ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮಕ್ಕಳು ಪೋಷಕರನ್ನು ಮರೆಯದಿರಿ

ಅಚ್ಚಲು ಸರ್ಕಾರಿ ಪ್ರೌಢ ಶಾಲೆಯಲ್ಲಿ 'ಸರ್ಕಾರಿ ಶಾಲೆ ಕಡೆಗೆ ರೈತರ ನಡಿಗೆ'
Last Updated 21 ಜುಲೈ 2019, 13:35 IST
ಅಕ್ಷರ ಗಾತ್ರ

ಸಾತನೂರು (ಕನಕಪುರ): ರೈತರಾದವರೂ ಇಂದು ತಮ್ಮ ಮಕ್ಕಳು ರೈತರಾಗುವುದು ಬೇಡ, ಯಾವುದಾದರೂ ಉದ್ಯೋಗಕ್ಕೆ ಹೋಗಲಿ ಎನ್ನುವ ಪರಿಸ್ಥಿತಿ ಎದುರಾಗಿದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚೀಲೂರು ಮುನಿರಾಜು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಸಾತನೂರು ಹೋಬಳಿ ಅಚ್ಚಲು ಸರ್ಕಾರಿ ಪ್ರೌಢ ಶಾಲೆಯಲ್ಲಿ ರೈತ ಸಂಘ ಏರ್ಪಡಿಸಿದ್ದ 'ಸರ್ಕಾರಿ ಶಾಲೆ ಕಡೆಗೆ ರೈತರ ನಡಿಗೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

’ಮಕ್ಕಳು ಯಾವುದೇ ಕೆಲಸ ಮಾಡದೆ ಸುಖವಾಗಿರಬೇಕು. ನಮಗೆ ಬಂದ ಪರಿಸ್ಥಿತಿ ಮಕ್ಕಳಿಗೆ ಬರಬಾರದೆಂಬ ಕಾರಣದಿಂದ ತಂದೆ ತಾಯಂದಿರು ಕೂಲಿ ಮಾಡಿಯಾದರೂ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಮಕ್ಕಳ ಭವಿಷ್ಯವನ್ನು ಉತ್ತಮ ಪಡಿಸಲು ಜೀವ ಸವೆಸುತ್ತಾರೆ’ ಎಂದು ಹೇಳಿದರು.

’ಆದರೆ, ಮಕ್ಕಳು ಓದಿ ದೊಡ್ಡವರಾಗಿ ಉನ್ನತ ಹುದ್ದೆ ಅಲಂಕರಿಸಿದ ಮೇಲೆ ತಾವು ರೈತರ ಮಕ್ಕಳೆಂಬುದನ್ನೇ ಮರೆಯುತ್ತಾರೆ. ಜೀವ ಸವೆಸಿದ ತಂದೆ ತಾಯಂದಿರನ್ನು ನಿರ್ಲಕ್ಷ್ಯದಿಂದ ಕಾಣುತ್ತಾರೆ. ಇಂತಹ ಮನಸ್ಥಿತಿ ಬದಲಾಗಬೇಕು’ ಎಂದು ಆಶಿಸಿದರು.

ಧಮ್ಮದೀಪ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ನೀಲಿ ರಮೇಶ್‌ ಮಾತನಾಡಿ, ‘ವಿದ್ಯಾರ್ಥಿಗಳು ಓದಿನ ಜತೆಗೆ ಜೀವನದ ಸತ್ಯ ಸಂಗತಿಗಳನ್ನು ಅರಿಯಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಜೀವನಕ್ಕೆ ಅಡಿಪಾಯ ಹಾಕಿಕೊಳ್ಳಬೇಕು’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು. ವಿದ್ಯಾವಂತರಾಗಿರುವುದರಿಂದ ಇಂದಿನ ಸಾಮಾಜಿಕ ಪರಿಸ್ಥಿತಿ ಚೆನ್ನಾಗಿ ಅರ್ಥವಾಗುತ್ತವೆ. ನೀವು ನಿಮ್ಮ ಮನೆಗಳಲ್ಲಿ ತಂದೆ ತಾಯಿಯರಿಗೆ ಪರಿಸರದ ಬಗ್ಗೆ ತಿಳಿಸಿಕೊಡಬೇಕು, ಮರಗಿಡಗಳನ್ನು ಬೆಳೆಸಬೇಕು’ ಎಂದು ಎಂದು ಸಲಹೆ ನೀಡಿದರು.

2018-19ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಅಚ್ಚಲು ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ರಕ್ಷಿತರನ್ನು ರೈತ ಸಂಘದಿಂದ ಅಭಿನಂದಿಸಲಾಯಿತು.

ಶಾಲೆಯ ಮುಖ್ಯ ಶಿಕ್ಷಕ ಪರಮೇಶ್, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್‌, ರೈತ ಸಂಘದ ರವಿಕುಮಾರ್‌, ಸಂತೋಷ್‌, ಅಭಿಷೇಕ್‌, ಸಿದ್ದರಾಮೇಗೌಡ, ಮರಿಯಪ್ಪ, ಶಿವರಾಮಣ್ಣ, ನಾಗೇಂದ್ರ, ಲೋಕೇಶ್‌, ಲಕ್ಷ್ಮಿ, ಸರಸ್ವತಿ, ಚಿಕ್ಕತಾಯಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT