ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ ಕುಡಿಯಲು ಮುಂದಾದ ರೈತ

ಅಧಿಕಾರಿಗಳಿಂದ ರೇಷ್ಮೆ ಗೂಡು ಜಪ್ತಿ: ನಂತರ ಕಡಿಮೆ ಬೆಲೆಗೆ ಮಾರಾಟ
Last Updated 11 ಜೂನ್ 2019, 13:11 IST
ಅಕ್ಷರ ಗಾತ್ರ

ರಾಮನಗರ: ಕಡಿಮೆ ದರಕ್ಕೆ ಗೂಡು ಹರಾಜಾಗಿದ್ದಕ್ಕೆ ಬೇಸರಗೊಂಡು ರೈತನೊಬ್ಬ ವಿಷದ ಬಾಟಲಿ ಹಿಡಿದು ಪ್ರತಿಭಟಿಸಿದ ಘಟನೆ ಇಲ್ಲಿನ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆಯಿತು.

ಮಂಡ್ಯ ತಾಲ್ಲೂಕಿನ ಬಿ ಯರಹಳ್ಳಿ ಗ್ರಾಮದ ಯೋಗೇಶ್‌ ವಿಷ ಕುಡಿಯಲು ಮುಂದಾದ ರೈತ. ಇವರು ಸೋಮವಾರ ಮಾರುಕಟ್ಟೆಗೆ ಗೂಡು ತಂದಿದ್ದರು. ಪ್ರತಿ ಕೆ.ಜಿ.ಗೆ ₨245ರಂತೆ ಗೂಡು ಹರಾಜಾಗಿತ್ತು. ಆದರೆ ಈತ ರೈತ ಅಲ್ಲ ದಲ್ಲಾಳಿ ಎನ್ನುವ ಅನುಮಾನದಿಂದ ಮಾರುಕಟ್ಟೆ ಅಧಿಕಾರಿಗಳು ಗೂಡನ್ನು ಸೀಜ್‌ ಮಾಡಿದ್ದರು. ಪಾಸ್‌ ಬುಕ್ ತೋರಿಸುವಂತೆ ಒತ್ತಾಯಿಸಿದ್ದರು. ಆದರೆ ಆ ಸಂದರ್ಭ ಯೋಗೇಶ್‌ ಬಳಿ ಪಾಸ್‌ ಪುಸ್ತಕ ಇರಲಿಲ್ಲ.

ಮಂಗಳವಾರ ಬೆಳಗ್ಗೆ ಯೋಗೇಶ್‌ ಪಾಸ್‌ ಪುಸ್ತಕ ಹಾಜರುಪಡಿಸಿದ್ದು, ಮತ್ತೆ ಹರಾಜಿನಲ್ಲಿ ಗೂಡು ಮಾರಾಟ ಮಾಡಿದರು. ಆಗಲೇ ಒಂದು ದಿನವಾದ್ದರಿಂದ ಗೂಡು ಕೊಂಚ ಹಾಳಾಗಿದ್ದು, ಕಡಿಮೆ ಬೆಲೆಗೆ ಹರಾಜಾಯಿತು. ಇದರಿಂದ ಮನನೊಂದ ಅವರು ತನಗೆ ಆಗಿರುವ ನಷ್ಟ ತುಂಬಿಕೊಡುವಂತೆ ಮಾರುಕಟ್ಟೆ ಅಧಿಕಾರಿಗಳನ್ನು ಒತ್ತಾಯಿಸಿದರು. ಆದರೆ ತಮ್ಮ ಕರ್ತವ್ಯ ನಿರ್ವಹಿಸಿದ್ದು, ಯಾವ ಕಾರಣಕ್ಕೂ ನಷ್ಟ ಭರಿಸಲು ಆಗದು ಎಂದು ಮಾರುಕಟ್ಟೆ ಅಧಿಕಾರಿಗಳು ಸಮಜಾಯಿಷಿ ನೀಡಿದರು.

ಈ ವಿಚಾರದಲ್ಲಿ ರೈತರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಮಾರುಕಟ್ಟೆ ಅವ್ಯವಸ್ಥೆ ಬಗ್ಗೆ ದೂರಿದ ರೈತರು, ಕೆಲ ಅಧಿಕಾರಿಗಳು ದಲ್ಲಾಳಿಗಳ ಪರವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಮಾರುಕಟ್ಟೆ ವ್ಯವಸ್ಥೆ ಸುಧಾರಣೆ ಮಾಡುವಂತೆ ಆಗ್ರಹಿಸಿದರು. ಕಡೆಗೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಯಿತು.

**
ಕೈಕೊಟ್ಟ ವೈ–ಫೈ: ಹರಾಜಿಗೆ ಅಡ್ಡಿ

ಮಾರುಕಟ್ಟೆಯಲ್ಲಿನ ಅಂತರ್ಜಾಲ ವೈ–ಫೈ ವ್ಯವಸ್ಥೆ ಕೈಕೊಟ್ಟ ಕಾರಣದಿಂದಾಗಿ ಮಂಗಳವಾರ ಬೆಳಿಗ್ಗೆ ಗೂಡು ಹರಾಜು ಪ್ರಕ್ರಿಯೆಗೆ ಅಡ್ಡಿಯಾಯಿತು.

ಬೆಳಿಗ್ಗೆ 11ರ ವೇಳೆಗೆ ಹರಾಜು ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭ ವೈ–ಫೈ ಸ್ಥಗಿತಗೊಂಡಿತು. ಇದರಿಂದಾಗಿ ಇ–ಹರಾಜು ಪೂರ್ಣವಾಗಲಿಲ್ಲ. ಸುಮಾರು ಅರ್ಧ ಗಂಟೆಯ ಬಳಿಕ ವ್ಯವಸ್ಥೆ ಸರಿಪಡಿಸಿ ಮತ್ತೆ ಹರಾಜಿಗೆ ಚಾಲನೆ ನೀಡಲಾಯಿತು.

**
ಅಧಿಕಾರಿಗಳು ಗೂಡು ಸೀಜ್‌ ಮಾಡಿದ್ದು, ಒಂದು ದಿನ ಬಿಟ್ಟು ಹರಾಜಿಗೆ ಅವಕಾಶ ನೀಡಿದರು. ಇದರಿಂದ ಗೂಡು ಹಾಳಾಗಿದ್ದು, ಅದರ ನಷ್ಟ ಅವರೇ ಭರಿಸಬೇಕು
ಯೋಗೇಶ್‌,ರೈತ

**
ದಲ್ಲಾಳಿ ಎಂದು ಅನುಮಾನ ಬಂದ ಕಾರಣ ಕ್ರಮ ಕೈಗೊಂಡಿದ್ದೆವು. ಅವರು ಪಾಸ್‌ ಪುಸ್ತಕ ತೋರಿಸಿದ ಬಳಿಕ ಮಾರಾಟಕ್ಕೆ ಅವಕಾಶ ನೀಡಲಾಗಿದೆ
ಮುನ್ಶಿಬಸಯ್ಯ, ಉಪನಿರ್ದೇಶಕ, ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT