗೆ ಸೂಚಿಸಿದರು.

ಕೊರೊನಾ ಪೀಡಿತರಿಗೆ ನೆರವು ನೀಡುವವರು ಜಿಲ್ಲಾಧಿಕಾರಿಗಳ ಖಾತೆಗೆ ಹಾಕಬೇಕು. ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡುದಾರರಿಗೆ ಮನೆ ಬಾಗಿಲಿಗೆ ಪಡಿತರವನ್ನು ಸೂಕ್ತವಾಗಿ ವಿತರಣೆ ಮಾಡಿಸಬೇಕು. ಪಡಿತರ ವಿತರಕರ ಮೇಲೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದರು.

ಜಡೆದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿರುವ ₹1 ಲಕ್ಷ ಚೆಕ್‌ ಅನ್ನು ತಹಶೀಲ್ದಾರ್‌ ನರಸಿಂಹಮೂರ್ತಿ ಅವರಿಗೆ ನೀಡಲಾಯಿತು.

ಪುರಸಭೆ ಮುಖ್ಯಾಧಿಕಾರಿ ಮಹೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌. ಸಿದ್ದೇಶ್ವರ, ಸರ್ಕಲ್‌ ಇನ್‌ಸ್ಪೆಕ್ಟರ್‌ ಬಿ.ಎಸ್‌.ಮಂಜುನಾಥ, ತಾಲ್ಲೂಕು ವೈದ್ಯಾಧಿಕಾರಿ ಡಾ.ಸತೀಶ್‌, ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಾಜೇಶ್‌, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆರ್‌.ರಂಗನಾಥ್‌, ಆಹಾರ ಶಿರಸ್ಥೇದಾರ ಎನ್‌.ಶ್ರೀನಿವಾಸ್‌, ಹಿರಿಯ ಪುರುಷ ಆರೋಗ್ಯ ಸಹಾಯಕ ತುಕಾರಾಮ್‌, ಸಬ್‌ ಇನ್‌ಸ್ಪೆಕ್ಟರ್‌ಗಳಾದ ಟಿ.ವೆಂಕಟೇಶ್‌, ಮಂಜುನಾಥ ಹಾಗೂ ಪುರಸಭೆ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT