ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಗಿ ಖರೀದಿ: ತಾಂತ್ರಿಕ ದೋಷ ಸರಿಪಡಿಸಿ’

ರಾಜ್ಯ ಸರ್ಕಾರಕ್ಕೆ ರೈತ ಸಂಘದ ಒತ್ತಾಯ
Last Updated 10 ಜನವರಿ 2020, 13:14 IST
ಅಕ್ಷರ ಗಾತ್ರ

ರಾಮನಗರ: ಬೆಂಬಲ ಬೆಲೆ ಅಡಿ ರಾಗಿ ಖರೀದಿಗೆ ರಾಜ್ಯ ಸರ್ಕಾರ ತೆರೆದಿರುವ ಕೇಂದ್ರಗಳಲ್ಲಿ ರೈತರ ನೋಂದಣಿಗೆ ತಾಂತ್ರಿಕ ತೊಂದರೆಗಳು ಎದುರಾಗಿದ್ದು, ಸರ್ಕಾರ ಕೂಡಲೇ ಅದನ್ನು ಸರಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಲಕ್ಷ್ಮಣಸ್ವಾಮಿ ಒತ್ತಾಯಿಸಿದರು.

‘ನೋಂದಣಿಗಾಗಿ ಪ್ರೂಟ್‌ ಎಂಬ ತಂತ್ರಾಂಶ ರೂಪಿಸಲಾಗಿದೆ. ಆದರೆ ಇದರಲ್ಲಿ ರೈತರ ಬ್ಯಾಂಕ್‌ ಖಾತೆಗಳ ವಿವರ ಇಲ್ಲ. ರೈತರ ಬೆಳೆ ಬಗ್ಗೆ ದಾಖಲೆಗಳೂ ಇಲ್ಲ. ರೈತರ ಎರಡು ಮೂರು ಸರ್ವೆ ಸಂಖ್ಯೆಗಳು ಇದ್ದು, ಯಾವ ಸರ್ವೆ ಸಂಖ್ಯೆ ದಾಖಲಿಸಬೇಕು ಎಂಬ ಗೊಂದಲ ಇದೆ. ಪಹಣಿಯಲ್ಲಿ ರಾಗಿ ಬೆಳೆ ಎಂದು ನಮೂದಾಗಿದ್ದರೂ ತಂತ್ರಾಂಶದಲ್ಲಿ ತೋರಿಸುತ್ತಿಲ್ಲ. ರೈತರ ಮೊಬೈಲ್ ಸಂಖ್ಯೆ ಬದಲಾವಣೆಗೂ ಅವಕಾಶ ಇಲ್ಲ. ಈ ಎಲ್ಲ ತಾಂತ್ರಿಕ ತೊಂದರೆಗಳಿಂದ ಹೆಚ್ಚಿನ ರೈತರು ನೋಂದಣಿ ಮಾಡಲು ಆಗಿಲ್ಲ. ಹೀಗಾಗಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಬೇಕು. ಅಥವಾ ಹಿಂದಿನ ವರ್ಷದ ರೀತಿಯಲ್ಲಿಯೇ ಉತ್ಪನ್ನ ಖರೀದಿಗೆ ಸರ್ಕಾರ ಆದೇಶ ನೀಡಬೇಕು’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ಅಡಿ ಎಲ್ಲ ರೈತರಿಗೆ ಹಣ ಸಂದಾಯ ಆಗಿರುವುದಾಗಿ ಪ್ರಧಾನಿ ಹೇಳಿದ್ದಾರೆ. ಆದರೆ ಜಿಲ್ಲೆಯ ಶೇ 40ರಷ್ಟು ರೈತರ ಖಾತೆಗಳಿಗೆ ಇನ್ನೂ ಹಣ ಬಂದಿಲ್ಲ. ಇಲ್ಲಿಯೂ ತಾಂತ್ರಿಕ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ಎಡವಿದ್ದಾರೆ. ಈ ದೋಷ ಸರಿಪಡಿಸಿ ಎಲ್ಲ ರೈತರ ಖಾತೆಗಳಿಗೆ ಹಣ ಹಾಕಬೇಕು ಎಂದು ಒತ್ತಾಯಿಸಿದರು.

‘ಹಿಂದಿನ ಸಮ್ಮಿಶ್ರ ಸರ್ಕಾರ ಸಾಲ ಮನ್ನಾ ಘೋಷಣೆ ಮಾಡಿತ್ತು. ಹೊಸ ಸರ್ಕಾರ ಬಂದ ನಂತರ ಬ್ಯಾಂಕ್ ಸಿಬ್ಬಂದಿ ಮತ್ತೆ ರೈತರ ಬಳಿ ಸಾಲ ವಸೂಲಿಗೆ ಇಳಿದಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಬ್ಯಾಂಕ್‌ ಅಧಿಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡಬೇಕು. ಬ್ಯಾಂಕಿನವರು ಬಲವಂತವಾಗಿ ಸಾಲ ವಸೂಲಿಗೆ ಮುಂದಾದರೆ ಅವರನ್ನು ಕಂಬಕ್ಕೆ ಕಟ್ಟಿ ಹೊಡೆಯುತ್ತೇವೆ’ ಎಂದು ಎಚ್ಚರಿಸಿದರು.

ರೈತರಿಗೆ ಪೌತಿ ಖಾತೆ, ಪಹಣಿ ಮತ್ತಿತರ ದಾಖಲೆ ತಿದ್ದುಪಡಿ ಮಾಡಿಸಲು ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ತಾಲ್ಲೂಕು ಕಚೇರಿಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಈ ಬಗ್ಗೆ ಎಲ್ಲ ಅಧಿಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡಬೇಕು. ಹಳ್ಳಿಗಳಲ್ಲಿ ಮದ್ಯ ಮಾರಾಟ ಮಿತಿ ಮೀರಿದ್ದು, ಅದನ್ನು ನಿಯಂತ್ರಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ಬೀಟ್‌ ಹೆಚ್ಚಿಸಬೇಕು. ಜಿಲ್ಲೆಯಲ್ಲಿ ಆನೆ ದಾಳಿ ಪ್ರಕರಣಗಳು ಹೆಚ್ಚುತ್ತಿದ್ದು, ವನ್ಯಜೀವಿ ಹಾವಳಿ ತಡೆಗೆ ಕ್ರಮ ಜರುಗಿಸಬೇಕು. ಶೀಘ್ರ ಮಾವು ಸಂಸ್ಕರಣಾ ಕೇಂದ್ರ ನಿರ್ಮಾಣಕ್ಕೆ ಚಾಲನೆ ನೀಡಬೇಕು. ಸಮಸ್ಯೆಗಳ ಚರ್ಚೆಗೆ ಜಿಲ್ಲಾಧಿಕಾರಿ ರೈತರ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಸಿ. ಚಲುವಯ್ಯ, ಕಾರ್ಯದರ್ಶಿ ಬೈರೇಗೌಡ, ಮುಖಂಡರಾದ ರಾಜೇಗೌಡ, ಶ್ರೀನಿವಾಸ, ನಾಗಮ್ಮ, ಚಂದ್ರಶೇಖರ್, ರಮೇಶ್, ಅನಂತರಾಮ್ ಪ್ರಸಾದ್‌, ಗೋವಿಂದರಾಜು, ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT