ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ| ಎಲ್ಲರಿಗೂ ಅಚ್ಚುಮೆಚ್ಚು ಈ ಹೋರಿ

ಅರ್ಚಕರಹಳ್ಳಿಯ ಈ ಜಾನುವಾರು ತಳಿ ಅಭಿವೃದ್ಧಿಗೆ ಬಳಕೆ; ಬಗೆಬಗೆಯ ರೀತಿಯಲ್ಲಿ ಆರೈಕೆ
Last Updated 3 ಮೇ 2020, 3:21 IST
ಅಕ್ಷರ ಗಾತ್ರ

ರಾಮನಗರ: ನಗರದ ಅರ್ಚಕರಹಳ್ಳಿಯ ಈ ಹೋರಿ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಅದರಲ್ಲೂ ಹಳ್ಳಿಕಾರ್ ತಳಿಯ ಈ ‘ಗಜ’ ಈಗಾಗಲೇ ಸುತ್ತಲಿನ ನೂರಾರು ಹಸುಗಳಿಗೆ ‘ಸಂತಾನ ಭಾಗ್ಯ’ವನ್ನೂ ನೀಡಿದೆ.

ಅವಸನದತ್ತ ಸಾಗುತ್ತಿರುವ ದೇಸಿ ತಳಿ ಜಾನುವಾರುಗಳಲ್ಲಿ ಹಳ್ಳಿಕಾರ್ ಸಹ ಒಂದು. ರಾಮನಗರ ಜಿಲ್ಲೆಯಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು. ಪ್ರಾಚೀನ ಕಾಲದಿಂದಲೂ ಉಳಿದುಬಂದಿದ್ದ ಈ ತಳಿಯ ಜಾನುವಾರುಗಳು ಹೈಬ್ರೀಡ್ ಸಂತಾನ ಶುರುವಾದ ಬಳಿಕ ಮೂಲೆ ಗುಂಪಾಗುತ್ತಿವೆ. ಆದರೆ, ಕಾಲ ಬದಲಾದಂತೆ ಜನರ ಮನಸ್ಥಿತಿ ಕೂಡ ಬದಲಾಗಿದ್ದು, ಇದೀಗ ದೇಸಿ ತಳಿಗೆ ಮತ್ತೆ ಬೇಡಿಕೆ ಕುದುರುತ್ತಿದೆ. ಹೀಗಾಗಿ ಈ ಬಿತ್ತನೆ ಹೋರಿಗೂ ಈಗ ಬೇಡಿಕೆ ಕೇಳಿ ಬಂದಿದೆ. ಮಂಡ್ಯ, ಮಾಗಡಿ, ಚನ್ನಪಟ್ಟಣ ಸೇರಿದಂತೆ ದೂರ ದೂರುಗಳಿಂದಲೂ ಹಸುಗಳನ್ನು ಜನ ಇಲ್ಲಿಗೆ ಕರೆ ತರುತ್ತಿದ್ದಾರೆ. ಕಳೆದ ಎರಡು ವರ್ಷದಿಂದ ಇದನ್ನು ಬಿತ್ತನೆ ಕಾರ್ಯಕ್ಕೆ ಉಪಯೋಗಿಸಲಾಗುತ್ತಿದೆ. ಸುಮಾರು 380-390 ಹಸುಗಳೊಂದಿಗೆ ಈವರೆಗೆ ಇದು ಕೂಡಿಕೆ ಮಾಡಿಕೊಂಡಿದೆ.

ಭಾರಿ ತಯಾರಿ: ಈ ಹೋರಿಯ ನಿತ್ಯ ಆಹಾರದ ಕ್ರಮ ಕೇಳಿದರೆ ನೀವು ದಂಗಾಗುತ್ತೀರಿ ವಿಜಯ್‌ ಮತ್ತು ಕುಟುಂಬದವರು ಇದನ್ನು ಮನೆಯ ಮಗನಿಗಿಂತ ಹೆಚ್ಚು ಮುತುವರ್ಜಿಯಿಂದ ಪೋಷಣೆ ಮಾಡುತ್ತಿದ್ದಾರೆ.

ಬೆಳ್ಳಂ ಬೆಳ್ಳಗ್ಗೆಯೇ ಹೋರಿಗೆ ಸುಮಾರು 5-6 ಕೆ.ಜಿ ವಿವಿಧ ಬಗೆಯ ಆಹಾರದ ಮಿಶ್ರಣ ಸಿದ್ಧವಾಗುತ್ತದೆ. ರವೆ, ಹುರುಳಿ ನುಚ್ಚು, ಮುಸುಕಿನ ಜೋಳದ ನುಚ್ಚು, ರವೆ ಬೂಸ, ಚಕ್ಕೆ ಗೋಧಿ ಎಲ್ಲವನ್ನೂ ಹದವಾಗಿ ಬೆರೆಸಿ ಕೊಡಲಾಗುತ್ತದೆ. ಜೊತೆಗೆ ಆಗಾಗ್ಗೆ ಒಣಹುಲ್ಲು (ರಾಗಿ ಕಡ್ಡಿ) ಮಾತ್ರ ನೀಡುತ್ತಾ ಬಂದಿದ್ದಾರೆ. ಇದಲ್ಲದೆ ಇದರ ಮೈಬಣ್ಣ, ಮೈಕಟ್ಟು ಹೆಚ್ಚಿಸುವ ಸಲುವಾಗಿ ಪ್ರತಿನಿತ್ಯ 2ಕೆ.ಜಿ.ಯಷ್ಟು ಅಕ್ಕಿ ನುಚ್ಚಿನ ಗಂಜಿ ಮಾಡಿ ಬಡಿಸಲಾಗುತ್ತದೆ. ನಿತ್ಯ ಎರಡು ಹೊತ್ತು ತಲಾ ಒಂದು ಲೀಟರ್‌ ಹಾಲನ್ನೂ ಕುಡಿಸುತ್ತಿದ್ದಾರೆ. ಜತೆಗೆ ಆಗಾಗ್ಗೆ ಬೆಣ್ಣೆ, ಕೊಬ್ಬರಿ, ನಾಟಿಕೋಳಿ ಮೊಟ್ಟೆಯನ್ನೂ ನೀಡುತ್ತಾ ಬಂದಿದ್ದಾರೆ. ಇದಿಷ್ಟಕ್ಕೇ ಮುಗಿದಿಲ್ಲ. ಪಪ್ಪಾಯ, ಮೂಲಂಗಿ, ಈರುಳ್ಳಿ, ವೀಳ್ಯದೆಲೆ, ಕೊತ್ತಂಬರಿ ಸೊಪ್ಪು.... ಹೀಗೆ ನಾನಾ ಆಹಾರಗಳ ಮೂಲಕ ಹೋರಿಗೆ ಬೇಕಾದ ಪೋಷಕಾಂಶ ಸಿಗುವಂತೆ ಮಾಡುತ್ತಿದ್ದಾರೆ.

ಈ ಗಜನ ಹುಟ್ಟಿನ ಹಿಂದೆಯೂ ಒಂದು ಕರುಣಾಜನಕ ಕಥೆ ಇದೆ. ನಾಲ್ಕು ವರ್ಷದ ಹಿಂದೆ ವಿಜಯ್‌ ಅವರ ಮನೆಗೆ ಹೊಸತೊಂದು ಹಳ್ಳಿಕಾರ್ ಹೋರಿಯನ್ನು ತರಲಾಗಿತ್ತು. ಅದು ಮನೆ ಹಸುವಿನೊಂದಿಗೆ ಬೆರೆಯಿತು. ಅದಾದ ಒಂದು ವಾರದಲ್ಲೇ ಆ ಹೋರಿ ಕಳುವಾಯಿತು. ಇತ್ತ ಮನೆ ಹಸು ಗರ್ಭ ಧರಿಸಿತು. ಅದೊಂದು ದಿನ ಮುಂಜಾನೆ 3ರ ಸುಮಾರಿಗೆ ಕರು ಹಾಕುವ ವೇಳೆ ಅದರ ಕರುಳೂ ಹೊರಗೆ ಬಂತು. ವೈದ್ಯರು ಇನ್ನಿಲ್ಲದ ಪ್ರಯತ್ನ ಪಟ್ಟರು. ಆದರೆ, ಹಸು ಮಾತ್ರ ಉಳಿಯಲಿಲ್ಲ. ಈ ಗದ್ದಲದೊಳಗೆ ಹುಟ್ಟಿದ ಕರುವಿನ ಬಗ್ಗೆ ಯಾರಿಗೂ ಲಕ್ಷ್ಯ ಇರಲಿಲ್ಲ.

ಹಸುವನ್ನು ಮಣ್ಣು ಮಾಡಿ ಮನೆಗೆ ಬಂದವರಿಗೆ ನೆರೆ ಮನೆಯವರು ಕರುವಿನ ನೆನಪು ಮಾಡಿಕೊಟ್ಟರು. ನೋಡಿದರೆ ಈ ಹೋರಿ ಕರು ನಗುತಿತ್ತು. ಅದಾದ ಒಂದೆರಡು ತಿಂಗಳ ಕಾಲ ಮನೆ ಮಂದಿ ಇದಕ್ಕೆ ಬಾಟಲ್‌ ಹಾಲು ನೀಡಿ ಬೆಳೆಸುವ ಪ್ರಯತ್ನ ಮಾಡಿದರು. ಆದರೆ, ಅದಕ್ಕೆ ಕರು ಒಗ್ಗದಾದಾಗ ಕಡೆಯೊಂದು ಹಸುವನ್ನೇ ಮನೆಗೆ ತಂದರು. ಅದರ ಆರೈಕೆಯಲ್ಲೇ ಹೋರಿ ಬೆಳೆದು ದೊಡ್ಡದಾಗಿದೆ.

ಪ್ರತಿ ವರ್ಷ ಸಂಭ್ರಮ: ಹೋರಿ ಹುಟ್ಟಿದ ದಿನವಾದ ಏಪ್ರಿಲ್ 28ರಂದು ಪ್ರತಿವರ್ಷ ಅದರ ಹುಟ್ಟುಹಬ್ಬವನ್ನು ತಪ್ಪದೇ ಆಚರಿಸುತ್ತಾ ಬರಲಾಗಿದೆ. ಕೇಕ್‌ ಕತ್ತರಿಸಿ ಮನೆಮಂದಿಯೆಲ್ಲ ಸಂಭ್ರಮಿಸಿ ಪಕ್ಕದವರಿಗೂ ಸಿಹಿ ಹಂಚುತ್ತಾರೆ. ಆದರೆ, ಈ ವರ್ಷ ಲಾಕ್‌ಡೌನ್‌ ಕಾರಣಕ್ಕೆ ಕೇಕ್‌ ಕತ್ತರಿಸಲು ಆಗಿಲ್ಲ. ಬದಲಾಗಿ ಗಜನಿಗೆ ಬಣ್ಣಗಳಿಂದ ಸಿಂಗರಿಸಿ ಆರತಿ ಎತ್ತಿ ಸಂಭ್ರಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT