ಶುಕ್ರವಾರ, ಜನವರಿ 24, 2020
28 °C

ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾತನೂರು (ಕನಕಪುರ): ಅಚ್ಚಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ 20 ವರ್ಷಗಳ ನಿರಂತರ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ಅಮರೇಗೌಡ ಪಾಟೀಲ್‌ ಅವರನ್ನು ಹಳೆ ವಿದ್ಯಾರ್ಥಿಗಳು ಸನ್ಮಾನಿಸಿ ಬೀಳ್ಕೊಟ್ಟರು.

ಪಾಟೀಲ್‌ ಅವರು ಮೂಲತಃ ಬಾಗಲಕೋಟೆ ಜಿಲ್ಲೆ, ಹುನಗುಂದ ತಾಲ್ಲೂಕು ಇಳಕಲ್‌ ಗ್ರಾಮದವರು. ಶಿಕ್ಷಕರಾಗಿ 1995ರಲ್ಲಿ ನೇಮಕಗೊಂಡು ಕನಕಪುರದಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿ 1999ರಲ್ಲಿ ಅಚ್ಚಲು ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಯಾಗಿ ಅಲ್ಲಿಯೇ 20 ವರ್ಷ ಸೇವೆ ಸಲ್ಲಿಸಿದರು.

ಅತ್ಯಂತ ಶಿಸ್ತಿನ ಶಿಕ್ಷಕರಾದ ಪಾಟೀಲ್‌ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು, ಅಲ್ಲದೆ ಸುತ್ತಮುತ್ತಲ 20 ಹಳ್ಳಿಗಳಲ್ಲು ಅತ್ಯಂತ ಪ್ರೀತಪಾತ್ರ ಶಿಕ್ಷಕರಾಗಿದ್ದರು. ಶಾಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಪ್ರತಿವರ್ಷ ಶಾಲೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳುತ್ತಿದ್ದರು.

20 ವರ್ಷದಲ್ಲಿ ಕಲಿತ ಎಲ್ಲಾ ವರ್ಷದ ವಿದ್ಯಾರ್ಥಿಗಳು ಇಂದು ಒಟ್ಟುಗೂಡಿ 20 ಗ್ರಾಂ ಚಿನ್ನದ ಸರವನ್ನು ಕಾಣಿಕೆಯಾಗಿ ತಮ್ಮ ಪ್ರೀತಿಪಾತ್ರ ಗುರುಗಳಿಗೆ ನೀಡಿ ತಮ್ಮ ಅಭಿಮಾನ ಮೆರೆದರು.

‘ಹಿರಿಯ ವಿದ್ಯಾರ್ಥಿಗಳು ಮಾತನಾಡಿ ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕನ ಪಾತ್ರ ಅತ್ಯಂತ ಮಹತ್ವವಾದುದು. ಒಬ್ಬ ಶಿಕ್ಷಕ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿ ಮಕ್ಕಳಿಗೆ ಭವಿಷ್ಯ ರೂಪಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಅದೆ ಒಬ್ಬ ಶಿಕ್ಷಕ ತಮ್ಮ ಜವಾಬ್ದಾರಿಯನ್ನು ಮರೆತು ತಪ್ಪು ಮಾಡಿದರೆ ಮಕ್ಕಳು ತಪ್ಪುದಾರಿ ತುಳಿಯುತ್ತಾರೆ ಎಂಬುದಕ್ಕೆ ತಾವು ಮತ್ತು ತಮ್ಮ ಶಿಕ್ಷಕರೇ ನಿದರ್ಶನ’ ಎಂದರು.

ಗ್ರಾಮದ ಪ್ರಮುಖರಾದ ಉಪಕೆರೆದೊಡ್ಡಿ ಕೆ.ಟಿ. ಸುರೇಶ್‌, ಅಚ್ಚಲು ಸ್ವಾಮಿ, ಬೊಮ್ಮನಹಳ್ಳಿ ಕುಮಾರ್‌, ಗೊಲ್ಲರದೊಡ್ಡಿ ಕೆಂಗೇಗೌಡ ಮೊದಲಾದವರು ಮಾತನಾಡಿ, ‘ಸರ್ಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರಿಗೆ ಈ ಮಟ್ಟದಲ್ಲಿ ಬೀಳ್ಕೊಡುಗೆ ಮಾಡುತ್ತಿರುವುದು ಅವರ ಮೇಲಿನ ಅಭಿಮಾನ ತಿಳಿಸುತ್ತದೆ’ ಎಂದರು.

‘ಪಾಟೀಲ್‌ ಅವರು ಈ ಶಾಲೆಯ ಮಕ್ಕಳಲ್ಲಿಯೆ ತಮ್ಮ ಭವಿಷ್ಯವನ್ನು ಕಂಡವರು. ಹೆಚ್ಚು ಸಮಯವನ್ನು ಶಾಲೆಗಾಗಿಯೆ ಮೀಸಲಿಟ್ಟಿದ್ದಾರೆ. ಇಂತಹ ಶಿಕ್ಷಕರು ಸಿಗುವುದು ತುಂಬಾ ಅಪರೂಪ’  ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಯ ಹಳೆಯ ವಿದ್ಯಾರ್ಥಿಗಳು, ಪ್ರಸಕ್ತ ವರ್ಷದ ವಿದ್ಯಾರ್ಥಿಗಳು, ಅಚ್ಚಲು ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು