ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ಕಾಡಾನೆ ದಾಳಿಗೆ ರೈತರ ಬೆಳೆ ನಾಶ

ಬೆಳೆ ಪರಿಹಾರಕ್ಕೆ ಅರಳಾಳುಸಂದ್ರ ಗ್ರಾಮಸ್ಥರ ಒತ್ತಾಯ
Last Updated 12 ಅಕ್ಟೋಬರ್ 2022, 4:15 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಸೋಮವಾರ ರಾತ್ರಿ ಕಾಡಾನೆಗಳು ನಡೆಸಿದ ದಾಳಿಯಿಂದಾಗಿ ರೈತರ ಸೀಮೆಹುಲ್ಲು, ತೆಂಗಿನಮರ ಹಾಗೂ ಮಾವಿನ ಮರಗಳು ನಾಶವಾಗಿವೆ.

ಗ್ರಾಮದ ಶಿವಲಿಂಗಯ್ಯ ಎಂಬುವರಿಗೆ ಸೇರಿದ ಕೃಷಿ ಜಮೀನಿಗೆ ಕಾಡಾನೆಗಳ ಹಿಂಡು ದಾಳಿ ಮಾಡಿದ್ದು, 20ಕ್ಕೂ ಹೆಚ್ಚು ಮಾವಿನ ಮರಗಳು ನಾಶವಾಗಿವೆ. ಜೊತೆಗೆ ಅಕ್ಕಪಕ್ಕ ಜಮೀನಿನಲ್ಲಿ ಬೆಳೆದಿದ್ದ ತೆಂಗಿನಮರಗಳು ನೆಲಕ್ಕುರುಳಿವೆ. ಪಕ್ಕದ ಜಮೀನಿನ ಸೀಮೆಹುಲ್ಲು ಬೆಳೆಯನ್ನು ತಿಂದು, ತುಳಿದು ಹಾಕಿ ಚೆಲ್ಲಾಪಿಲ್ಲಿ ಮಾಡಿವೆ.

ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಬಂದಿರುವ ಈ ಆನೆಗಳು ಈ ಭಾಗದ ರೈತರ ಕೃಷಿ ಜಮೀನಿನ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿವೆ. ಇದರಿಂದ ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಗಳು ಆನೆ ದಾಳಿಗೆ ತುತ್ತಾಗುತ್ತಿವೆ ಎಂದು ಈ ಭಾಗದ ರೈತರು ಅಳಲು ತೋಡಿಕೊಂಡರು.

ಕಾಡಾನೆ ದಾಳಿ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ಈ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಎನ್.ಆರ್. ಕಾಲೊನಿ ಬಳಿ ಕಾಡಾನೆಗಳ ಹಿಂಡು: ತಾಲ್ಲೂಕಿನ ಎನ್.ಆರ್.ಕಾಲೊನಿ ಗ್ರಾಮದ ಬಳಿ ಕಾಡಾನೆಗಳ ಹಿಂಡು ಪತ್ತೆಯಾಗಿದೆ. ಸ್ಥಳೀಯರು 7 ಕಾಡಾನೆಗಳು ಒಟ್ಟೊಟ್ಟಿಗೆ ಸಾಗುತ್ತಿರುವ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಗ್ರಾಮದ ಹೊರವಲಯದಲ್ಲಿ ಕಾಡಾನೆಗಳು ಗುಂಪು ಗುಂಪಾಗಿ ಸಂಚರಿಸುತ್ತಿರುವಂತಿದೆ. ಆನೆಗಳು ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಚಿಕ್ಕಮಣ್ಣು ಗುಡ್ಡೆ ಅರಣ್ಯ ಪ್ರದೇಶಕ್ಕೆ ಹೋಗುತ್ತಿರುವ ಫೋಟೊ ಇದಾಗಿದ್ದು, ಗ್ರಾಮದ ಸಮೀಪವೇ ಆನೆಗಳ ಹಿಂಡು ಕಾಣಿಸಿಕೊಂಡಿರುವುದು ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT