ಭಾನುವಾರ, ಆಗಸ್ಟ್ 25, 2019
24 °C

ಪಹಣಿ ಪಡೆಯಲು ರೈತರ ಹರಸಾಹಸ

Published:
Updated:
Prajavani

ಮಾಗಡಿ: ರೈತರು ತಮ್ಮ ಜಮೀನುಗಳ ಪಹಣಿ ಪಡೆಯಲು ಹರಸಾಹಸ ಪಡಬೇಕಿದೆ ಎಂದು ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ತಿಳಿಸಿದರು.

‘ಹಲವು ವರ್ಷಗಳಿಂದಲೂ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಪಹಣಿ ವಿತರಣೆ ಕೇಂದ್ರವಿದೆ. ನಿತ್ಯ ಬೆಳಿಗ್ಗೆ 9ಕ್ಕೆ ಗ್ರಾಮೀಣ ಭಾಗದಿಂದ ಬರುವ ರೈತರು ಅನ್ನ –ನೀರು ಬಿಟ್ಟುಕೊಂಡು ಇಡೀ ದಿನ ಸಾಲಿನಲ್ಲಿ ನಿಂತಿರಬೇಕು. ಮತ್ತೊಂದು ಪಹಣಿ ಕೇಂದ್ರ ತೆರೆಯುವಂತೆ ಶಾಸಕರು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಗ್ರಾಮ ಪಂಚಾಯಿ‌ತಿ ಕೇಂದ್ರಗಳಲ್ಲೂ ಪಹಣಿ ಕೊಡಲಾಗುವುದು ಎಂದು ಭರವಸೆ ನೀಡಿದ್ದ ತಾಲ್ಲೂಕು ಆಡಳಿತ ಕೊಟ್ಟ ಮಾತಿಗೆ ತಪ್ಪಿದೆ’ ಎಂದರು.‌

ಸಂಘದ ಕಾರ್ಯದರ್ಶಿ ಮಧುಗೌಡ ಮಾತನಾಡಿ, ‘ದಿನಕ್ಕೊಬ್ಬರು ತಹಶೀಲ್ದಾರರು ಬದಲಾಗುತ್ತಿದ್ದಾರೆ. ಕಚೇರಿಯಲ್ಲಿ ಕೆಲ ನೌಕರರು ಮಧ್ಯಾಹ್ನ 12 ಗಂಟೆಯಾದರೂ ಕಚೇರಿಯಲ್ಲಿ ಕಾಣಸಿಗುವುದಿಲ್ಲ. ಕೇಳಿದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೀಟಿಂಗ್‌ ಇದೆ ಹೋಗಿದ್ದಾರೆ ಎಂಬ ಸಬೂಬು ಹೇಳುತ್ತಿದ್ದಾರೆ. ಭೂಮಾಪನಾ ಮತ್ತು ಭೂಮಿ ಕೇಂದ್ರದಲ್ಲಿ ರೈತರ ಸಮಸ್ಯೆಗಳು ಬಗೆಹರಿಯುವುದಿಲ್ಲ. ಜನಸಾಮಾನ್ಯರ ಮತ್ತು ರೈತರ ಸಮಸ್ಯೆ ಚರ್ಚಿಸಲು ತಕ್ಷಣ ಸಭೆ ಕರೆಯುವಂತೆ ತಹಶೀಲ್ದಾರ್‌ ಎನ್‌.ರಮೇಶ್‌ ಅವರಿಗೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.

ರೈತ ಸಂಘದ ಕಾರ್ಯದರ್ಶಿ ಮಂಜುನಾಥ ನೆಸೆಪಾಳ್ಯ ಮಾತನಾಡಿ, ‘ನಿತ್ಯ ಸರ್ವರ್‌, ಕಂಪ್ಯೂಟರ್‌ ಸಮಸ್ಯೆ ಇದ್ದೇ ಇದೆ. ರೈತರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮುಂದಾಗುತ್ತಿಲ್ಲ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಾಲ್ಲೂಕು ಆಡಳಿತ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದರು.

Post Comments (+)