ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ ತಾಲ್ಲೂಕು ಆಡಳಿತ ವಿರುದ್ಧ ರೈತರ ಪ್ರತಿಭಟನೆ

ಗಾಂಧಿಭವನದ ಬಳಿಯಿಂದ ಎತ್ತಿನಗಾಡಿಗಳ ಮೆರವಣಿಗೆ
Last Updated 4 ಜೂನ್ 2019, 14:39 IST
ಅಕ್ಷರ ಗಾತ್ರ

ಚನ್ನಪಟ್ಟಣ: ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಹಾಗೂ ರೈತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಗಾಂಧಿಭವನದ ಬಳಿಯಿಂದ ತಾಲ್ಲೂಕು ಕಚೇರಿಯವರೆಗೆ ಎತ್ತಿನಗಾಡಿಗಳ ಮೆರವಣಿಗೆ ನಡೆಸಿದ ರೈತರು ತಾಲ್ಲೂಕು ಕಚೇರಿಯ ಬಳಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕಂದಾಯ ಇಲಾಖೆಯಲ್ಲಿ ಪ್ರತಿನಿತ್ಯ ಜನತೆಗೆ ಕಿರುಕುಳ, ರೈತರ ದಿನನಿತ್ಯ ಅಲೆದಾಟ ತಪ್ಪಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನ ಹೆಚ್ಚಾಗಿದೆ ಎಂದು ಆರೋಪಿಸಿದರು.

ಬೆಸ್ಕಾಂನ ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ರೈತರು ಪರಿತಪಿಸುತ್ತಿದ್ದಾರೆ. ಸರ್ಕಾರ ಪ್ರತಿನಿತ್ಯ ಏಳು ಗಂಟೆ ಗುಣಮಟ್ಟದ ವಿದ್ಯುತ್ ನೀಡುವಂತೆ ಆದೇಶಿಸಿದ್ದರೂ ಅಧಿಕಾರಿಗಳು ಇದಕ್ಕೆ ಬೆಲೆ ನೀಡುತ್ತಿಲ್ಲ. ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಲು ಇಂದಿಗೂ ಸಾಧ್ಯವಾಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರೈತಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ಹದಗೆಟ್ಟಿದೆ. ರೈತರ ಕೆಲಸಗಳು ಕಾಲಮಿತಿಯಲ್ಲಿ ಆಗುತ್ತಿಲ್ಲ. ಅವರನ್ನು ಕೀಳಾಗಿ ನೋಡಲಾಗುತ್ತಿದೆ. ಪಹಣಿ ಪಡೆಯಲು, ಕೃಷಿಗೆ ಸಂಬಂಧಿಸಿದ ವಿಚಾರ ಅರಿಯಲು, ತಮ್ಮ ಜಮೀನಿನ ಬಗ್ಗೆ ಮಾಹಿತಿ ಪಡೆಯಲು, ಇತರ ಎಲ್ಲ ಕೆಲಸಗಳಿಗಾಗಿ ದಿನನಿತ್ಯ ಅಲೆಯುವಂತಾಗಿದೆ. ರೈತರ ಕಷ್ಟವನ್ನು ಅಧಿಕಾರಿಗಳು ಕೇಳುತ್ತಿಲ್ಲ’ ಎಂದು ಆರೋಪಿಸಿದರು.

ರಾಜ್ಯ ರೈತಸಂಘದ ಉಪಾಧ್ಯಕ್ಷ ಎಂ ರಾಮು ಮಾತನಾಡಿ, ‘ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ಹದಗೆಟ್ಟಿದೆ. ಇಪ್ಪತ್ತು ವರ್ಷಗಳಿಂದ ಕಣ್ವ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿಲ್ಲ. ಅನೇಕ ರೈತರು ವ್ಯವಸಾಯವನ್ನೇ ಮರೆಯುತ್ತಿದ್ದಾರೆ. ನಾಲೆ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದ್ದರೂ ಇದುವರೆಗೂ ಯಾವುದೇ ಪರಿಹಾರ ರೈತರಿಗೆ ಸಿಕ್ಕಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳ ಕೊರತೆ ಇದ್ದರೂ ಗಮನಹರಿಸುತ್ತಿಲ್ಲ. ರೈತರ ಸಾಲ ಮನ್ನಾ ಬಗ್ಗೆ ಯಾವುದೇ ಖಚಿತತೆ ಇಲ್ಲ. ಕಾಡುಪ್ರಾಣಿಗಳ ಹಾವಳಿ ನಿಯಂತ್ರಣವಾಗುತ್ತಿಲ್ಲ. ಎಲ್ಲ ಕೆರೆಗಳಿಗೂ ನೀರಾವರಿ ಯೋಜನೆ ಮೂಲಕ ನೀರುಣಿಸಬೇಕು’ ಎಂದು ಆಗ್ರಹಿಸಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಸ್ವೀಕರಿಸಿದರು.

ಹಿರಿಯ ಹೋರಾಟಗಾರ ಸಿದ್ದೇಗೌಡ, ರೈತಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ಟಿ.ರಾಮಸ್ವಾಮಿ, ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ, ಗೌರವಾಧ್ಯಕ್ಷ ತಿಮ್ಮೇಗೌಡ, ಕಾರ್ಯಾಧ್ಯಕ್ಷ ಮುನಿರಾಜು, ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ, ಹೋರಾಟಗಾರರಾದ ಬಿ.ಟಿ.ನಾಗೇಶ್, ನಾಗವಾರ ಶಂಭೂಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT