ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹಿತ ಕಾಯಲು ಸರ್ಕಾರಕ್ಕೆ ಆಗ್ರಹ

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಕೆರೆಗಳಿಗೆ ನೀರು ತುಂಬಿಸಲು ಒತ್ತಾಯ
Last Updated 15 ಜೂನ್ 2019, 12:33 IST
ಅಕ್ಷರ ಗಾತ್ರ

ರಾಮನಗರ: ‘ಈಗಲ್ ಟನ್ ಪ್ರಕರಣ ದಶಕಗಳಿಂದ ನರಳುತ್ತಿದೆ. ಜನಪ್ರತಿನಿಧಿಗಳೇ ಈಗಲ್‌ಟನ್ ರೆಸಾರ್ಟಿಗೆ ರಕ್ಷಕರಾಗಿದ್ದಾರೆ’ ಎಂದು ಹಿರಿಯ ರೈತ ಮುಖಂಡ ಸಿ. ಪುಟ್ಟಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಎಪಿಎಂಸಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಾವಿರಾರು ಕೋಟಿ ರುಪಾಯಿ ಬೆಲೆಬಾಳುವ ಸಾರ್ವಜನಿಕ ಭೂಮಿ ಮತ್ತು ಅದರ ಕಿಮ್ಮತ್ತನ್ನು ರಾಜಕೀಯ ಪಕ್ಷಗಳ ಅಡ್ಡೆ ಮತ್ತು ಆಡೊಂಬಲದ ಕಾರಣಕ್ಕೆ ಬಲಿಯಾಗಬಾರದು. ಈ ಬಗ್ಗೆ ಸಚಿವ ಸಂಪುಟದಲ್ಲಿ ಗಂಭೀರವಾಗಿ ಚರ್ಚಿಸಿ ಬಡ್ಡಿ ಸಮೇತ ಹಣ ವಸೂಲಿ ಮಾಡಬೇಕು ಎಂದು ತಿಳಿಸಿದರು.

ಕ್ರಮ ಕೈಗೊಳ್ಳಿ: ವನ್ಯಜೀವಿಗಳ ದಾಳಿಯಿಂದ ನಿರಂತರವಾಗಿ ಬೆಳೆ ಹಾನಿಯಾಗುತ್ತಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಫಸಲು ಭರಿತ ವೃಕ್ಷಗಳ ಹಾನಿಯನ್ನು ಶಾಶ್ವತವಾಗಿ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ಮುಂತಾದ ನಷ್ಟವನ್ನು ವೈಜ್ಞಾನಿಕ ಮಾನದಂಡದ ಆಧಾರದ ಮೇಲೆ ಲೆಕ್ಕಹಾಕಿ ಗರಿಷ್ಠ ತಿಂಗಳ ಒಳಗೆ ರೈತರಿಗೆ ತಲುಪಿಸಲು ತ್ವರಿತ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ನೀರಾವರಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವಲ್ಲಿ ನಿಗದಿತ ಮಾನದಂಡ ಪಾರದರ್ಶಕವಾಗಿರಬೇಕು. ಕೆರೆಯ ನೀರಿನ ಶೇಖರಣಾ ಪ್ರಮಾಣಕ್ಕೆ ಅನುಗುಣವಾಗಿ ನೀರು ತುಂಬಿಸುವ ಸೂತ್ರ ಜಾರಿಗೊಳಿಸಬೇಕು ಎಂದು ತಿಳಿಸಿದರು.

‘ಮುಖ್ಯಮಂತ್ರಿಗಳ ಸ್ವ ಕ್ಷೇತ್ರದಲ್ಲಿಯೇ ಕೆಲವು ಕೆರೆಗಳಿಗೆ ಯೋಜನೆ ಚಾಲ್ತಿಗೆ ಬಂದ ತರುವಾಯ 3– 4 ಬಾರಿ ನೀರು ತುಂಬಿಸಲಾಗಿದೆ. ಇದೇ ಯೋಜನೆ ವ್ಯಾಪ್ತಿಯ ಹಲವಾರು ಕೆರೆಗಳಿಗೆ ಒಮ್ಮೆಯೂ ನೀರು ತುಂಬಿಸಿಲ್ಲ. ಪೈಪ್‌ಲೈನ್ ಇದ್ದರೂ ನೀರು ಬಿಡುತ್ತಿಲ್ಲ. ಅದರಲ್ಲೂ ತಾಲ್ಲೂಕಿನ ಗಡಿಭಾಗದ ಕೆರೆಗಳು ಇಂತಹ ಉದ್ದೇಶಿತ ವಂಚನೆಗಳಿಗೆ ಒಳಗಾಗಿವೆ’ ಎಂದು ಆರೋಪಿಸಿದರು.

‘ಎರಡೂವರೆ ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಿ 2 ಏತಬಿಂದು ನೀರಾವರಿ ಯೋಜನೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಆರು ಬಾರಿ ಟೆಂಡರ್ ಮುಂದೂಡಿದೆ. 2012–-13ರಿಂದ ಇಲ್ಲಿವರೆಗೂ ಈ ಯೋಜನೆ ನೆನೆಗುದಿಗೆ ಬಿದ್ದಿದೆ. ಆದ್ದರಿಂದ ಹೊಸ ಎಸ್ ಆರ್ ದರ ನಿಗದಿ ಪಡಿಸಿ ಟೆಂಡರ್ ಕರೆಯಬೇಕು’ ಎಂದು ತಿಳಿಸಿದರು.

‘ರಸ್ತೆ ಮತ್ತು ಕಟ್ಟಡಗಳ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಲಾಗುತ್ತಿಲ್ಲ. ಗುಣ ನಿಯಂತ್ರಣ ಇಲಾಖೆ ಅಧಿಕಾರಿಗಳು ಹಾಜರಿರದೇ ಕಾಟಾಚಾರದ ಹಾಗೂ ಕಳಪೆ ಕಾಮಗಾರಿಗಳು ವ್ಯಾಪಕವಾಗಿ ನಡೆಯುತ್ತಿದೆ. ಅನುಮೋದಿತ ಅಂದಾಜುಪಟ್ಟಿ ಹಾಗೂ ಕಾರ್ಯಕ್ಷಮತೆ ಒಂದಕ್ಕೊಂದು ಪೂರಕವಾಗಿದ್ದು ಗುಣಮಟ್ಟವನ್ನು ದೃಢಪಡಿಸಬೇಕು’ ಎಂದು ತಿಳಿಸಿದರು.

ಇತರ ಬೇಡಿಕೆಗಳು: ಹವಾಮಾನ ಆಧಾರಿತ ಬೆಳೆ ಪದ್ಧತಿ ಅನುಷ್ಠಾನಕ್ಕೆ ತರುವುದು. ರೇಷ್ಮೆ ಇಳುವರಿ ಆಧಾರಿತ ವೈಜ್ಞಾನಿಕ ಮಾನದಂಡ ಸೂತ್ರವನ್ನು (ರೆಂಡಿಟ್ಟಾ ಮಾದರಿ) ಅಳವಡಿಸಿ ಗೂಡು ಖರೀದಿಸಲು ಮತ್ತು ರೇಷ್ಮೆ ಮಾಫಿಯಾ ನಿಗ್ರಹ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕನಿಷ್ಠ ಖರೀದಿ ಬೆಲೆಗಿಂತ ಕಡಿಮೆ ದರದಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಯಾಗದಂತೆ ಸೂಕ್ತ ವಿದಿ ವಿಧಾನಗಳನ್ನು ರೂಪಿಬೇಕು. ಎಲ್ಲ ಬೆಳೆಗಳಿಗೆ ಶಾಸಕಬದ್ಧವಾಗಿ ಬೆಂಬಲ ಬೆಲೆ ಘೋಷಿಸಬೇಕು ಎಂದರು.

ರಾಜ್ಯಾದ್ಯಂತ ತಾಲ್ಲೂಕು ಮಟ್ಟದ ಭೂಮಂಜೂರಾತಿ ಸಮಿತಿಗಳನ್ನು ರಚನೆ ಮಾಡಬೇಕು. ನಮೂನೆ - 75ರ ಭೂ ಹೀನ ಹಾಗೂ ಸಣ್ಣ ಅತಿಸಣ್ಣ ರೈತರ ಹಾಗೂ ಬಹಳ ಹಿಂದಿನಿಂದ ನೆನೆಗುದಿಗೆ ಬಿದ್ದಿರುವ ಅಕ್ರಮ ಸಕ್ರಮ ನಮೂನೆ 50 ಮತ್ತು 53ರ ಅಕ್ರಮ ಸಾಗುವಳಿ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಪಡಿಸಿ ಹಕ್ಕುಪತ್ರ ವಿತರಿಸಬೇಕು. ಮಾಜಿ ಸೈನಿಕರಿಗೆ ಕೃಷಿ ಜಮೀನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡರಾದ ಎಂ. ಪುಟ್ಟಸ್ವಾಮಿ, ತುಂಬೇನಹಳ್ಳಿ ನಂಜಪ್ಪ, ಗೊ.ರಾ. ಶ್ರೀನಿವಾಸ್, ಹೊಂಬಾಳೇಗೌಡ ಇದ್ದರು.

**
ಜಿಲ್ಲೆಯಲ್ಲಿ ಮಾವು, ಎಳನೀರು, ನೀರಾ ಸಂಸ್ಕರಣ ಘಟಕಗಳ ಸ್ಥಾಪನೆಯು ಕೇವಲ ಬಜೆಟ್ ಭಾಷಣಕ್ಕೆ ಸೀಮಿತವಾಗಿದ್ದು, ಮುಖ್ಯಮಂತ್ರಿಗಳು ಅನುಷ್ಠಾನಕ್ಕೆ ತರಬೇಕು
- ಸಿ. ಪುಟ್ಟಸ್ವಾಮಿ, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT