ಗುರುವಾರ , ನವೆಂಬರ್ 14, 2019
19 °C

'ರೈತರಿಂದ ರೈತರಿಗೆ ತರಬೇತಿ ಕಾರ್ಯಕ್ರಮ'ಕ್ಕೆ ಚಾಲನೆ

Published:
Updated:
Prajavani

ರಾಮನಗರ: ರೇಷ್ಮೆ ಬೆಳೆಗಾರರ ಸಮಗ್ರ ಅಭಿವೃದ್ಧಿಗಾಗಿ ರೇಷ್ಮೆ ಇಲಾಖೆ, ಕೇಂದ್ರ ರೇಷ್ಮೆ ಮಂಡಳಿ ಹಾಗೂ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರಗಳು ಸಂಯುಕ್ತವಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿವೆ. ಇವುಗಳನ್ನು ರೇಷ್ಮೆ ಕೃಷಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಸುಬ್ರಹ್ಮಣ್ಯ ಹೇಳಿದರು.

ಇಲ್ಲಿನ ತುಂಬೇನಹಳ್ಳಿ ಗ್ರಾಮದಲ್ಲಿ ರೇಷ್ಮೆ ಇಲಾಖೆ ಹಾಗೂ ಕೇಂದ್ರ ರೇಷ್ಮೆ ಮಂಡಳಿ ವತಿಯಿಂದ ಬುಧವಾರ ನಡೆದ ಬನ್ನಿಕುಪ್ಪೆ ಕ್ಲಸ್ಟರ್ ಮಟ್ಟದ 'ರೈತರಿಂದ ರೈತರಿಗೆ ತರಬೇತಿ ಕಾರ್ಯಕ್ರಮ' ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ರೇಷ್ಮೆ ಬೆಳೆಗಾರರು ಯಾವುದೇ ಸಂದರ್ಭದಲ್ಲಿ ಬೇಕಾದರೂ ನಮ್ಮ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ಖುದ್ದಾಗಿ ಭೇಟಿ ಮಾಡಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿ ರೇಷ್ಮೆ ಕೃಷಿಗೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸಿ ತಮ್ಮಲ್ಲಿರುವ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು’ ಎಂದರು.

ಬನ್ನಿಕುಪ್ಪೆ ಕ್ಲಸ್ಟರ್ ಮಟ್ಟದ ರೇಷ್ಮೆ ವಲಯಾಧಿಕಾರಿ ತಿಮ್ಮೇಗೌಡ ಮಾತನಾಡಿ, ‘ನಮ್ಮ ವಲಯದಲ್ಲಿ ರೇಷ್ಮೆ ಬೆಳೆಯ ಸಮಗ್ರ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಸ್ಥಳೀಯ ರೇಷ್ಮೆ ಬೆಳೆಗಾರರನ್ನು ಒಗ್ಗೂಡಿಸುವ ಮೂಲಕ ಸಮುದಾಯದ ಸಹಭಾಗಿತ್ವದಲ್ಲಿ ಇಲಾಖೆಯ ಎಲ್ಲ ರೈತಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಒತ್ತು ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಕೃಷಿಕ ತುಂಬೇನಹಳ್ಳಿ ಶಿವಕುಮಾರ್ ಮಾತನಾಡಿ, ‘ಒಂದೂವರೆ ಎಕರೆ ಪ್ರದೇಶದಲ್ಲಿ ಏಕ ಕಡ್ಡಿಯ ಜಿ-4 ರೇಷ್ಮೆ ಕಡ್ಡಿಯ ಬೆಳೆಯನ್ನು ಬೆಳೆದಿದ್ದೇನೆ. ಜಿ-4 ರೇಷ್ಮೆ ಬೆಳೆಯಲು ಮುಂದೆ ಬರುವ ರೈತರಿಗೆ ಈ ಕಡ್ಡಿಯನ್ನು ಉಚಿತವಾಗಿ ನೀಡುತ್ತೇನೆ’ ಎಂದು ತಿಳಿಸಿದರು.

ರೇಷ್ಮೆ ಉಪ ನಿರ್ದೇಶಕ ಮಹೇಂದ್ರಕುಮಾರ್, ಕೇಂದ್ರ ರೇಷ್ಮೆ ಮಂಡಳಿಯ ಹಿರಿಯ ವಿಜ್ಞಾನಿ ಡಾ.ಶಂಕರ್, ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರದ ಡಾ.ಸರಸ್ವತಿ, ಹಿರಿಯ ತಾಂತ್ರಿಕ ಅಧಿಕಾರಿ ಭೀಮಸೇನ ರಾವ್, ಹುಣಸನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ.ಯಕ್ಷರಾಜ್, ರೈತ ಮುಖಂಡ ಮೆಳೆಹಳ್ಳಿ ಶಿವಕುಮಾರ್ ಇದ್ದರು.

ಪ್ರತಿಕ್ರಿಯಿಸಿ (+)